ದ.ಆಫ್ರಿಕಾ: ಭಾರತೀಯ ಮೂಲದ ವೈರಾಣು ತಜ್ಞೆ ಗೀತಾ ರಾಮ್ ಜೀ ಕೊರೋನಾಗೆ ಬಲಿ
ಜೊಹಾನ್ಸ್‌ಬರ್ಗ್: ಮಹಾಮಾರಿ ಕೊರೋನಾ ವೈರಾಣು ಸೋಂಕಿಗೆ ತುತ್ತಾಗಿ ಭಾರತೀಯ ಮೂಲದ ವೈರಾಲಜಿಸ್ಟ್ ಗೀತಾ ರಾಮ್ ಜಿ (64) ದಕ್ಷಿಣ ಆಫ್ರಿಕಾದಲ್ಲಿ ಮೃತಪಟ್ಟಿದ್ದಾರೆ.
ಆಕೆಯ ಸಾವಿನೊಂದಿಗೆ, ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ ೫ ಕ್ಕೆ ತಲುಪಿದೆ. ಈ ವಿಷಯವನ್ನು ದಕ್ಷಿಣ ಆಫ್ರಿಕಾದ ವೈದ್ಯಕೀಯ ಸಂಶೋಧನಾ ಮಂಡಳಿ (ಎಸ್‌ಎಂಆರ್‌ಸಿ) ಅಧ್ಯಕ್ಷ ಮತ್ತು ಸಿಇಓ ಗ್ಲೆಂಡಾ ಗ್ರೇ ದೃಢಪಡಿಸಿದ್ದಾರೆ.
ಲಂಡನ್‌ನಿಂದ ಹಿಂದಿರುಗಿದ ಗೀತಾ ಕೋವಿಡ್ -೧೯ ಸಂಬಂಧಿತ ರೋಗ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ವಿಫಲಗೊಂಡು ಮೃತಪಟ್ಟರೆಂದು ಪ್ರಕಟಿಸಲಾಗಿದೆ. ಗೀತಾ ಅವರ ಸಾವು ದೇಶದಲ್ಲಿ ಅತಿ ದೊಡ್ಡ ಶೂನ್ಯ ಸೃಷ್ಟಿಸಿದ್ದು, ಈ ಕೊರತೆಯನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ .. ಇದು ತೀವ್ರ ವಿಷಾದ ಮೂಡಿಸಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಭಾರತೀಯ ಮೂಲದ ಗೀತಾ ರಾಮ್‌ಜಿ ದಕ್ಷಿಣ ಆಫ್ರಿಕಾದ ಕ್ಲಿನಿಕಲ್ ಟ್ರಯಲ್ಸ್ ವಿಭಾಗದ ಪ್ರಧಾನ ವಿಚಾರಣಾಧಿಕಾರಿಯಾಗಿದ್ದರು. ಎಸ್‌ಎಎಂಆರ್‌ಸಿ ಎಚ್‌ಐವಿ ತಡೆಗಟ್ಟುವ ಸಂಶೋಧನಾ ಘಟಕದ ನಿರ್ದೇಶಕಿಯಾಗಿ ಡರ್ಬನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಈ ನಿಟ್ಟಿನಲ್ಲಿ ಎಚ್‌ಐವಿ ಪೀಡಿತ ಮಹಿಳೆಯರ ಆರೋಗ್ಯ ಸುಧಾರಿಸಲು ಗೀತಾ ಅನೇಕ ಸಂಶೋಧನೆಗಳನ್ನು ನಡೆಸಿದ್ದರು. ಗೀತಾ ರಾಮ್ ಜೀ ಅವರ ಸೇವೆಯನ್ನು ಪರಿಗಣಿಸಿ ಯುರೋಪಿಯನ್ ಡೆವಲಪ್‌ಮೆಂಟಲ್ ಕ್ಲಿನಿಕಲ್ ಟ್ರಯಲ್ಸ್ ಪಾರ್ಟ್‌ನರ್‌ಶಿಪ್ ಸಂಸ್ಥೆ ಅತ್ಯುತ್ತಮ ಮಹಿಳಾ ವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಿತ್ತು. ದಕ್ಷಿಣ ಆಫ್ರಿಕಾದಲ್ಲಿ ವಾಸವಾಗಿದ್ದ ಭಾರತೀಯ ಮೂಲದ ಫಾರ್ಮಾಸಿಸ್ಟ್ ಪ್ರವೀಣ್ ರಾಮ್ ಜೀ ಅವರನ್ನು ವಿವಾಹವಾಗಿದ್ದರು. ಕೊರೊನಾ ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿರುವ ಕಾರಣ ಗೀತಾ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಕೆಲವೇ ಮಂದಿ ಸ್ನೇಹಿತರು, ಕುಟುಂಬ ಸದಸ್ಯ ನಡುವೆ ನಡೆಯಿತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಈವರೆಗೆ ಐವರು ಮಾರಕಸೋಂಕಿನಿಂದ ಸಾವನ್ನಪ್ಪಿದ್ದಾರೆ ... ಸುಮಾರು ೧,೩೫೦ ಜನರು ಸೋಂಕಿಗೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ದೇಶದ ಅಧ್ಯಕ್ಷ ಸಿರಿಲ್ ರಾಮಾ ಫೋಸಾ ದಕ್ಷಿಣ ಅಫ್ರಿಕಾದ್ಯಂತ ೨೧ ದಿನಗಳ ಲಾಕ್ ಡೌನ್ ಘೋಷಿಸಿದ್ದಾರೆ. ಕೋವಿಡ್ -೧೯ ಬೆಳವಣಿಗೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸುಮಾರು ೧೦ ಸಾವಿರ ತಂಡಗಳು ದೇಶದ ಮನೆಮನೆಗೆ ತೆರಳಿ ಜಾಗೃತಿಮೂಡಿಸುತ್ತಿವೆ. ದೇಶದಲ್ಲಿ ಕೊರೊನಾ ಸಂತ್ರಸ್ತರ ಸಂಖ್ಯೆ ಹೆಚ್ಚುತ್ತಲೇ ಹಿನ್ನಲೆಯಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅಧ್ಯಕ್ಷ ಸಿರಿಲ್, ಜನರು ಲಾಕ್‌ಡೌನ್ ನಿರ್ಬಂಧಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.. ಇದರಿಂದ ವಿಪತ್ತಿನ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ