ಸದ್ಯದ ಪರಿಸ್ಥಿತಿಯಲ್ಲಿ ಭಾರತದೊಂದಿಗೆ ಮಾತುಕತೆ ಸಾಧ್ಯವಿಲ್ಲ: ಪಾಕಿಸ್ತಾನ ವಿದೇಶಾಂಗ ಸಚಿವ 

ಸದ್ಯದ ಪರಿಸ್ಥಿತಿಯಲ್ಲಿ ಭಾರತದೊಂದಿಗೆ ರಾಜತಾಂತ್ರಿಕ ಮಾತುಕತೆ ಸಾಧ್ಯವಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಷಿ ಹೇಳಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.
ಶಾ ಮಹಮ್ಮೂದ್ ಖುರೇಷಿ
ಶಾ ಮಹಮ್ಮೂದ್ ಖುರೇಷಿ

ಇಸ್ಲಾಮಾಬಾದ್: ಸದ್ಯದ ಪರಿಸ್ಥಿತಿಯಲ್ಲಿ ಭಾರತದೊಂದಿಗೆ ರಾಜತಾಂತ್ರಿಕ ಮಾತುಕತೆ ಸಾಧ್ಯವಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಷಿ ಹೇಳಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

ಪಾಕಿಸ್ತಾನದೊಂದಿಗೆ ಮಾತುಕತೆ ಮತ್ತು ಇನ್ನೊಂದೆಡೆ ಗಡಿಭಾಗದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಒಟ್ಟೊಟ್ಟಿಗೆ ಹೋಗಲು ಸಾಧ್ಯವಿಲ್ಲ, ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು ತಾಳಲೇಬೇಕು ಎಂದು ಭಾರತ ಈಗಾಗಲೇ ತನ್ನ ಸ್ಪಷ್ಟ ನಿಲುವನ್ನು ತಿಳಿಸಿದೆ.

ಹಿಂಬಾಗಿಲಿನಿಂದ ಅಥವಾ ರಾಜತಾಂತ್ರಿಕ ಮಟ್ಟದ ಮಾತುಕತೆ ಭಾರತದ ಜೊತೆಗೆ ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಮಾತುಕತೆಗೆ ಸದ್ಯ ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು ಖುರೇಷಿ ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ. ಅವರು ನಿನ್ನೆ ತಮ್ಮ ತಾಯ್ನಾಡು ಮುಲ್ತಾನ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಈ ವಿಷಯ ತಿಳಿಸಿದ್ದಾರೆ.

ಪಠಾಣ್ ಕೋಟ್ ವಾಯುನೆಲೆ ಮೇಲೆ 2016ರಲ್ಲಿ ಉಗ್ರರ ದಾಳಿ ನಂತರ ಭಾರತ-ಪಾಕಿಸ್ತಾನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ನಂತರ ಉರಿಯ ಭಾರತೀಯ ಸೇನೆಯ ಶಿಬಿರ ಮೇಲೆ ಸಹ ದಾಳಿ ನಡೆದಿತ್ತು. ಅದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಯಿತು. 

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಕಳೆದ ವರ್ಷ ಫೆಬ್ರವರಿ 26ರಂದು ಭಾರತ, ಪಾಕಿಸ್ತಾನದ ಒಳಗೆ ಇರುವ ಜೈಶ್ ಇ ಮೊಹಮ್ಮದ್ ಉಗ್ರಗಾಮಿ ಸಂಘಟನೆ ಮೇಲೆ ವಾಯು ದಾಳಿ ನಡೆಸಿ ಭಯೋತ್ಪಾದಕ ಶಿಬಿರ ತಾಣವನ್ನು ನೆಲಸಮ ಮಾಡಿತ್ತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಸುದ್ದಿಯಾಗಿ ಭಾರತ ಪಾಕಿಸ್ತಾನದ ಕೆಂಗಣ್ಣಿಗೆ ಗುರಿಯಾಯಿತು. ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 40 ಮಂದಿ ಸಿಆರ್ ಪಿಎಫ್ ಜವಾನರು ಹುತಾತ್ಮರಾಗಿದ್ದರು. 

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂತೆಗೆತ, ರಾಜ್ಯವನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ರಚಿಸಿದ್ದಕ್ಕೆ ಪಾಕಿಸ್ತಾನ ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ವಿರುದ್ಧವಾಗಿ ಬೇರೆ ದೇಶಗಳ ನೆರವನ್ನು ಪಾಕಿಸ್ತಾನ ಕೋರುತ್ತಿದೆ.

ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ್ದು ಭಾರತದ ಆಂತರಿಕ ವಿಚಾರ, ಇದಕ್ಕೆ ಬೇರೆ ದೇಶಗಳ ಮಧ್ಯಪ್ರವೇಶ ಅಗತ್ಯವಿಲ್ಲವೆಂದು ಭಾರತ ಪ್ರತಿಪಾದಿಸುತ್ತಾ ಬಂದಿದೆ.ಪಾಕಿಸ್ತಾನ ವಾಸ್ತವ ಸಂಗತಿ ಅರಿತು ಭಾರತದ ವಿರುದ್ಧ ಪ್ರಚಾರ ಮಾಡುವುದನ್ನು ನಿಲ್ಲಿಸಬೇಕೆಂದು ಹೇಳುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com