ಕೊರೋನಾ ವೈರಸ್: ಕತಾರ್ ನಲ್ಲಿ 3000ಕ್ಕೂ ಅಧಿಕ ಕನ್ನಡಿಗರು ಅತಂತ್ರ

ಕೊರೋನಾ ಸಂಕಷ್ಟದ ಸಮಯದಲ್ಲಿ ಕತಾರ್‌ನಲ್ಲಿ 3 ಸಾವಿರಕ್ಕೂ ಅಧಿಕ ಕನ್ನಡಿಗರು ನಿರಾಶ್ರಿತರಾಗಿದ್ದು, ಸ್ವದೇಶಕ್ಕೆ ಮರಳು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದೋಹಾ: ಕೊರೋನಾ ಸಂಕಷ್ಟದ ಸಮಯದಲ್ಲಿ ಕತಾರ್‌ನಲ್ಲಿ 3 ಸಾವಿರಕ್ಕೂ ಅಧಿಕ ಕನ್ನಡಿಗರು ನಿರಾಶ್ರಿತರಾಗಿದ್ದು, ಸ್ವದೇಶಕ್ಕೆ ಮರಳು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

ಕೊರೋನಾ ಸಾಂಕ್ರಾಮಿಕದಿಂದಾಗಿ ಅಲ್ಲಿ ಕೆಲಸ ಅರಸಿ ಹೋಗಿದ್ದ ಕನ್ನಡಿಗರು ಇದೀಗ ಕೆಲಸವೂ ಇಲ್ಲದೆ ತಂಗಲು ಸೂಕ್ತ ವ್ಯವಸ್ಥೆಯೂ ಇಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಕೊರೋನ ಕಾರಣದಿಂದ ಗಲ್ಫ್ ರಾಷ್ಟ್ರಗಳಲ್ಲಿ ನಿರ್ಮಾಣ ಕಾರ್ಯಗಳು ಸ್ತಬ್ಧಗೊಂಡಿದ್ದು, ಚಿಕ್ಕ ಕಂಪೆನಿಗಳು ಮುಚ್ಚಿವೆ. ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಕನ್ನಡಿಗರು ಅತಂತ್ರರಾಗಿದ್ದಾರೆ. ತಾಯ್ನಾಡಿಗೆ ಮರಳಲು ತುದಿಗಾಲಲ್ಲಿ ನಿಂತಿರುವ ಕನ್ನಡಿಗರು ಈ ಸಂಬಂಧ ಸರ್ಕಾರ ಕೂಡಲೇ ಕ್ರಮ ವಹಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ. 

ಕಳೆದ ನಾಲ್ಕು ತಿಂಗಳಿಂದ ಉದ್ಯೋಗವಿಲ್ಲದೆ ಕನ್ನಡಿಗರು ತಮ್ಮ ರೂಮಿನಲ್ಲಿ ಬಂಧಿಯಾಗಿದ್ದಾರೆ. ತಾಯ್ನಾಡಿಗೆ ಮರಳಲು ಯತ್ನಿಸಿದ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ. ರಾಯಭಾರಿ ಕಚೇರಿ ಅಧಿಕಾರಿಗಳನ್ನು ಭೇಟಿಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ವದೇಶಕ್ಕೆ ವಾಪಸಾಗಲು ರಾಯಭಾರಿ ಕಚೇರಿಯಲ್ಲಿ ಈಗಾಗಲೇ ಸಾವಿರಾರು ಕನ್ನಡಿಗರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಈ ವರೆಗೂ ಏರ್ ಲಿಫ್ಟ್ ಕಾರ್ಯ ಇನ್ನೂ ಆರಂಭವಾಗಿಲ್ಲ. 

ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಈಗಾಗಲೇ ದುಬೈ, ಸೌದಿ ಅರೇಬಿಯ, ಕುವೈತ್ ಸಹಿತ ಬಹುತೇಕ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿದ್ದ ಕನ್ನಡಿಗರು ಸೇರಿದಂತೆ ಭಾರತೀಯರನ್ನು ಮೂಲಕ ಕರೆಸಿಕೊಳ್ಳಲು ಆರಂಭಿಸಲಾಗಿದೆ. ಆದರೆ ಕತಾರ್ ದೇಶದಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆಸಿಕೊಳ್ಳುವ ಕುರಿತು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. 

ಮನೆಯಿಂದ ಹೊರಗೆ ಹೋಗಲು ಕೂಡ ಅವಕಾಶವಿಲ್ಲ. ಮೊಬೈಲ್‌ನಲ್ಲಿ ಕೊವೀಡ್ ಸುರಕ್ಷಾ ಆ್ಯಪ್, ಮಾಸ್ಕ್ ಇಲ್ಲದೇ ಹೊರ ಕಾಲಿಟ್ಟರೆ ಲಕ್ಷಗಟ್ಟಲೇ ದಂಡ ವಿಧಿಸುತ್ತಾರೆ. ಜತೆಗೆ ಮೂರು ವರ್ಷಕ್ಕೂ ಹೆಚ್ಚಿನ ಜೈಲು ಶಿಕ್ಷೆಯ ಕಾನೂನುಗಳು ಜಾರಿಯಲ್ಲಿವೆ. ಯಾವ ಕಡೆಗೂ ಒಂದು ಹೆಜ್ಜೆ ಇಡದಂತಹ ಕರಾಳ ಸ್ಥಿತಿ ಎದುರಿಸುವ ಪರಿಸ್ಥಿತಿ ಎದುರಾಗಿದೆ ಎಂದು ಅಲ್ಲಿ ಅತಂತ್ರಗೊಂಡಿರುವ ಕನ್ನಡಿಗರೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com