ತಾಲಿಬಾನ್‌ನೊಂದಿಗಿನ ಶಾಂತಿ ಒಪ್ಪಂದ ರದ್ದುಪಡಿಸಿದ ಡೊನಾಲ್ಡ್ ಟ್ರಂಪ್

ತಾಲಿಬಾನ್ ನೊಂದಿಗೆ ಶಾಂತಿ ಒಪ್ಪಂದವನ್ನು ರದ್ದಪಡಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. 
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ತಾಲಿಬಾನ್ ನೊಂದಿಗೆ ಶಾಂತಿ ಒಪ್ಪಂದವನ್ನು ರದ್ದಪಡಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. 

ಭಾನುವಾರ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಮತ್ತು ಹಿರಿಯ ತಾಲಿಬಾನ್ ನಾಯಕರನ್ನು ಭೇಟಿಯಾಗಲು ಸಿದ್ಧತೆ ನಡೆಸಿದ್ದೇನೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ಆದರೆ ಕಾಬೂಲ್ ನಲ್ಲಿ ಇತ್ತೀಚೆಗೆ ನಡೆದ ದಾಳಿಯಲ್ಲಿ ಅಮೆರಿಕ ಯೋಧನೊಬ್ಬ ಸಾವನ್ನಪ್ಪಿದ್ದು, ಈ ದಾಳಿಯ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡ ಬಳಿಕ ಸೇನೆಯನ್ನು ಹಿಂಪಡೆಯುವ ಒಪ್ಪಂದ (ಕ್ಯಾಂಪ್ ಡೇವಿಡ್) ವನ್ನು ಅಮೆರಿಕ ರದ್ದುಪಡಿಸಿದೆ ಎಂದು ಬಿಬಿಸಿ ನ್ಯೂಸ್ ವರದಿ ಮಾಡಿದೆ. 

ಅಮೆರಿಕದ ಸಂಧಾನಕಾರ ಜಲ್ಮೇ ಖಲೀಲ್ ಜಾದ್ ಸೋಮವಾರ ತಾಲಿಬಾನ್ ಜೊತೆ ಶಾಂತಿ ಒಪ್ಪಂದವನ್ನು ತಾತ್ವಿಕವಾಗಿ ಘೋಷಿಸಿದ್ದರು. ಗಲ್ಫ್ ರಾಜ್ಯ ಕತಾರ್ ನ ರಾಜಧಾನಿಯಾದ ದೋಹಾದಲ್ಲಿ ನಡೆದ ಅಮೆರಿಕ ಮತ್ತು ತಾಲಿಬಾನ್ ಪ್ರತಿನಿಧಿಗಳ ನಡುವೆ 9 ಸುತ್ತಿನ ಮಾತುಕತೆಯ ನಂತರ ಈ ಘೋಷಣೆ ಹೊರಡಿಸಲಾಗಿತ್ತು. ದುರದೃಷ್ಟವಶಾತ್, ತಾಲಿಬಾನ್ ಕಾಬೂಲ್ ನಲ್ಲಿ ನಡೆಸಿದ ದಾಳಿಯಲ್ಲಿ ನಮ್ಮ ಓರ್ವ ಮಹಾನ್ ಸೈನಿಕರನ್ನು ಕೊಲ್ಲಲಾಗಿದೆ, ಈ ದಾಳಿಯ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡಿದೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. 

ತಾನು ತಕ್ಷಣ ಸಭೆ ಮತ್ತು ಶಾಂತಿ ಮಾತುಕತೆಯನ್ನು ಹಿಂಪಡೆದಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಉದ್ದೇಶಿತ ಒಪ್ಪಂದದ ಪ್ರಕಾರ, ಅಮೆರಿಕ 20 ವಾರಗಳಲ್ಲಿ 5,400 ಸೈನಿಕರನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ಕರೆಸಿಕೊಳ್ಳಲಿದೆ. ಆದರೆ ಇದಕ್ಕೆ ಟ್ರಂಪ್ ಅವರ ಅಂತಿಮ ಅನುಮೋದನೆ ಸಿಕ್ಕಿಲ್ಲ ಎಂದು ಖಾಲಿದ್ ಜಾದ್ ತಿಳಿಸಿದ್ದಾರೆ. ಗುರುವಾರ, ತಾಲಿಬಾನ್ ನಡೆಸಿದ ಕಾಬೂಲ್ ಕಾರ್ ಬಾಂಬ್ ದಾಳಿಯಲ್ಲಿ ಅಮೆರಿಕ ಸೈನಿಕ ಸೇರಿದಂತೆ 12 ಜನರು ಸಾವನ್ನಪ್ಪಿದ್ದರು. 

ದೇಶದಲ್ಲಿ ನ್ಯಾಟೋ ನೇತೃತ್ವದ ಮಿಷನ್ ನೊಂದಿಗೆ ಸೇವೆ ಸಲ್ಲಿಸುತ್ತಿದ್ದ ರೊಮೇನಿಯನ್ ಸೈನಿಕ ಕೂಡ ಈ ದಾಳಿಯಲ್ಲಿ ಹುತಾತ್ಮನಾಗಿದ್ದ. ತಾಲಿಬಾನ್ ನೊಂದಿಗಿನ ಅಮೆರಿಕದ ಮಾತುಕತೆಗಳು ಅಫ್ಘಾನಿಸ್ತಾನದಲ್ಲಿ ದೈನಂದಿನ ಹಿಂಸಾಚಾರ ಮತ್ತು ನಾಗರಿಕರ ಮೇಲಿನ ನಾಶ ನಷ್ಟವನ್ನು ಕೊನೆಗೊಳಿಸುವುದಿಲ್ಲ ಎಂಬ ಆತಂಕಗಳನ್ನು ಈ ದಾಳಿ ಮತ್ತೆ ಎತ್ತಿ ತೋರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com