ಬ್ರುಸೆಲ್ಸ್: ಕೊರೋನಾ ವೈರಸ್ ಚಿಕಿತ್ಸೆಗೆ ವೈದ್ಯಕೀಯ ಸಾಮಾಗ್ರಿಗಳ ಕೊರೆತೆ ವಿಶ್ವದೆಲ್ಲೆಡೆ ಎದುರಾಗಿದ್ದು, ವೈರಸ್ ನಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಕೊರೋನಾದಿಂದ ಬಳಲುತ್ತಿದ್ದ ಯುವಕರಿಗಾಗಿ ವೆಂಟಿಲೇಟರ್ ಬಿಟ್ಟುಕೊಂಡು ಪ್ರಾಣ ಬಿಟ್ಟು ಅಪೂರ್ವ ತ್ಯಾಗ ಮೆರೆದಿರುವ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ.
ಆಸ್ಪತ್ರೆಗೆ ದಾಖಲಾಗಿದ್ದ90 ವರ್ಷದ ವೃದ್ಧೆಯೊಬ್ಬರು, ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಆಕೆಗೆ ವೆಂಟಿಲೇಟರ್ ಅಳವಡಿಸಲು ಮುಂದಾಗಿದ್ದಾರೆ. ಇದನ್ನು ಕಂಡ ವೃದ್ದೆ ನನಗೆ ವೆಂಟಿಲೇಟರ್ ಬಳಸುವುದು ಬೇಡ. ನಾನು ಈಗಾಗಲೇ ಅತ್ಯುತ್ತಮ ಜೀವನ ಅನುಭವಿಸಿದ್ದೇನೆ. ದೇಶದ ಯುವ ಕೊರೋನಾ ಪೀಡಿತರಿಗೆ ವೆಂಟಿಲೇಟರ್ ಬಳಸಿ ಎಂದು ಹೇಳಿದ್ದಾರೆ.
ನನಗೆ ಕೃತಕ ಉಸಿರಾಟ ಕಲ್ಪಿಸುವ ವೆಂಟಿಲೇಟರ್ ಬಳಕೆ ಬೇಡ. ನನ್ನ ಬದಲಿಗೆ ಯುವ ಕೊರೋನಾ ರೋಗಿಗಳಿಗೆ ಬಳಕೆ ಮಾಡಿ ಎಂದು ವೈದ್ಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದಾದ ಕೆಲವೇ ಗಂಟೆಗಳ ಬಳಿಕ ಅಜ್ಜಿ ಕೊನೆಯುಸಿರೆಳೆದಿದ್ದಾರೆ. ಅಜ್ಜಿಯ ಈ ಅಪೂರ್ವ ತ್ಯಾಗಕ್ಕೆ ವಿಶ್ವದಾದ್ಯಂತ ಭಾರೀ ಪ್ರಶಂಸೆಗಳು ವ್ಯಕ್ತವಾಗತೊಡಗಿವೆ.
Advertisement