ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವಾರ್ ನಲ್ಲಿ ಇದೇ ಮೊದಲ ಬಾರಿಗೆ ಆಗಸ್ಟ್ 15ರಂದು ಹಾರಾಡಲಿದೆ ಭಾರತದ ತ್ರಿವರ್ಣ ಧ್ವಜ!
ಇದೇ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ದಿನ ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಸಾಂಪ್ರದಾಯಿಕ ಟೈಮ್ಸ್ ಸ್ಕ್ವಾರ್ ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡಲಿದೆ.
Published: 11th August 2020 11:25 AM | Last Updated: 11th August 2020 12:24 PM | A+A A-

ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಇದೇ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ದಿನ ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಸಾಂಪ್ರದಾಯಿಕ ಟೈಮ್ಸ್ ಸ್ಕ್ವಾರ್ ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡಲಿದೆ.
ನ್ಯೂಯಾರ್ಕ್, ನ್ಯೂ ಜೆರ್ಸಿ ಮತ್ತು ಕನ್ನೆಕ್ಟಿಕಟ್ ಮೂರೂ ರಾಜ್ಯಗಳ ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ (ಎಫ್ಐಎ) ಹೇಳಿಕೆ ಹೊರಡಿಸಿದ್ದು ಇಲ್ಲಿನ ಅನಿವಾಸಿ ಭಾರತೀಯರು ಇತಿಹಾಸ ಸೃಷ್ಟಿಸಲಿದ್ದು ಭಾರತದ ತ್ರಿವರ್ಣ ಧ್ವಜ ಮೊದಲ ಬಾರಿಗೆ ಹಾರಲಿದೆ ಎಂದಿದ್ದಾರೆ.
ನ್ಯೂಯಾರ್ಕ್ ನಲ್ಲಿರುವ ಭಾರತೀಯ ರಾಯಭಾರಿ ರಂಧೀರ್ ಜೈಸ್ವಾಲ್ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಟೈಮ್ಸ್ ಸ್ಕ್ವಾರ್ ನಲ್ಲಿ ಧ್ವಜ ಹಾರಿಸುವ ಮೊದಲು ಆಗಸ್ಟ್ 14ರಂದು ಎಂಪೈರ್ ಸ್ಟೇಟ್ ಕಟ್ಟಡವನ್ನು ತ್ರಿವರ್ಣ ಧ್ವಜದ ಮೂರು ಬಣ್ಣಗಳಾದ ಕೇಸರಿ, ಬಿಳಿ, ಹಸಿರು ಮೂಲಕ ದೀಪ ಬೆಳಗಿಸಲಾಗುವುದು ಎಂದು ಹೇಳಿದೆ.
ಭಾರತೀಯ ಫೆಡರೇಷನ್ ಸುವರ್ಣ ವರ್ಷ ಆಚರಿಸುತ್ತಿರುವ ಸಂದರ್ಭದಲ್ಲಿ ಅದರ ಗೌರವಾರ್ಥವಾಗಿ ಮತ್ತು ಭಾರತೀಯ ಅಮೆರಿಕನ್ ಪ್ರಜೆಗಳಲ್ಲಿ ಭಾರತದ ಬಗ್ಗೆ ದೇಶಭಕ್ತಿ ಹೆಚ್ಚಿಸಲು ಟೈಮ್ಸ್ ಸ್ಕ್ವಾರ್ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಪ್ರತಿ ವರ್ಷ ಈ ಒಕ್ಕೂಟ ಆಗಸ್ಟ್ ತಿಂಗಳಲ್ಲಿ ಭಾರತದ ಸ್ವಾತಂತ್ರ್ಯೋತ್ಸವ ಆಂಗವಾಗಿ ಪರೇಡ್ ಆಯೋಜಿಸುತ್ತದೆ. ಆದರೆ ಈ ವರ್ಷ ಕೋವಿಡ್-19 ಹಿನ್ನೆಲೆಯಲ್ಲಿ ಪರೇಡ್ ರದ್ದಾಗಿದೆ.