ಅಲ್ ಖೈದಾ ಸಂಘಟನೆಗಳಿಗೆ ತರಬೇತಿ ನೀಡಿದ್ದು ನಾವೇ: ಪಾಕ್ ಪ್ರಧಾನಿ ಇಮ್ರಾನ್ ಖಾನ್ 

ಆಘ್ಘಾನಿಸ್ತಾನದಲ್ಲಿ ಯುದ್ಧ ಮಾಡಲು ತಮ್ಮ ದೇಶದ ಸೇನೆ ಮತ್ತು ಪತ್ತೇದಾರಿ ಗುಪ್ತಚರ ಆಂತರಿಕ ಇಲಾಖೆಗಳು ಅಲ್ ಖೈದಾ ಮತ್ತು ಇತರ ಭಯೋತ್ಪಾದಕ ಸಂಘಟನೆಗಳಿಗೆ ತರಬೇತಿ ನೀಡಿದ್ದವು. 
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಮ್ರಾನ್ ಖಾನ್-ಡೊನಾಲ್ಡ್ ಟ್ರಂಪ್
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಮ್ರಾನ್ ಖಾನ್-ಡೊನಾಲ್ಡ್ ಟ್ರಂಪ್
Updated on

ನ್ಯೂಯಾರ್ಕ್: ಆಘ್ಘಾನಿಸ್ತಾನದ ಮೇಲೆ ಯುದ್ಧ ಸಾರಲು ತಮ್ಮ ದೇಶದ ಸೇನೆ ಮತ್ತು ಪತ್ತೇದಾರಿ ಗುಪ್ತಚರ ಆಂತರಿಕ ಇಲಾಖೆ(ಐಎಸ್ಐ) ಅಲ್ ಖೈದಾ ಮತ್ತು ಇತರ ಭಯೋತ್ಪಾದಕ ಸಂಘಟನೆಗಳಿಗೆ ತರಬೇತಿ ನೀಡಿದ್ದವು, ಹೀಗಾಗಿ ಉಗ್ರಗಾಮಿ ಸಂಘಟನೆಗಳೊಂದಿಗೆ ಸೇನೆ ಯಾವಾಗಲೂ ಸಂಪರ್ಕ ಹೊಂದಿತ್ತು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಪ್ಪೊಪ್ಪಿಕೊಂಡಿದ್ದಾರೆ.

 
ನ್ಯೂಯಾರ್ಕ್ ನಲ್ಲಿ ನಿನ್ನೆ ವಿದೇಶಿ ಸಂಪರ್ಕಗಳ ಥಿಂಕ್ ಟಾಂಕ್ (ಸಿಎಫ್ಆರ್) ಮಂಡಳಿ ಸಭೆಯಲ್ಲಿ ಮಾತನಾಡಿದ ಇಮ್ರಾನ್ ಖಾನ್, ಒಸಾಮಾ ಬಿನ್ ಲಾಡನ್ ಪಾಕಿಸ್ತಾನದ ಅಬ್ಬೊಟ್ಟಾಬಾದ್ ನಲ್ಲಿ ಹೇಗೆ ವಾಸಿಸುತ್ತಿದ್ದ ಎಂಬ ಬಗ್ಗೆ ತನಿಖೆ ನಡೆಸಿದ್ದೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದರು. ಪಾಕಿಸ್ತಾನ ಸೇನೆ ಮತ್ತು ಐಎಸ್ಐ, ಅಲ್ ಖೈದಾ ಸಂಘಟನೆಗೆ ಆಫ್ಘಾನಿಸ್ತಾನದಲ್ಲಿ ಯುದ್ಧ ಮಾಡಲು ಪಾಕಿಸ್ತಾನದಲ್ಲಿಯೇ ತರಬೇತಿ ನೀಡಲಾಯಿತು. ಹೀಗಾಗಿ ಸಹಜವಾಗಿ ಅವುಗಳ ಮಧ್ಯೆ ಸಂಪರ್ಕಗಳಿದ್ದವು. ಯಾವಾಗ ನಾವು ಈ ಉಗ್ರಗಾಮಿ ಸಂಘಟನೆಗಳ ವಿರುದ್ಧ ನಿಂತೆವೋ ಆಗ ಪ್ರತಿಯೊಬ್ಬರೂ ನಮ್ಮನ್ನು ಬೆಂಬಲಿಸಲಿಲ್ಲ. ಸೇನೆಯೊಳಗೆ ಸಹ ಭಿನ್ನಾಭಿಪ್ರಾಯ ಕೇಳಿಬಂತು. ಹೀಗಾಗಿ ಪಾಕಿಸ್ತಾನದೊಳಗೆ ಆಂತರಿಕ ಕಲಹಗಳು ನಡೆದವು ಎಂದು ಹೇಳಿದ್ದಾರೆ.


ಬಿನ್ ಲಾಡೆನ್ ಪಾಕಿಸ್ತಾನದಲ್ಲಿದ್ದಾನೆ ಎಂದು ಪಾಕಿಸ್ತಾನ ಸೇನೆಗೆ ತಿಳಿದಿಲ್ಲ. ನನಗೆ ತಿಳಿದಿರುವ ಪ್ರಕಾರ ಪಾಕಿಸ್ತಾನ ಸೇನೆ, ಐಎಸ್ಐ ಮುಖ್ಯಸ್ಥರಿಗೆ ಅಬ್ಬೊಟ್ಟಾಬಾದ್ ಬಗ್ಗೆ ಮಾಹಿತಿ ಇರಲಿಲ್ಲ. ಒಂದು ವೇಳೆ ಇದ್ದಿದ್ದರೂ ಅದು ಕೆಳ ಮಟ್ಟಗಳಲ್ಲಾಗಿತ್ತು ಎಂದು ಅಮೆರಿಕಾ ಮಾಜಿ ಅಧ್ಯಕ್ಷ  ಬರಾಕ್ ಒಬಾಮ ನೀಡಿದ್ದ ಹೇಳಿಕೆಯನ್ನು ಇಮ್ರಾನ್ ಖಾನ್ ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು. 


ತಾವು ಕಂಡು ವ್ಯವಹರಿಸಿದ ದೇಶಗಳಲ್ಲಿ ಪಾಕಿಸ್ತಾನ ಅತ್ಯಂತ ಅಪಾಯಕಾರಿ ಎಂಬ ಅಮೆರಿಕಾ ರಕ್ಷಣಾ ಇಲಾಖೆ ಮಾಜಿ ಕಾರ್ಯದರ್ಶಿ ಜೇಮ್ಸ್ ಮಟ್ಟಿಸ್ ಹೇಳಿಕೆಗೆ ಪಾಕಿಸ್ತಾನ ಉಗ್ರಗಾಮಿ ದೇಶವಾಗಿ ಏಕೆ ಮಾರ್ಪಾಡಾಯಿತು ಎಂದು ಜೇಮ್ಸ್ ಮಟ್ಟಿಸ್ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ನನಗನಿಸುವುದಿಲ್ಲ ಎಂದರು.


9/11ರ ಭಯೋತ್ಪಾದಕ ದಾಳಿ ನಂತರ ಭಯೋತ್ಪಾದನೆ ವಿರುದ್ಧ ಅಮೆರಿಕಾ ಜೊತೆ ಸೇರಿ ಪಾಕಿಸ್ತಾನ ಬಹಳ ದೊಡ್ಡ ತಪ್ಪು ಮಾಡಿತು. 70 ಸಾವಿರ ಪಾಕಿಸ್ತಾನಿಯರು ಯುದ್ಧದಲ್ಲಿ ಅಸುನೀಗಿದರು. ನಮಗೆ 150 ಬಿಲಿಯನ್ ನಿಂದ 200 ಬಿಲಿಯನ್ ಗಳಷ್ಟು ಆರ್ಥಿಕ ನಷ್ಟವಾಯಿತು ಎಂದು ಕೆಲವು ಆರ್ಥಿಕ ತಜ್ಞರು ಹೇಳುತ್ತಾರೆ. ಇಷ್ಟೆಲ್ಲಾ ಆದ ಮೇಲೆಯೂ ಆಫ್ಘಾನಿಸ್ತಾನ ವಿರುದ್ಧ ಅಮೆರಿಕಾ ಯುದ್ಧದಲ್ಲಿ ಸೋತಿದ್ದಕ್ಕೆ ಪಾಕಿಸ್ತಾನವನ್ನು ದೂಷಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು. 

1980ರ ದಶಕದಲ್ಲಿ ಆಫ್ಘಾನಿಸ್ತಾನದಲ್ಲಿ ಸೋವಿಯತ್ ಪ್ರತಿರೋಧಕ್ಕೆ ಹೋರಾಡಲು ತರಬೇತಿ ಪಡೆದ ಸಂಘಟನೆಗಳನ್ನು ಅಮೆರಿಕಾ ಭಯೋತ್ಪಾದಕರೆಂದು ಬಿಂಬಿಸಿತು. ಬಂಡುಕೋರ ಗುಂಪುಗಳಿಗೆ ವಿದೇಶಿ ನೆಲದಲ್ಲಿ ಯುದ್ಧ ಮಾಡುವುದು ಜಿಹಾದ್ ಎಂದು ಉಪದೇಶ ಮಾಡಲಾಯಿತು. ಅಮೆರಿಕಾ ಆಫ್ಘಾನಿಸ್ತಾನದ ಮೇಲೆ ದಾಳಿ ಮಾಡಿದಾಗ ಅದನ್ನು ಭಯೋತ್ಪಾದನೆ ಎಂದು ಕರೆಯಲಾಯಿತು ಎಂದರು.


ಚೀನಾ ದೇಶದೊಂದಿಗೆ ಆರ್ಥಿಕ ಸಂಬಂಧವನ್ನು ಹೇಗೆ ಸಮನ್ವಯಗೊಳಿಸುತ್ತೀರಿ ಎಂದು ಕೇಳಿದ್ದಕ್ಕೆ, ಚೀನಾದ ಜೊತೆಗೆ ನಾವು ವಿಶಿಷ್ಠ ಸಂಬಂಧವನ್ನು ಹೊಂದಿದ್ದೇವೆ. ಇಂತಹ ವಿಚಾರಗಳನ್ನೆಲ್ಲಾ ಅವರ ಜೊತೆ ನಾವು ಖಾಸಗಿಯಾಗಿ ಮಾತನಾಡುತ್ತೇವೆ. ಸಾರ್ವಜನಿಕ ಹೇಳಿಕೆಗಳನ್ನು ನೀಡುವುದಿಲ್ಲ. ಅಂತಹ ಸಂಬಂಧ ನಮ್ಮಿಬ್ಬರ ಮಧ್ಯೆ ಇದೆ ಎಂದರು.


ಪಾಕಿಸ್ತಾನದಲ್ಲಿ ಚೀನಾ ಹೂಡಿಕೆ ಮಾಡಿದರೆ ದೇಶದ ಸ್ವಾಯತ್ತತೆಗೆ ಧಕ್ಕೆಯುಂಟಾಗುತ್ತದೆ ಎಂಬ ಮಾತುಗಳನ್ನು ಅವರು ಒಪ್ಪಲಿಲ್ಲ. ನಮ್ಮ ವಿದೇಶಾಂಗ ನೀತಿ, ದೇಶಿ ನೀತಿಯಲ್ಲಿ ಚೀನಾ ಯಾವತ್ತಿಗೂ ಮಧ್ಯಪ್ರವೇಶಿಸಿಲ್ಲ. ಚೀನಾದಿಂದ ಕಲಿಯಬೇಕಾದ್ದು ಸಾಕಷ್ಟಿದೆ. ವ್ಯಾಪಾರ, ಸಂಪತ್ತು ಸೃಷ್ಟಿ, ಜನರ ಜೀವನ ಮಟ್ಟ ಸುಧಾರಿಸುವತ್ತ ಚೀನಾ ಪ್ರಮುಖವಾಗಿ ಗಮನ ಹರಿಸುತ್ತದೆ ಎಂದು ಇಮ್ರಾನ್ ಖಾನ್ ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com