ಬಾಲ್ಯದಲ್ಲಿನ ಚೆನ್ನೈ ನಂಟು, ಇಡ್ಲಿ ನೆನಪು ಮಾಡಿಕೊಂಡ ಕಮಲಾ ಹ್ಯಾರಿಸ್

ಅಮೆರಿಕದ ಸಾರ್ವತ್ರಿಕ ಚುನಾವಣಾ ಕಣ ರಂಗೇರುತ್ತಿದ್ದು ಆಡಳಿತಾರೂಢ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಮಧ್ಯೆ ಬಿರುಸಿನ ಪ್ರಚಾರ ನಡೆಯುತ್ತಿದೆ. 
ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್

ವಾಷಿಂಗ್ಟನ್: ಅಮೆರಿಕದ ಸಾರ್ವತ್ರಿಕ ಚುನಾವಣಾ ಕಣ ರಂಗೇರುತ್ತಿದ್ದು ಆಡಳಿತಾರೂಢ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಮಧ್ಯೆ ಬಿರುಸಿನ ಪ್ರಚಾರ ನಡೆಯುತ್ತಿದೆ. 

ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಪದವಿ ಅಭ್ಯರ್ಥಿ ಸೆನೆಟರ್ ಕಮಲಾ ಹ್ಯಾರಿಸ್ ನಿನ್ನೆ ಅಲ್ಲಿನ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದರು. ತಮಗೆ ಭಾರತೀಯ ಮೂಲ ಪರಂಪರೆ ಬಗ್ಗೆ ಅಪಾರ ಗೌರವವಿದೆ ಎಂದ ಕಮಲಾ ಹ್ಯಾರಿಸ್ ದಕ್ಷಿಣ ಭಾರತದ ಜನಪ್ರಿಯ ತಿಂಡಿ ಇಡ್ಲಿ ತಿನ್ನಲು ತಮ್ಮ ತಾಯಿ ಒತ್ತಾಯ ಮಾಡುತ್ತಿದ್ದುದನ್ನು ನೆನಪು ಮಾಡಿಕೊಂಡರು. 

55 ವರ್ಷದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಮೊದಲ ಕಪ್ಪುವರ್ಣೀಯ ಮಹಿಳೆ. ತಮ್ಮ ತಾತನ ಜೊತೆ ಚೆನ್ನೈಯ ರಸ್ತೆಯಲ್ಲಿ ಓಡಾಡುತ್ತಿದ್ದುದು, ಅವರು ಭಾರತದ ಇತಿಹಾಸ, ಪ್ರಜಾಪ್ರಭುತ್ವ ಸ್ಥಾಪನೆ ಬಗ್ಗೆ ಹೇಳುತ್ತಿದ್ದುದನ್ನು ಸ್ಮರಿಸಿಕೊಂಡರು.

ನಿನ್ನೆ ಜೊ ಬಿಡನ್ ಜೊತೆಗೆ ಭಾರತೀಯ ಸಮುದಾಯದವರನ್ನುದ್ದೇಶಿಸಿ ಮಾತನಾಡಿದ ಕಮಲಾ ಹ್ಯಾರಿಸ್ 74ನೇ ಸ್ವಾತಂತ್ರ್ಯ ದಿನಾಚರಣೆಗೆ ಅಲ್ಲಿನ ಭಾರತೀಯರರಿಗೆ ಶುಭ ಕೋರಿದರು. 

ಭಾರತದ ಜೊತೆಗಿನ ನಂಟನ್ನು ಕಮಲಾ ಹ್ಯಾರಿಸ್ ಬಿಚ್ಚಿಟ್ಟಿದ್ದು ಹೀಗೆ: ನನ್ನ ತಾಯಿ ಶ್ಯಾಮಲಾ ಕ್ಯಾಲಿಫೋರ್ನಿಯಾಕ್ಕೆ ವಿಮಾನದಲ್ಲಿ ಬಂದಿಳಿದಾಗ ಆಕೆಗೆ 19 ವರ್ಷ. ಆಗ ಅವರಲ್ಲಿ ಏನೂ ಗೊತ್ತಿರಲಿಲ್ಲ. ಆದರೆ ಭಾರತದಲ್ಲಿ ತಮ್ಮ ತಂದೆ-ತಾಯಿ, ಅಜ್ಜ-ಅಜ್ಜಿಯರಿಂದ ಕಲಿತ ಮೌಲ್ಯದ ಪಾಠಗಳಿದ್ದವು. ನನ್ನ ಅಜ್ಜಿ ರಾಜನ್ ಮತ್ತು ತಾತ ಪಿ ವಿ ಗೋಪಾಲನ್ ಅವರು ಮೌಲ್ಯ, ಸಂಸ್ಕೃತಿಯನ್ನು ನನ್ನ ತಾಯಿಗೆ ಕಲಿಸಿಕೊಟ್ಟಿದ್ದರು. ಪ್ರಪಂಚದಲ್ಲಿ ಅನ್ಯಾಯ ಕಂಡುಬಂದಾಗ ಅದರ ವಿರುದ್ಧ ಹೋರಾಡುವ ಮನಸ್ಥಿತಿ, ಕರ್ತವ್ಯ ಹೊಂದಿರಬೇಕು ಎಂದಿದ್ದರು. 

ಅದುವೇ ನನ್ನ ತಾಯಿಯವರಿಗೆ ಪ್ರೇರಣೆಯಾಗಿ ಕ್ಯಾಲಿಫೋರ್ನಿಯಾದ ಒಕ್ಲಾಂಡ್ ನ ಬೀದಿಗಳಲ್ಲಿ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಿ ಧ್ವನಿಯೆತ್ತಲು ಸಾಧ್ಯವಾಯಿತು. ನಾಗರಿಕ ಹಕ್ಕು ಚಳವಳಿಗಳಲ್ಲಿ ತಾಯಿಯವರು ಪಾಲ್ಗೊಂಡಿದ್ದರು. ಡಾ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್, ಮಹಾತ್ಮಾ ಗಾಂಧಿಯವರ ಹೋರಾಟ, ಚಳವಳಿಗಳಿಗೆ ನನ್ನ ತಾಯಿ ಪ್ರಭಾವಿತರಾಗಿದ್ದರು. 

ಈ ಹೋರಾಟ, ಚಳವಳಿ ಸಮಯದಲ್ಲಿ ನನ್ನ ತಾಯಿ ತಂದೆಯವರನ್ನು ಭೇಟಿ ಆಗಿ ಪರಿಚಯವಾಗಿ ಮದುವೆಯಾಯಿತು,ಮುಂದೇನಾಯ್ತು ಎಂಬುದು ಇತಿಹಾಸ. ನಾನು ಮತ್ತು ನನ್ನಕ್ಕ ಮಾಯಾ ಹುಟ್ಟಿ ಬೆಳೆದು ದೊಡ್ಡವರಾಗುತ್ತಿದ್ದಂತೆ ಮದ್ರಾಸ್ ಗೆ (ಈಗಿನ ಚೆನ್ನೈ) ನಮ್ಮಮ್ಮ ಕರೆದುಕೊಂಡು ಹೋಗುತ್ತಿದ್ದರು. ನಾವು ಭಾರತದ ಬಗ್ಗೆ ತಿಳಿದುಕೊಳ್ಳಬೇಕೆಂಬ ಉದ್ದೇಶ ಅವರದಾಗಿತ್ತು. ನಮ್ಮಮ್ಮ ಇಡ್ಲಿ ತಿನ್ನಲು ನಮಗೆ ಯಾವಾಗಲು ಒತ್ತಾಯ ಮಾಡುತ್ತಿದ್ದರು. 

ಮದ್ರಾಸ್ ಗೆ ಹೋದಾಗಲೆಲ್ಲ ನಾನು ನನ್ನ ತಾತನ ಜೊತೆ ಬೀದಿಗಳಲ್ಲಿ ವಾಕಿಂಗ್ ಹೋಗುತ್ತಿದ್ದೆ. ಆಗ ಅವರಿಗೆ ನಿವೃತ್ತಿಯಾಗಿತ್ತು. ಭಾರತದ ಇತಿಹಾಸ, ಪ್ರಜಾಪ್ರಭುತ್ವ ಬಗ್ಗೆ ತಾತ ಸಮಗ್ರವಾಗಿ ಹೇಳುತ್ತಿದ್ದರು. ಮಹಾನ್ ಪುರುಷರಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಸಿಕ್ಕಿತು ಎನ್ನುತ್ತಿದ್ದರು. ಅವರು ಬಿಟ್ಟುಹೋದ ತತ್ವ, ಮೌಲ್ಯಗಳನ್ನು ಮುಂದಿನ ತಲೆಮಾರಿನವರಾದ ನೀವು ಮುಂದುವರಿಸಿಕೊಂಡು ಹೋಗಬೇಕು ಎನ್ನುತ್ತಿದ್ದರು. ಅವರು ಹೇಳಿಕೊಟ್ಟ ನೀತಿ ಪಾಠಗಳಿಂದಾಗಿ ನಾನು ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com