ಆಫ್ಘಾನಿಸ್ತಾನದಲ್ಲಿ ಕಾರ್ ಬಾಂಬ್ ಸ್ಫೋಟ; ಕನಿಷ್ಠ 8 ಮಂದಿ ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ

ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಲ್ಲಿ ಭಾನುವಾರ ಉಗ್ರರು ಭೀಕರ ಕಾರ್ ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಟ 8 ಮಂದಿ ಸಾವಿಗೀಡಾಗಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕಾರ್ ಬಾಂಬ್ ಸ್ಫೋಟ
ಕಾರ್ ಬಾಂಬ್ ಸ್ಫೋಟ

ಕಾಬೂಲ್: ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಲ್ಲಿ ಭಾನುವಾರ ಉಗ್ರರು ಭೀಕರ ಕಾರ್ ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಟ 8 ಮಂದಿ ಸಾವಿಗೀಡಾಗಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಈ ಕುರಿತಂತೆ ಸ್ವತಃ ಆಫ್ಘಾನ್ ಆಂತರಿಕ ಸಚಿವಾಲಯ ಮಾಹಿತಿ ನೀಡಿದ್ದು, ಆಫ್ಘನ್ ಸಂಸದರೊಬ್ಬರನ್ನು ಸ್ಥಳಾಂತರ ಮಾಡುತ್ತಿದ್ದಾಗ ಈ ದಾಳಿ ನಡೆದಿದೆ. ಸೇನಾ ಮೂಲಗಳು ತಿಳಿಸಿರುವಂತೆ ಸಂಸದ ಖಾನ್ ಮೊಹಮ್ಮದ್ ವಾರ್ಡಕ್ ರನ್ನು ಭದ್ರತೆಯಲ್ಲಿ ಸ್ಥಳಾಂತರಿಸುತ್ತಿದ್ದಾಗ ಈ ದಾಳಿ  ನಡೆದಿದ್ದು, ದೊಡ್ಡ ಕಾರಿನಲ್ಲಿ ಸ್ಫೋಟಕಗಳನ್ನು ತುಂಬಿಸಿ ಸ್ಫೋಟಗೊಳಿಸಲಾಗಿದೆ. ದಾಳಿಯಲ್ಲಿ ಸಂಸದ ಖಾನ್ ಮೊಹಮ್ಮದ್ ವಾರ್ಡಕ್ ಕೂಡ ಗಾಯಗೊಂಡಿದ್ದಾರೆ. ಅವರೊಂದಿಗೆ ಸುಮಾರು 15 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಫೋಟದ ರಭಸಕ್ಕೆ ಸಮೀಪದಲ್ಲಿದ್ದ ಸುಮಾರು 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಂತೆಯೇ ಸ್ಫೋಟದ ತೀವ್ರತೆಗೆ ಸಮುತ್ತಮುತ್ತಲಿನ ವಾಹನಗಳಿಗೂ ಬೆಂಕಿ ಹೊತ್ತಿಕೊಂಡಿದೆ. ಅಲ್ಲದೆ ಸುತ್ತಮುತ್ತಲ ಕಟ್ಟಡಗಳಿಗೂ ತೀವ್ರ ಹಾನಿಯಾಗಿದೆ. ಆರಂಭದಲ್ಲಿ ಈ ದಾಳಿಯ ಹೊಣೆಯನ್ನೂ  ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿರಲಿಲ್ಲವಾದರೂ, ಬಳಿಕ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ತಾನೇ ಈ ದಾಳಿ ಮಾಡಿರುವುದಾಗಿ ಹೇಳಿಕೆ ಬಿಡುಗಡೆ ಮಾಡಿದೆ. 

ಈ ಹಿಂದೆ ಅಂದರೆ ಶನಿವಾರ ಇದೇ ಐಸಿಸ್ ಸಂಘಟನೆ ಅಮೆರಿಕ ಸೇನಾ ನೆಲೆ ಬಳಿ ನಡೆದ ರಾಕೆಟ್ ದಾಳಿಯ ಹೊಣೆ ಹೊತ್ತಿತ್ತು. ಈ ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ ಎಂದು ನ್ಯಾಟೋ ಮತ್ತು ಪ್ರಾಂತೀಯ ಅಧಿಕಾರಿಗಳು ಸ್ಪಷ್ಟನೆ ನೀಡಿವೆ. 

ಘಜ್ನಿ ಪ್ರಾಂತ್ಯದ ಸ್ಫೋಟದಲ್ಲಿ 15 ಮಕ್ಕಳ ಸಾವು
ಮತ್ತೊಂದು ಪ್ರಕರಣದಲ್ಲಿ ಪೂರ್ವ ಅಫ್ಘಾನಿಸ್ತಾನದ ಘಜ್ನಿ ಪ್ರಾಂತ್ಯದಲ್ಲಿ ಸಂಭವಿಸಿದ ಬೃಹತ್ ಸ್ಫೋಟದಲ್ಲಿ 15 ಮಕ್ಕಳು ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮತ್ತು ಪೊಲೀಸ್ ಮೂಲಗಳು ಶನಿವಾರ ತಿಳಿಸಿವೆ. ಗಿಲಾನ್ ಜಿಲ್ಲೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ  ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ, ಆದರೆ ರಿಕ್ಷಾವೊಂದರ ಹಿಂಭಾಗದಲ್ಲಿ ಬಾಂಬ್ ಸ್ಫೋಟಗೊಂಡಿದೆ ಎಂದು ಸಾಕ್ಷಿಗಳು ಹೇಳಿದ್ದಾರೆ ಎಂದು ಬಿಬಿಸಿ ವರದಿ ತಿಳಿಸಿದೆ. ಆಕಸ್ಮಿಕವಾಗಿ ಸ್ಫೋಟ ಸಂಭವಿಸಿದೆ ಎಂದು ತಾಲಿಬಾನ್ ಉಗ್ರರು  ಹೇಳಿದ್ದಾರೆ.

ಕುರಾನ್ ಪಠಣ ಸಮಾರಂಭ ನಡೆಯುತ್ತಿರುವ ಹಳ್ಳಿಯ ಮನೆಯೊಂದರ ಬಳಿ ಸ್ಫೋಟ ಸಂಭವಿಸಿದೆ. ಮೋಟಾರು ಚಾಲಿತ ರಿಕ್ಷಾ ಓಡಿಸುತ್ತಿದ್ದ ವ್ಯಕ್ತಿಯೊಬ್ಬ ಹಳ್ಳಿಗೆ ಪ್ರವೇಶಿಸಿದ ನಂತರ ಮಕ್ಕಳು ಅದನ್ನು ಸುತ್ತುವರಿದರು. ಬಳಿಕ ಬಾಂಬ್ ಸ್ಫೋಟಗೊಂಡಿದೆ ಎಂದು ಘಜ್ನಿ  ಪ್ರಾಂತೀಯ ಗವರ್ನರ್ ವಕ್ತಾರ ವಾಹಿದುಲ್ಲಾ ಜುಮಾಜಾದಾ ತಿಳಿಸಿದ್ದಾರೆ. 20ಕ್ಕೂ ಅಧಿಕ ಜನರು ಗಾಯಗೊಂಡಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ವಕ್ತಾರರು ಹೇಳಿದ್ದಾರೆ. ಅಫಘಾನ್ ಮತ್ತು ತಾಲಿಬಾನ್ ಅಧಿಕಾರಿಗಳ ನಡುವೆ ಮಾತುಕತೆ ಪ್ರಾರಂಭವಾದರೂ  ದೇಶದಲ್ಲಿ ಹಿಂಸಾಚಾರದ ಮಟ್ಟ ಹೆಚ್ಚಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com