ಇಸ್ಲಾಮಾಬಾದ್: ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಭಾರತ ಸೇರಿ ಬಲಿಷ್ಠ ರಾಷ್ಟ್ರಗಳು ಪಟ್ಟು ಹಿಡಿದಿದ್ದು ಇದರಿಂದ ಕಂಗಲಾಗಿರುವ ಪಾಕಿಸ್ತಾನ ಕೊನೆಗೂ ಉಗ್ರ ಮಸೂದ್ ತನ್ನ ರಾಷ್ಟ್ರದಲ್ಲೇ ಇರುವುದಾಗಿ ಒಪ್ಪಿಕೊಂಡಿದೆ.
ಜೆಇಎಂ ಮುಖ್ಯಸ್ಥ ಪಾಕಿಸ್ತಾನದಲ್ಲೇ ವಾಸವಾಗಿದ್ದಾನೆ. ಆದರೆ ಆತನ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಮಸೂದ್ ಮನೆಯಿಂದ ಹೊರ ಬರುವ ಸ್ಥಿತಿಯಲ್ಲೂ ಇಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಹೇಳಿದ್ದಾರೆ.
ಇನ್ನು ಮಸೂದ್ ನನ್ನು ಬಂಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಖುರೇಶಿ, ಆತ ಉಗ್ರ ಎಂಬುದನ್ನು ಪಾಕಿಸ್ತಾನ ನ್ಯಾಯಾಲಯದಲ್ಲಿ ಸಾಬೀತು ಮಾಡಲು ಭಾರತ ನಮಗೆ ಸರಿಯಾದ ಸಾಕ್ಷ್ಯ ಒದಗಿಸಬೇಕು. ಹಾಗಿದ್ದರೆ ಮಾತ್ರ ನಾವು ಅವರನ್ನು ಬಂಧಿಸಲು ಸಾಧ್ಯ ಎಂದು ಹೇಳಿದ್ದಾರೆ.
ಮಸೂದ್ ನನ್ನು ಜಾಗತಿಕ ಉಗ್ರನೆಂದು ಘೋಷಿಸಲು ಅಮೆರಿಕ, ಫ್ರಾನ್ಸ್, ಬ್ರಿಟನ್ ಸೇರಿದಂತೆ ಹಲವು ಬಲಿಷ್ಠ ರಾಷ್ಟ್ರಗಳು ಪ್ರಯತ್ನಿಸುತ್ತಿದ್ದು ಇದಕ್ಕೆ ಚೀನಾ ಮಾತ್ರ ಅಡ್ಡಗಾಲು ಹಾಕುತ್ತಿದೆ.