ಪಾಕ್ ಪರಮಾಪ್ತ ಚೀನಾಗೆ ವಿಶ್ವಸಂಸ್ಥೆಯಲ್ಲಿ ಖೆಡ್ಡಾ ಸಿದ್ಧಗೊಳಿಸುತ್ತಿರುವ ಭಾರತ-ಫ್ರಾನ್ಸ್!
ವಿದೇಶ
ಪಾಕ್ ಪರಮಾಪ್ತ ಚೀನಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ಪ್ರಾಬಲ್ಯ ಸಾಧಿಸಲು ಭಾರತ-ಫ್ರಾನ್ಸ್ ಖೆಡ್ಡಾ!
ಪ್ರತಿ ಬಾರಿಯೂ ಮಸೂದ್ ಅಜರ್ ನಿಷೇಧಕ್ಕೆ ಅಡ್ಡಗಾಲು ಹಾಕುತ್ತಿರುವ ಚೀನಾವನ್ನು ಅಡಕತ್ತರಿಯಲ್ಲಿ ಸಿಲುಕಿಸಲು ಈಗ ಭಾರತಕ್ಕೆ ವಿಶ್ವಸಂಸ್ಥೆಯ ಪ್ರಭಾವಿ ರಾಷ್ಟ್ರ ಫ್ರಾನ್ಸ್ ಸಾಥ್ ನೀಡಿದೆ.
ನವದೆಹಲಿ: ತನ್ನ ಸಾರ್ವಕಾಲಿಕ ಮಿತ್ರ ರಾಷ್ಟ್ರ ಪಾಕಿಸ್ತಾನದ ಭಯೋತ್ಪಾದಕರನ್ನು ವಿಶ್ವಸಂಸ್ಥೆಯಲ್ಲಿ ಸಮರ್ಥಿಸಿಕೊಳ್ಳುವ ಚೀನಾ, ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರ ಮಸೂದ್ ಅಜರ್ ಗೆ ವಿಶ್ವಸಂಸ್ಥೆಯಿಂದ ನಿಷೇಧ ವಿಧಿಸುವ ಭಾರತದ ಪ್ರಯತ್ನಕ್ಕೆ ನಿರಂತರವಾಗಿ ಅಡ್ಡಗಾಲು ಹಾಕುತ್ತಲೇ ಇದೆ. ಪುಲ್ವಾಮ ದಾಳಿಯ ನಂತರ ಚೀನಾ ತಂತ್ರಕ್ಕೆ ಭಾರತ ಹೆಣೆಯುತ್ತಿರುವ ಪ್ರತಿತಂತ್ರವೂ ಪರಿಣಾಮಕಾರಿಯಾಗಿಯೇ ಇದೆ.
ಪ್ರತಿ ಬಾರಿಯೂ ಮಸೂದ್ ಅಜರ್ ನಿಷೇಧಕ್ಕೆ ಅಡ್ಡಗಾಲು ಹಾಕುತ್ತಿರುವ ಚೀನಾವನ್ನು ಅಡಕತ್ತರಿಯಲ್ಲಿ ಸಿಲುಕಿಸಲು ಈಗ ಭಾರತಕ್ಕೆ ವಿಶ್ವಸಂಸ್ಥೆಯ ಪ್ರಭಾವಿ ರಾಷ್ಟ್ರ ಫ್ರಾನ್ಸ್ ಸಾಥ್ ನೀಡಿದೆ. ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಾಗಿರುವ ಜೈಶ್-ಇ-ಮೊಹಮ್ಮದ್ ಗೆ ವಿಶ್ವಸಂಸ್ಥೆಯ ನಿಷೇಧ ವಿಧಿಸುವುದಕ್ಕೆ ರಾಜತಾಂತ್ರಿಕವಾಗಿ ಮತ್ತಷ್ಟು ಪರಿಣಾಮಕಾರಿಯಾದ ತಂತ್ರ ರೂಪಿಸುತ್ತಿರುವ ಭಾರತ-ಫ್ರಾನ್ಸ್ ಮಸೂದ್ ಅಜರ್ ಜೊತೆಗೆ ಆತನ ಸಹೋದರ ಅಬ್ದುಲ್ ರೌಫ್ ಅಸ್ಘರ್ ಗೂ ಸಹ ವಿಶ್ವಸಂಸ್ಥೆ ನಿರ್ಬಂಧನೆ ಕುಣಿಕೆಯನ್ನು ಸಿದ್ಧಮಾಡಿವೆ.
ಈ ವರೆಗೂ ಮಸೂದ್ ಅಜರ್ ನಿರ್ಬಂಧದ ವಿಷಯವಷ್ಟೇ ಪ್ರಧಾನ ಅಂಶವಾಗಿ ಪರಿಗಣಿಸಲಾಗುತ್ತಿತ್ತು. ಆದರೆ ಈಗ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮತ್ತಷ್ಟು ಉಗ್ರರನ್ನೂ ಸೇರಿಸಿ ವಿಶ್ವಸಂಸ್ಥೆಯ 1267 ನಿಯಮದ ಪ್ರಕಾರ ನಿರ್ಬಂಧ ವಿಧಿಸಲು ಆಗ್ರಹಿಸಿದರೆ ಆಗ ಚೀನಾಗೆ ಈ ನಿರ್ಣಯವನ್ನು ಒಪ್ಪಿಕೊಳ್ಳುವ ಅನಿವಾರ್ಯ ಒತ್ತಡ ಸೃಷ್ಟಿಯಾಗಲಿದೆ.
ಮಸೂದ್ ಅಜರ್ ನ ಸಹೋದರ ಅಬ್ದುಲ್ ರೌಫ್ ಅಸ್ಘರ್ ಪಠಾಣ್ ಕೋಟ್ ದಾಳಿಯ ಪ್ರಮುಖ ಆರೋಪಿಯಾಗಿದ್ದು, ಈತನೊಂದಿಗೆ ಸೇರಿ ಭಾರತದ ಮೇಲೆ ಉಗ್ರ ದಾಳಿ ನಡೆಸುತ್ತಿರುವ ಮತ್ತಷ್ಟು ಭಯೋತ್ಪಾದಕರನ್ನೂ ವಿಶ್ವಸಂಸ್ಥೆಯ 1267 ನಿಯಮದ ಪ್ರಕಾರ ನಿರ್ಬಂಧ ವಿಧಿಸುವ ಪ್ರಸ್ತಾವನೆಯನ್ನು ಭಾರತ-ಫ್ರಾನ್ಸ್ ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳ ಮುಂದಿಡಲಿವೆ.
ಒಂದು ವೇಳೆ ಈ ಪ್ರಸ್ತಾವನೆ ಜಾರಿಯಾದಲ್ಲಿ, ಈ ವರೆಗೂ ಮಸೂದ್ ಅಜರ್ ನ ನಿರ್ಬಂಧಕ್ಕೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಕಾರಣವೊಡ್ಡಿ ಅಡ್ಡಗಾಲು ಹಾಕುತ್ತಿದ್ದ ಚೀನಾಗೆ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಇತರ ಉಗ್ರರ ವಿರುದ್ಧ ನಿರ್ಬಂಧ ಹೇರುವುದಕ್ಕೆ ಅಡ್ಡಗಾಲು ಹಾಕುವುದು ಕಷ್ಟ ಸಾಧ್ಯವಾಗಲಿದೆ. ಚೀನಾ ವಿಶ್ವಸಂಸ್ಥೆಯಲ್ಲಿ ಭಾರತ-ಫ್ರಾನ್ಸ್ ಪ್ರಸ್ತಾವನೆಗೆ ಬೆಂಬಲ ನೀಡಬೇಕಾದ ಅನಿವಾರ್ಯತೆ ಎದುರಿಸಲಿದ್ದು ಅಡಕತ್ತರಿಗೆ ಸಿಲುಕಿಕೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಗೆ ನಿರ್ಬಂಧ ವಿಧಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಾಗತಿಕ ಮಟ್ಟದಲ್ಲಿ ಚೀನಾವನ್ನು ಹೊರತುಪಡಿಸಿ ಅಮೆರಿಕ, ಫ್ರಾನ್ಸ್, ಜರ್ಮನಿ, ಯುರೋಪಿಯನ್ ರಾಷ್ಟ್ರಗಳ ಬೆಂಬಲ ಭಾರತಕ್ಕೆ ಸಿಕ್ಕಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ