ಇಂಡಿಯನ್ ಆಯಿಲ್'ಗೆ ಸೇರಿದ ಹಡಗಿನಲ್ಲಿ ಭಾರೀ ಅಗ್ನಿ ಅವಘಡ: ಬೆಂಕಿ ನಂದಿಸುವ ವೇಳೆ ಬಾಯ್ಲರ್ ಸ್ಫೋಟ, ಓರ್ವ ಸಿಬ್ಬಂದಿ ಸಾವು
ಕೊಲಂಬೋ: ಭಾರತದ ಪ್ರಮುಖ ಪೆಟ್ರೋಲ್ ಸಂಸ್ಕರಣಾ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್'ಗೆ ಸೇರಿದ ಹಗಡಿನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸುವ ವೇಳೆ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಫಿಲಿಪ್ಪೀನ್ಸ್ ಮೂಲದ ಸಿಬ್ಬಂದಿಯೊಬ್ಬರು ಸಾವನ್ನಪ್ಪಿರುವ ಘಟನೆ ಶ್ರೀಲಂಕಾದ ಸಮುದ್ರದ ದಂಡೆಯಲ್ಲಿ ನಡೆದಿದೆ.
20ಲಕ್ಷ ಬ್ಯಾರಲ್ ಆಯಿಲ್ ಹೊತ್ತು ತರುತ್ತಿದ್ದ ನ್ಯೂ ಡೈಮಂಡ್ ಹೆಸರಿನ ಟ್ಯಾಂಕರ್'ನಲ್ಲಿ ಬೆಂಕಿ ಹೊತ್ತುಕೊಂಡಿದ್ದು, ಬೆಂಕಿ ನಂದಿಸಲು ಭಾರತ ಹಾಗೂ ಶ್ರೀಲಂಕಾದ ನೌಕಾಪಡೆಗಳು ಹರಸಾಹಸ ಪಡುತ್ತಿದೆ ಎಂದು ತಿಳಿದುಬಂದಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್'ಗೆ ಸೇರಿದ ಈ ಹಡಗಿನಲ್ಲಿ ಗುರುವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿ ಅವಘಡ ಸಂಭವಿಸುವ ವೇಳೆ ಹಡಗಿನಲ್ಲಿ 23 ಸಿಬ್ಬಂದಿಗಳಿದ್ದರು ಎಂದು ಹೇಳಲಾಗುತ್ತಿದೆ. ಈಗಡೂ ಹಡಗಿನಲ್ಲಿ ಬೆಂಕಿ ಹೊತ್ತಿ ಉರಿಯುತ್ತಲೇ ಇದ್ದು. ಬೆಂಕಿ ಕೆನ್ನಾಲಿಗೆ ಇಡೀ ಹಡಗಿಗೆ ವ್ಯಾಪಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಬೆಂಕಿ ನಂದಿಸುವ ವೇಳೆ ಹಡಗಿನಲ್ಲಿದ್ದ ಫಿಲಿಪ್ಪೀನ್ಸ್ ಮೂಲಕ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದರು. ಈ ವೇಳೆ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಹಡಗಿನಲ್ಲಿ 18 ಫಿಲಿಪ್ಪೀನ್ಸ್ ಹಾಗೂ 5 ಗ್ರೀಕ್ ಮೂಲದ ಸಿಬ್ಬಂದಿಗಳಿದ್ದರು. ಇವರಲ್ಲಿ ಓರ್ವನನ್ನು ಏರ್‌ಲಿಫ್ಟ್ ಮಾಡಲಾಗಿದ್ದು, ಉಳಿದವರನ್ನೂ ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಡಗು ಕುವೈತ್‌ನ ಮಿನಾ ಅಲ್ ಅಹ್ಮದಿ ಬಂದರ್‌ನಿಂದ ಕಚ್ಚಾತೈಲ ಹೊತ್ತು ಭಾರತದ ಪರಾದೀಪ್ ಬಂದರಿನತ್ತ ಹೊರಟಿತ್ತು. ಇಲ್ಲಿ ಇಂಡಿಯನ್ ಆಯಿಲ್‌ಗೆ ಸೇರಿದ ತೈಲ ಸಂಸ್ಕರಣ ಘಟಕವಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ