ಟಿಬೆಟ್ ಪ್ರತ್ಯೇಕ ರಾಷ್ಟ್ರವೆಂದು ಪರಿಗಣಿಸಲು ಅಮೆರಿಕ ಕಾಂಗ್ರೆಸ್ ನಲ್ಲಿ ಮಸೂದೆ ಮಂಡನೆ!

ಚೀನಾದ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿರುವ ಟಿಬೆಟ್ ನ್ನು ಪ್ರತ್ಯೇಕ ರಾಷ್ಟ್ರವೆಂದು ಪರಿಗಣಿಸುವ ಮಸೂದೆಯನ್ನು ಅಮೆರಿಕ ಕಾಂಗ್ರೆಸ್ ನಲ್ಲಿ ಮಂಡಿಸಲಾಗಿದೆ.
ಟಿಬೆಟ್ ಜನತೆ (ಸಂಗ್ರಹ ಚಿತ್ರ)
ಟಿಬೆಟ್ ಜನತೆ (ಸಂಗ್ರಹ ಚಿತ್ರ)

ವಾಷಿಂಗ್ ಟನ್: ಚೀನಾದ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿರುವ ಟಿಬೆಟ್ ನ್ನು ಪ್ರತ್ಯೇಕ ರಾಷ್ಟ್ರವೆಂದು ಪರಿಗಣಿಸುವ ಮಸೂದೆಯನ್ನು ಅಮೆರಿಕ ಕಾಂಗ್ರೆಸ್ ನಲ್ಲಿ ಮಂಡಿಸಲಾಗಿದೆ.

ಸೇನೆಯಲ್ಲಿದ್ದ ಹಿರಿಯ ವ್ಯಕ್ತಿ, ಪೆನ್ಸಲ್ವೇನಿಯಾದ ರಿಪಬ್ಲಿಕನ್ ಪಕ್ಷದ ಸಂಸದನೂ ಆಗಿರುವ ಸ್ಕಾಟ್ ಪೆರ್ರಿ, ಟಿಬೆಟ್ ನ್ನು ಚೀನಾದ ಹೊರತಾದ ಪ್ರತ್ಯೇಕ ರಾಷ್ಟ್ರವೆಂದು ಪರಿಗಣಿಸುವ ಮಸೂದೆಯನ್ನು ಮಂಡಿಸಿದ್ದಾರೆ. ಟಿಬೆಟ್ ಅಷ್ಟೇ ಅಲ್ಲದೇ ಹಾಂಗ್ ಕಾಂಗ್ ನ್ನೂ ಪ್ರತ್ಯೇಕರಾಷ್ಟ್ರವೆಂದು ಪರಿಗಣಿಸುವ ಮಸೂದೆಯನ್ನು ಕಾಂಗ್ರೆಸ್ ಮುಂದಿಟ್ಟಿದ್ದಾರೆ. 

ಕಾಂಗ್ರೆಸ್ ನಲ್ಲಿ ಮಂಡನೆಯಾಗಿರುವ ಈ ಮಸೂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಎರಡೂ ಪ್ರದೇಶಗಳನ್ನು ಪ್ರತ್ಯೇಕ ರಾಷ್ಟ್ರಗಳೆಂದು ಪರಿಗಣಿಸುವ ಅಧಿಕಾರ ನೀಡಲಿದೆ. 

ವಿಶ್ವದ ದೊಡ್ಡಣ್ಣನ ಪಟ್ಟಕ್ಕಾಗಿ ಯತ್ನಿಸುತ್ತಿರುವ ಚೀನಾ ಈಗಾಗಲೇ ಅಮೆರಿಕದೊಂದಿಗೆ ಶೀಥಲ ಸಮರಕ್ಕೆ ಇಳಿದಿದ್ದು, ಅಮೆರಿಕ-ಚೀನಾದ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಜಗಜ್ಜಾಹೀರಾಗಿದೆ. 

ಈ ಮಸೂದೆ ಮುಂದಿನ ಹಂತದಲ್ಲಿ ಏನಾಗುತ್ತದೆ?

ಈ ಮಸೂದೆಗೆ ಅಮೆರಿಕ ಅಧ್ಯಕ್ಷರ ಸಹಿ ಬೀಳುವುದಕ್ಕೂ ಮುನ್ನ ಹೌಸ್ ಹಾಗೂ ಸೆನೆಟ್ ಗಳಲ್ಲಿ ಅಂಗೀಕಾರವಾಗಬೇಕಾಗುತ್ತದೆ. ಇಷ್ಟೆಲ್ಲಾ ಆದರೂ ಸಹ ಅಮೆರಿಕ ಈ ವಿಷಯದಲ್ಲಿ ಮಾಡಬಹುದಾಗಿರುವುದಕ್ಕೆ ಮಿತಿಗಳಿವೆ. ಆದರೆ ಒಂದು ವೇಳೆ ಮಸೂದೆ ಅಂಗೀಕಾರಗೊಂಡು ಅಮೆರಿಕ ಅಧ್ಯಕ್ಷರ ಸಹಿ ಬಿದ್ದರೆ, ಚೀನಾ-ಅಮೆರಿಕ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಹದಗೆಡಲಿದೆ. 

ಇನ್ನು ಅಮೆರಿಕನ್ನರ ಈ ನಡೆಗೆ ಟಿಬೆಟಿಯನ್ನರು ಸಂತಸ ವ್ಯಕ್ತಪಡಿಸಿದ್ದು, ಸಂಪೂರ್ಣ ಟೆಬೆಟ್ ನ್ನು ಪ್ರತ್ಯೇಕ ರಾಷ್ಟ್ರವೆಂದು ಪರಿಗಣಿಸಬೇಕೆಂದು ಟಿಬೆಟ್ ನ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿರುವವರು ಆಗ್ರಹಿಸಿದ್ದಾರೆ. ಇನ್ನು ಟಿಬೆಟ್ ಮಸೂದೆಯನ್ನು ಗಮನಿಸಿರುವ ಉಯ್ಘರ್ ಪ್ರತ್ಯೇಕತಾವಾದಿಗಳಿಗೂ ಅಮೆರಿಕದ ಈ ನಡೆ ಚೀನಾದಿಂದ ಮುಕ್ತಿಪಡೆಯಲು ಆಶಾಕಿರಣವಾಗಿ ಹೊರಹೊಮ್ಮಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com