ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ; ಅಧ್ಯಕ್ಷ ಟ್ರಂಪ್ ರನ್ನೇ ಟೀಕಿಸಿ, ಭಾರತದ ಕ್ಷಮೆ ಕೋರಿದ ಡೆಮಾಕ್ರಟಿಕ್ ಪಕ್ಷ!

ಭಾರತ ಮತ್ತು ಪಾಕಿಸ್ತಾನ ನಡುವಿನ ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ವಹಿಸುವ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆಯನ್ನು ಡೆಮಾಕ್ರಟಿಕ್ ಪಕ್ಷ ಟೀಕಿಸಿದ್ದು, ಈ ಕುರಿತಂತೆ ಭಾರತದ ಬಳಿ ಕ್ಷಮೆ ಕೋರುತ್ತೇವೆ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ವಹಿಸುವ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆಯನ್ನು ಡೆಮಾಕ್ರಟಿಕ್ ಪಕ್ಷ ಟೀಕಿಸಿದ್ದು, ಈ ಕುರಿತಂತೆ ಭಾರತದ ಬಳಿ ಕ್ಷಮೆ ಕೋರುತ್ತೇವೆ ಎಂದು ಹೇಳಿದೆ.
ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಡೆಮಾಕ್ರೆಟಿಕ್‌ ಪಕ್ಷದ ಸಂಸದ ಬ್ರಾಡ್‌ ಶೆರ್ ಮ್ಯಾನ್‌ ಅವರು, ಕಾಶ್ಮೀರ ಬಿಕ್ಕಟ್ಟು ಕುರಿತು ಟ್ರಂಪ್‌ ಅವರ ಬಾಲಿಶ ಹಾಗೂ ಮುಜುಗರದ ಹೇಳಿಕೆ ಕುರಿತು ನಾನೇ ಖುದ್ದು ಭಾರತೀಯ ರಾಯಭಾರಿ ಹರ್ಷವರ್ಧನ್‌ ಶ್ರಿಂಗ್ಲಾ ಅವರಿಗೆ ಕರೆ ಮಾಡಿ ಕ್ಷಮೆಯಾಚಿಸಿದ್ದೇನೆ. ಭಾರತದ ನೀತಿಗಳ ಬಗ್ಗೆ ತಿಳಿದಿರುವ ಯಾರಿಗಾದರೂ ಕಾಶ್ಮೀರದಲ್ಲಿ ಮೂರನೇ ವ್ಯಕ್ತಿ ಮೂಗುತೂರಿಸುವುದು ಭಾರತಕ್ಕೆ ಖಡಾಖಂಡಿತ ಇಷ್ಟವಿಲ್ಲ ಎಂಬ ಅರಿವು ಇರುತ್ತದೆ ಎಂದು  ಹೇಳಿದ್ದಾರೆ. 
ಮಧ್ಯಸ್ಥಿಕೆ ಪ್ರಸ್ತಾಪದ ಬೆನ್ನಲ್ಲೇ ಭುಗಿಲೆದ್ದ ಭಾರತದ ಆಕ್ರೋಶ, ಡ್ಯಾಮೇಜ್‌ ಕಂಟ್ರೋಲ್‌ಗೆ ಅಮೆರಿಕ ಪ್ರಯತ್ನ
ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಸೋಮವಾರ ತಮ್ಮನ್ನು ಭೇಟಿ ಮಾಡಿದ್ದ ವೇಳೆ, 'ಜಿ-20 ಶೃಂಗದಲಗ್ಲಿ ಭೇಟಿಯಾದಾಗ ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ನನಗೆ ಮನವಿ ಮಾಡಿದ್ದರು,' ಎಂದು ಹೇಳಿದ್ದರು. ಈ ಹೇಳಿಕೆಯಿಂದ ಭಾರತ-ಅಮೆರಿಕ ನಡುವಿನ ದ್ವಿಪಕ್ಷೀಯ ಬಾಂಧವ್ಯಕ್ಕೆ ತೊಂದರೆ ಎದುರಾಗಲಿದೆ ಎಂಬ ಸುಳಿವು ಸಿಗುತ್ತಿದ್ದಂತೆ ಎಚ್ಚೆತ್ತ ಅಮೆರಿಕವು ಡ್ಯಾಮೇಜ್‌ ಕಂಟ್ರೋಲ್‌ ಪ್ರಯತ್ನ ಆರಂಭಿಸಿದೆ.
'ಭಾರತ-ಪಾಕ್‌ಗಳು ಪರಸ್ಪರ ಮಾತುಕತೆ ಮೂಲಕ ಕಾಶ್ಮೀರ ಬಿಕಟ್ಟು ಪರಿಹರಿಸಿಕೊಳ್ಳುವುದನ್ನು ಅಮೆರಿಕ ಯಾವತ್ತಿಗೂ ಸ್ವಾಗತಿಸುತ್ತದೆ. ಆ ನಿಟ್ಟಿನಲ್ಲಿ ಅಗತ್ಯವಾದ ನೆರವು, ಸಲಹೆಯನ್ನು ನೀಡಲು ನಾವು ಸಿದ್ಧರಿದ್ದೇವೆ. ಕಾಶ್ಮೀರ ಬಿಕ್ಕಟ್ಟು ಭಾರತ-ಪಾಕ್‌ ನಡುವಿನ ದ್ವಿಪಕ್ಷೀಯ ವಿಚಾರ,' ಎಂದು ಟ್ರಂಪ್‌ ಸರ್ಕಾರದ ವಕ್ತಾರೆ ಮಾರ್ಗನ್‌ ಒರ್ಟಾಗಸ್‌ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮೋದಿ ಮತ್ತು ಟ್ರಂಪ್‌ ನಡುವಿನ ಮಾತುಕತೆ ವೇಳೆ ಮಧ್ಯಸ್ಥಿಕೆಗಾಗಿ ಮೋದಿಯವರು ಮನವಿ ಮಾಡಿರುವ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ಶ್ವೇತಭವನದ ಮೂಲಗಳೂ ಖಚಿತಪಡಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com