ಅಧ್ಯಕ್ಷೀಯ ಚುನಾವಣೆ ಎಫೆಕ್ಟ್: ಅಮೆರಿಕದಲ್ಲಿ ಒಂದೇ ದಿನ 99 ಸಾವಿರಕ್ಕೂ ಅಧಿಕ ಕೊರೋನಾ ಸೋಂಕು ಪತ್ತೆ!

ಅಮೆರಿಕದಲ್ಲಿ ಅಧ್ಯಕ್ಷೀಯ ಚುನವಾಣಾ ರಣಕಣ ತಾರಕಕ್ಕೇರಿರುವಂತೆಯೇ ಇತ್ತ ಕೊರೋನಾ ವೈರಸ್ ಕೂಡ ತನ್ನ ಅಟ್ಟಹಾಸ ಮುಂದುವರೆಸಿದ್ದು, ಒಂದೇ ದಿನ 99 ಸಾವಿರಕ್ಕೂ ಅಧಿಕ ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ.
ಅಧ್ಯಕ್ಷೀಯ ಚುನಾವಣೆ (ಚಿತ್ರ ಕೃಪೆ: ಎಪಿ)
ಅಧ್ಯಕ್ಷೀಯ ಚುನಾವಣೆ (ಚಿತ್ರ ಕೃಪೆ: ಎಪಿ)

ವಾಷಿಂಗ್ಟನ್: ಅಮೆರಿಕದಲ್ಲಿ ಅಧ್ಯಕ್ಷೀಯ ಚುನವಾಣಾ ರಣಕಣ ತಾರಕಕ್ಕೇರಿರುವಂತೆಯೇ ಇತ್ತ ಕೊರೋನಾ ವೈರಸ್ ಕೂಡ ತನ್ನ ಅಟ್ಟಹಾಸ ಮುಂದುವರೆಸಿದ್ದು, ಒಂದೇ ದಿನ 99 ಸಾವಿರಕ್ಕೂ ಅಧಿಕ ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ.

ಕಳೆದ 24 ಗಂಟೆಗಳಲ್ಲಿ 99,000 ಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಇದು ಹೊಸ ದೈನಂದಿನ ದಾಖಲೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ಹೇಳಿದೆ. ಮಂಗಳವಾರ ರಾತ್ರಿ 8:30 ರಿಂದ ಬುಧವಾರ ನಡುವೆ 99,660 ಹೊಸ ಸೋಂಕುಗಳು ಮತ್ತು 1,112 ಸಾವುಗಳು  ಸಂಭವಿಸಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಮೆರಿಕನ್ನರು ತಮ್ಮ ಅಧ್ಯಕ್ಷರನ್ನು ಆಯ್ಕೆ ಮಾಡಿದ ಮಾರನೆಯೇ ದಿನವೇ ಕೊರೋನಾ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ.

ಇನ್ನು ಅಮೆರಿಕದಲ್ಲಿ ಈ ವರೆಗೂ 9.4 ದಶಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದು, 2,33,000ಕ್ಕೂ ಅಧಿಕ ಸೋಂಕಿತರು ಸಾವನ್ನಪ್ಪಿದ್ದಾರೆ. 

ಮಾರಕ ಕೊರೋನಾ ವೈರಸ್ ನಿಂದಾಗಿ ಭೀಕರ ಹೊಡೆತ ತಿಂದಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಜಗತ್ತಿನಲ್ಲೇ ಸೋಂಕಿಗೆ ತುತ್ತಾದವರ ಸಂಖ್ಯೆ ಅಮೆರಿಕದಲ್ಲಿ ಗರಿಷ್ಠವಾಗಿದೆ. ಸಾವಿನ ಸಂಖ್ಯೆಯಲ್ಲೂ ಕೂಡ ಅಮೆರಿಕ ಮೊದಲ ಸ್ಥಾನದಲ್ಲಿದೆ. ಇಷ್ಟು ಮಾತ್ರವಲ್ಲದೇ ಲಕ್ಷಾಂತರ ಉದ್ಯೋಗ  ನಷ್ಚ ಅಮೆರಿಕದ ಬಲಿಷ್ಠ ಆರ್ಥಿಕತೆಯನ್ನೇ ಅಲುಗಾಡಿಸಿದ್ದು, ಟ್ರಂಪ್ ಸರ್ಕಾರ ಸಾಂಕ್ರಾಮಿಕವನ್ನು ನಿರ್ವಹಿಸಿದ ರೀತಿ ಅಮೆರಿಕನ್ನರ ಆಕ್ರೋಶಕ್ಕೂ ಕಾರಣವಾಗಿತ್ತು, ಇದು ಇದೀಗ ಹಾಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೋಚರವಾಗುತ್ತಿದ್ದು, ಟ್ರಂಪ್ ತಮ್ಮ ಪ್ರತಿಸ್ಪರ್ಧಿ ಜೋ ಬಿಡನ್ ವಿರುದ್ಧ ತೀವ್ರ ಪ್ರತಿಸ್ಪರ್ಧೆ ಎದುರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com