ಫೈಜರ್ ಬಯೋಟೆಕ್ ಕೊರೋನಾ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಅನುಮೋದನೆ

ಫೈಜರ್-ಬಯೋಎನ್‌ಟೆಕ್ ಸಹಭಾಗಿತ್ವದಲ್ಲಿ‌ ಸಿದ್ಧವಾಗಿರುವ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ.
ಫಿಜರ್ ಲಸಿಕೆ
ಫಿಜರ್ ಲಸಿಕೆ

ನ್ಯೂಯಾರ್ಕ್: ಫೈಜರ್-ಬಯೋಎನ್‌ಟೆಕ್ ಸಹಭಾಗಿತ್ವದಲ್ಲಿ‌ ಸಿದ್ಧವಾಗಿರುವ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ.

ಅಮೆರಿಕದಲ್ಲಿ ಮಾರಕ ಕೊರೋನಾ ವೈರಸ್ ನ ಹಾವಳಿ ಮುಂದುವರೆದಿರುವಂತೆಯೇ ಅಮೆರಿಕ ಸರ್ಕಾರ ಫೈಜರ್ ಸಂಸ್ಥೆಯ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಶುಕ್ರವಾರ ತಡರಾತ್ರಿ ಅನುಮೋದನೆ ನೀಡಿದೆ. ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿಡಿಯೋ ಟ್ವೀಟ್ ಮಾಡಿದ್ದು, ಕೊರೊನಾ ಲಸಿಕೆಯನ್ನು ಮೆಡಿಕಲ್‌ ಮಿರಾಕಲ್‌ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಮುಂದಿನ 24 ಗಂಟೆಗಳೊಳಗೆ ಮೊದಲ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಇನ್ನು ಕೊರೋನಾ ವೈರಸ್ ನಿಂದಾಗಿ ಅತೀ ಹೆಚ್ಚು ಸಂಕಷ್ಟಕ್ಕೀಡಾದ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಅತೀ ಹೆಚ್ಚು ಸಾವು ಸಂಭವಿಸಿದ ದೇಶಗಳ ಪಟ್ಟಿಯಲ್ಲೂ ಅಮೆರಿಕ ಅಗ್ರ ಸ್ಥಾನದಲ್ಲಿದೆ. ಈಗಾಗಲೇ ಅಮೆರಿಕದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ 2 ಡೋಸ್‌ಗಳ ಲಸಿಕೆ ನೀಡಲು ಅನುಮತಿ ನೀಡಿದ ರಾಷ್ಟ್ರಗಳಲ್ಲಿ ಅಮೆರಿಕ 6ನೇ ರಾಷ್ಟ್ರವಾಗಿದೆ. ಈ ಮೊದಲು ಬ್ರಿಟನ್, ಬಹರೇನ್‌, ಕೆನಡಾ, ಸೌದಿ ಅರೇಬಿಯಾ, ಮೆಕ್ಸಿಕೋ ರಾಷ್ಟ್ರಗಳು ಲಸಿಕೆ ಬಳಕೆಗೆ ಅನುಮೋದನೆ ನೀಡಿದ್ದವು. 

ಈ ಮೊದಲು ಫೈಜರ್‌ ಕೊರೊನಾ ಲಸಿಕೆ ಪಡೆದ ನಾಲ್ಕು ಜನರಲ್ಲಿ ತಾತ್ಕಾಲಿಕ ರೀತಿಯ ಮುಖ ಪಾರ್ಶ್ವವಾಯು ಉಂಟಾಗಿದೆ ಎಂದು ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಕ ಆಡಳಿತ ಮಂಡಳಿ ತನ್ನ ವರದಿಯಲ್ಲಿ ತಿಳಿಸಿತ್ತು. ಆದರೆ, ಇದೀಗ ಲಸಿಕೆ ಬಳಕೆಗೆ ಅಮೆರಿಕ ಹಸಿರು ನಿಶಾನೆ ತೋರಿದೆ. ಜರ್ಮನ್ ಪಾಲುದಾರ ಕಂಪನಿ ಬಯೋಎನ್ ಟೆಕ್ ಸಹಭಾಗಿತ್ವದಲ್ಲಿ ಫೈಜರ್ ಲಸಿಕೆ ಅಭಿವೃದ್ಧಿಪಡಿಸಿದೆ. ಈ ಲಸಿಕೆ ಅಂತಿಮ ಪ್ರಯೋಗದಲ್ಲಿ ರೋಗವನ್ನು ತಡೆಗಟ್ಟುವಲ್ಲಿ  ಶೇ.95 ಪರಿಣಾಮಕಾರಿ ಎಂದು ಸಾಬೀತಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com