ಮಿಡತೆಗಳ ದಾಳಿಗೆ ಪಾಕ್ ಕಂಗಾಲು; ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಪ್ರಧಾನಿ ಇಮ್ರಾನ್ ಖಾನ್

ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನಕ್ಕೆ ಮಿಡತೆಗಳು ಇನ್ನಿಲ್ಲದಂತೆ ಕಾಡುತ್ತಿದ್ದು, ಮಿಡತೆಗಳ ದಾಳಿಗೆ ತತ್ತರಿಸಿ ಹೋಗಿರುವ ಪಾಕಿಸ್ತಾನ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕರಾಚಿ: ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನಕ್ಕೆ ಮಿಡತೆಗಳು ಇನ್ನಿಲ್ಲದಂತೆ ಕಾಡುತ್ತಿದ್ದು, ಮಿಡತೆಗಳ ದಾಳಿಗೆ ತತ್ತರಿಸಿ ಹೋಗಿರುವ ಪಾಕಿಸ್ತಾನ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.

ಹೌದು.. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಮಿಡತೆಗಳ ದಾಳಿಯಿಂದ ಸಾವಿರಾರು ಎಕರೆ ಬೆಳೆ ನಾಶವಾಗಿದ್ದು, ರೈತರು ಆತಂಕಕ್ಕೆ ಸಿಲುಕಿದ್ದಾರೆ. ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಪ್ರಧಾನಿ ಇಮ್ರಾನ್ ಖಾನ್ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಕಳೆದ ವರ್ಷ ಜೂನ್​ನಲ್ಲಿ ಸಿಂಧ್ ಪ್ರಾಂತ್ಯದಲ್ಲಿ ಮಿಡತೆಗಳ ಹಾವಳಿ ಮೊದಲು ಶುರುವಾಗಿತ್ತು. ಆಗ ಸಾವಿರಾರು ಎಕರೆ ಬೆಳೆ ನಾಶ ಮಾಡಿದ್ದ ಮಿಡತೆಗಳ ಹಿಂಡು, ಸದ್ಯ ಪಂಜಾಬ್ ಪ್ರಾಂತ್ಯಕ್ಕೆ ಲಗ್ಗೆ ಇಟ್ಟಿದ್ದು, ಅಲ್ಲೂ ಸಾಕಷ್ಟು ಪ್ರಮಾಣದ ಬೆಳೆ ಹಾನಿಯುಂಟುಮಾಡಿವೆ. ಮಿಡತೆಗಳ ದಾಳಿಯಿಂದಾಗಿ ಪಾಕಿಸ್ತಾನದ ಕೃಷಿ ವಲಯಕ್ಕೆ ಭಾರಿ ನಷ್ಚ ಸಂಭವಿಸಿದ್ದು, ಇದೇ ಕಾರಣಕ್ಕೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಅಲ್ಲದೆ ಮಿಡತೆಗಳ ಹಾವಳಿ ತಡೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಿ ಎಂದು ಇಮ್ರಾನ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ನಿಯಂತ್ರಣಕ್ಕೆ 730 ಕೋಟಿ ರೂಪಾಯಿ!
ಮಿಡತೆಗಳ ನಿಯಂತ್ರಣಕ್ಕಾಗಿ ಈಗಾಗಲೇ ಸರ್ಕಾರ ಸುಮಾರು 1 ಲಕ್ಷ ಹೆಕ್ಟೇರ್ ಭೂಮಿಯ ವೈಮಾನಿಕ ಸಮೀಕ್ಷೆ ನಡೆಸಿದ್ದು, ಪರಿಸ್ಥಿತಿ ನಿಭಾಯಿಸಲು ಹಲವು ಯೋಜನೆಗಳನ್ನು ಪಟ್ಟಿ ಮಾಡಿದೆ. ಇವುಗಳ ಅನುಷ್ಠಾನಕ್ಕೆ ಸುಮಾರು 730 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಪಾಕಿಸ್ತಾನದ ರಾಷ್ಟ್ರೀಯ ಆಹಾರ ಭದ್ರತಾ ಸಚಿವ ಮಖ್ದೂಮ್ ಖುಸ್ರೊ ಬಕ್ತಿಯಾರ್ ಮಾಹಿತಿ ನೀಡಿದ್ದಾರೆ.

ಪಾಕ್ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಕ್ಕೆ ವಿಳಂಬ ಮಾಡಿರುವುದು ಹಾಗೂ ಸೂಕ್ತ ಹವಾಮಾನ ಇದ್ದ ಕಾರಣ ಮಿಡತೆಗಳ ಸಂತಾನೋತ್ಪತ್ತಿ ಪ್ರಮಾಣ ಹೆಚ್ಚಾಗಿದೆ. ಸಾಮಾನ್ಯವಾಗಿ ಮಿಡತೆಗಳ ಹಿಂಡು ಸ್ವಲ್ಪ ದಿನಗಳ ನಂತರ ಮರಳಿ ಮರುಭೂಮಿಗಳ ಕಡೆಗೆ ವಾಪಸ್ ಹೋಗುತ್ತದೆ. ಆದರೆ ಈ ಬಾರಿ ಅವುಗಳಿಗೆ ಪಾಕ್​ನಲ್ಲಿ ಪೂರಕ ವಾತಾವರಣವಿರುವುದರಿಂದ ಅಲ್ಲಿಯೇ ಉಳಿದಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿವರ್ಷ ಸಿಂಧ್ ಮತ್ತು ಪಂಜಾಬ್ ಪ್ರಾತ್ಯಗಳವರೆಗೆ ದಾಳಿ ಇಡುವ ಮಿಡತೆಗಳ ಹಿಂಡು ಇದೇ ಮೊದಲ ಬಾರಿ ಖೈಬರ್ ಪಖ್ತುಂಖ್ವಾವರೆಗೆ ಪ್ರವೇಶಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com