ಮೆಕ್ಸಿಕೊ ಗಡಿಯಿಂದ ಅಕ್ರಮ ಪ್ರವೇಶ: 161 ಭಾರತೀಯರ ಗಡಿಪಾರು ಮಾಡಲಿರುವ ಅಮೆರಿಕಾ
ವಾಷಿಂಗ್ಟನ್: ದಕ್ಷಿಣ ಗಡಿಭಾಗವಾದ ಮೆಕ್ಸಿಕೋದಿಂದ ಕಾನೂನು ಬಾಹಿರವಾಗಿ ರಾಷ್ಟ್ರ ಪ್ರವೇಶಿಸಿದ್ದ ಸುಮಾರು 161 ಮಂದಿ ಭಾರತೀಯ ಪ್ರಜೆಗಳನ್ನು ಗಡಿಪಾರು ಮಾಡುವುದಾಗಿ ಅಮೆರಿಕಾ ತಿಳಿಸಿದೆ.
ಹರಿಯಾಣದ 76, ಪಂಜಾಬ್ 56, ಗೂಜರಾತ್ 12, ಉತ್ತರಪ್ರದೇಶ 5. ಮಹಾರಾಷ್ಟ್ರದ 4, ಕೇರಳ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿಗೆ ಸೇರಿದ ತಲಾ ಇಬ್ಬರು, ಆಂಧ್ರಪ್ರದಶ ಹಾಗೂ ಗೋವಾದ ತಲಾ ಒಬ್ಬರನ್ನು ಈ ವಾರ ಗಡಿಪಾರು ಮಾಡುವುದಾಗಿ ಎಂದು ಅಮೆರಿಕಾ ತಿಳಿಸಿದೆ.
ಗಡಿಪಾರು ಮಾಡಲಾಗುವ ಎಲ್ಲಾ 161 ಮಂದಿ ಭಾರತೀಯ ಪ್ರಜೆಗಳನ್ನು ವಿಶೇಷ ವಿಮಾನದಲ್ಲಿ ಪಂಜಾಬ್ ರಾಜ್ಯದ ಅಮೃತರಸರಕ್ಕೆ ಕಳುಹಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಅಕ್ರಮವಾಗಿ ಅಮೆರಿಕಾ ರಾಷ್ಟ್ರ ಪ್ರವೇಶಿಸಿದ್ದ 1,739 ಮಂದಿ ಭಾರತೀಯರು ಅಮೆರಿಕಾದ 95 ಜೈಲುಗಳಲ್ಲಿ ಇದ್ದಾರೆಂದು ಉತ್ತರ ಅಮೆರಿಕನ್ ಪಂಜಾಬಿ ಅಸೋಸಿಯೇಷನ್'ನ ಕಾರ್ಯಕಾರಿ ನಿರ್ದೇಶಕ ಸಟ್ನಾಮ್ ಸಿಂಗ್ ಅವರು ತಿಳಿಸಿದ್ದಾರೆ.
ಈ ನಡುವೆ ಇಮಿಗ್ರೇಶನ್ ಆ್ಯಂಡ್ ಕಸ್ಟಮ್ಸ್ ಎನ್ಫೋರ್ಸ್ಮೆಂಟ್ ವರದಿ ಪ್ರಕಾರ, 2018ರಲ್ಲಿ ಅಮೆರಿಕ 611 ಮಂದಿ ಭಾರತೀಯ ಪ್ರಜೆಗಳನ್ನು ಗಡಿಪಾರು ಮಾಡಿತ್ತು. ಈ ವರ್ಷ ಗಡಿಪಾರು ಮಾಡಿದ 161 ಮಂದಿಯ ಪೈಕಿ ಮೂವರು ಮಹಿಳೆಯರಿದ್ದಾರೆಂದು ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ