ಚೀನಾದ ಸಾರ್ವಜನಿಕ ಸಂಪರ್ಕ ಸಂಸ್ಥೆಯಂತೆ ವರ್ತಿಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಗೆ ನಾಚಿಕೆಯಾಗಬೇಕು:ಡೊನಾಲ್ಡ್ ಟ್ರಂಪ್

ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ಅದು ಚೀನಾ ದೇಶದ ಸಾರ್ವಜನಿಕ ಸಂಪರ್ಕ ಸಂಸ್ಥೆಯ ರೀತಿ ವರ್ತಿಸುತ್ತಿದೆ, ಅದಕ್ಕೆ ನಾಚಿಕೆಯಾಗಬೇಕು ಎಂದು ಟೀಕಿಸಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ಅದು ಚೀನಾ ದೇಶದ ಸಾರ್ವಜನಿಕ ಸಂಪರ್ಕ ಸಂಸ್ಥೆಯ ರೀತಿ ವರ್ತಿಸುತ್ತಿದೆ, ಅದಕ್ಕೆ ನಾಚಿಕೆಯಾಗಬೇಕು ಎಂದು ಟೀಕಿಸಿದ್ದಾರೆ.

ಕೊರೋನಾ ವೈರಸ್ ಹರಡುವಿಕೆ, ಅದರಲ್ಲಿ ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಪಾತ್ರದ ಕುರಿತು ತನಿಖೆ ಆರಂಭಿಸಿರುವ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಗೆ ಒದಗಿಸುತ್ತಿದ್ದ ಹಣಕಾಸಿನ ನೆರವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.

ನಿನ್ನೆ ಮತ್ತೆ ತಮ್ಮ ವಾಗ್ದಾಳಿ ಮುಂದುವರಿಸಿದ ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡುವಾಗ ಚೀನಾದ ಸಾರ್ವಜನಿಕ ಸಂಪರ್ಕ ಸಂಸ್ಥೆಯಂತೆ ವರ್ತಿಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಗೆ ನಾಚಿಕೆಯಾಗಬೇಕು ಎಂದು ಹರಿಹಾಯ್ದರು.

ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ವರ್ಷಕ್ಕೆ ಸುಮಾರು 500 ಮಿಲಿಯನ್ ಡಾಲರ್ ಹಣಕಾಸು ನೆರವನ್ನು ನೀಡುತ್ತಿದೆ. ಚೀನಾ ವರ್ಷಕ್ಕೆ ನೀಡುತ್ತಿರುವುದು ಕೇವಲ 38 ಮಿಲಿಯನ್ ಡಾಲರ್ ಅಷ್ಟೇ. ಇಲ್ಲಿ ಚೀನಾ ಕೊಡುತ್ತಿರುವ ಹಣ ಮುಖ್ಯವಲ್ಲ. ಆದರೆ ಒಂದು ದೇಶ ಮಾಡಿದ ತಪ್ಪಿನಿಂದ ಇಂದು ಇಡೀ ಜಗತ್ತಿನಲ್ಲಿ ಸಾವಿರಾರು ಜನ ಸಾಯುತ್ತಿರುವುದನ್ನು ನೋಡಿ ವಿಶ್ವ ಆರೋಗ್ಯ ಸಂಸ್ಥೆ ಸುಮ್ಮನೆ ಕೂರುವುದು ಸರಿಯೇ, ಈ ತಪ್ಪಿಗೆ ಕ್ಷಮೆ ನೀಡಬಹುದೇ ಎಂದು ಟ್ರಂಪ್ ಪ್ರಶ್ನಿಸಿದರು.

ಅಮೆರಿಕ ಕಾರ್ಯದರ್ಶಿ ಮೈಕ್ ಪೊಂಪಿಯೊ ಸಹ ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಆರೋಪ ಮಾಡಿ, ಕೊರೋನಾ ವೈರಸ್ ವಿಷಯದಲ್ಲಿ ಜಗತ್ತನ್ನು ದಾರಿತಪ್ಪಿಸಿದ್ದು, ಅದನ್ನು ತಡೆಗಟ್ಟುವಲ್ಲಿ, ತನ್ನ ಪಾತ್ರ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಸಂದರ್ಶನವೊಂದರಲ್ಲಿ ಆರೋಪಿಸಿದ್ದರು.

ಚೀನಾದ ವಿರುದ್ಧ ದರ ಸಮರ ಸಾರಲಿದೆಯೇ ಅಮೆರಿಕ?: ಕೊರೋನಾ ಸೋಂಕು ಹಬ್ಬಿಸುವಲ್ಲಿ ಚೀನಾದ ಪಾತ್ರ ಇರುವುದು ಖಂಡಿತ ಎಂದು ಮತ್ತೊಮ್ಮೆ ಪ್ರಸ್ತಾಪಿಸಿದ ಟ್ರಂಪ್ ವುಹಾನ್ ನ ಪ್ರಯೋಗಾಲಯದಿಂದ ಸಾಂಕ್ರಾಮಿಕ ಸೋರಿಕೆಯಾಗಿ ಬೇರೆ ಕಡೆಗೆ ಹಬ್ಬಿರುವ ಬಗ್ಗೆ ಸಾಕ್ಷಿಗಳಿವೆ. ಚೀನಾದ ಬೇಜವಬ್ದಾರಿತನದಿಂದ ಇಂದು ಇಡೀ ಜಗತ್ತೇ ಬೆಲೆತೆರುತ್ತಿದೆ ಎಂದು ಆಪಾದಿಸಿದ್ದಾರೆ.

ವುಹಾನ್ ನ ಪ್ರಯೋಗಾಲಯದಿಂದ ಕೊರೋನಾ ಸೋರಿಕೆಯಾಗಿ ಹಬ್ಬಿದೆ ಎಂದು ಹೇಳುವುದಕ್ಕೆ ನಿಮ್ಮ ಬಳಿ ಆಧಾರವೇನಿದೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ನನ್ನಲ್ಲಿ ಸರಿಯಾದ ಸಾಕ್ಷಿ, ಮಾಹಿತಿಯಿದೆ.ಅದನ್ನು ನಾನು ಈಗ ನಿಮ್ಮ ಮುಂದೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.

ಚೀನಾದ ಮೇಲೆ ಇದಕ್ಕೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಕೇಳಿದಾಗ ದರ ಸಮರ ಸಾರುವ ಬಗ್ಗೆ ಟ್ರಂಪ್ ಸೂಚನೆ ನೀಡಿದರು. ಆದರೆ ಅಮೆರಿಕ ಸಾಲ ಬಾಧ್ಯತೆಗಳನ್ನು ರದ್ದುಗೊಳಿಸುವ ಕ್ರಮವನ್ನು ಅಲ್ಲಗಳೆದಿದ್ದಾರೆ.

ಸಾಲ ಬಾಧ್ಯತೆಯನ್ನು ರದ್ದುಗೊಳಿಸುವುದು ಕಠಿಣ ಕ್ರಮವಾಗಿದ್ದು ಇದರಿಂದ ಅಮೆರಿಕ ಕರೆನ್ಸಿಯ ಪಾವಿತ್ರ್ಯತೆಗೆ ಧಕ್ಕೆಯುಂಟಾಗಬಹುದು. ಚೀನಾದ ಮೇಲೆ ಇದಕ್ಕೆ ಕಠಿಣ ಸುಂಕ ವಿಧಿಸುವ ಬಗ್ಗೆ ಗಮನ ಹರಿಸಲಾಗುವುದು.ಚೀನಾದ ಸಾರ್ವಭೌಮ ವಿನಾಯಿತಿಗಳನ್ನು ಮಿತಿಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com