ತಾಲಿಬಾನಿಗಳು ನನ್ನನ್ನು ಕೊಲ್ಲುವುದನ್ನೇ ಕಾಯುತ್ತಿದ್ದೇನೆ: ಆಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್

ತಾಲಿಬಾನ್ ಇನ್ನೂ ದೇಶದ ಜಿಲ್ಲೆಗಳನ್ನು ವಶಪಡಿಸಿಕೊಳ್ಳುತ್ತಿದ್ದಾಗಲೂ, ಜರಿಫಾ ಗಫಾರಿ ಆಫ್ಘನ್ ಸೇನೆ ತಾಲಿಬಾನ್ ಅನ್ನು ಹಿಮ್ಮೆಟ್ಟಿಸಲಿದೆ ಎಂದೇ ನಂಬಿದ್ದರು. ಎರಡೇ ವಾರಗಳಲ್ಲಿ ಅವರ ಆಶಾಗೋಪುರ ಕುಸಿದು ಧರಾಶಾಯಿಯಾಗಿದೆ. ಈ ಸಮಯದಲ್ಲಿ ಅವರು ಮಾಧ್ಯಮಕ್ಕೆ ನೀಡಿರುವ ಸಂದರ್ಶನ ಅಫ್ಘಾನಿಸ್ತಾನದಲ್ಲಿ ಮುಂಬರಲಿರುವ  ಭೀಕರ ಕ್ಷಣಗಳಿಗೆ ಕೈಗನ್ನಡಿ ಹಿಡಿದಂತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಕಾಬೂಲ್: ಜರಿಫಾ ಗಫಾರಿ ತನ್ನ 27ನೇ ವಯಸ್ಸಿನಲ್ಲಿ ಮೇಯರ್ ಹುದ್ದೆಗೇರಿ ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಎನ್ನುವ ಖ್ಯಾತಿಗೆ ಪಾತ್ರರಾದವರು. 2018ರಲ್ಲಿ ಮೇಯರ್ ಗಾದಿಗೆ ಏರಿದ್ದ ಜರಿಫಾ ತನ್ನ ದೇಶದ ಭವಿಷ್ಯದ ಬಗ್ಗೆ ಹಲವು ಕನಸುಗಳನ್ನು ಕಟ್ಟಿಕೊಂಡಿದ್ದವರು.

ಕೆಲ ವಾರಗಳ ಹಿಂದೆ ತಾಲಿಬಾನ್ ಇನ್ನೂ ದೇಶದ ಜಿಲ್ಲೆಗಳನ್ನು ವಶಪಡಿಸಿಕೊಳ್ಳುವುದರಲ್ಲಿ ತೊಡಗಿದ್ದಾಗಲೂ ಅವರು ಆಶಾಭಾವವನ್ನು ಹೊಂದಿದ್ದರು. ಆಫ್ಘನ್ ಸೇನೆ ತಾಲಿಬಾನ್ ಅನ್ನು ಹಿಮ್ಮೆಟ್ಟಿಸಲಿದೆ ಎಂದೇ ನಂಬಿದ್ದರು. ಕೇವಲ ಎರಡೇ ವಾರಗಳ ಅವಧಿಯಲ್ಲಿ ಅವರ ಆಶಾಗೋಪುರ ಕುಸಿದು ಧರಾಶಾಯಿಯಾಗಿದೆ. ಈ ಸಮಯದಲ್ಲಿ ಅವರು ಮಾಧ್ಯಮಕ್ಕೆ ನೀಡಿರುವ ಸಂದರ್ಶನ ಅಫ್ಘಾನಿಸ್ತಾನದಲ್ಲಿ ಮುಂಬರಲಿರುವ ಭೀಕರ ಕ್ಷಣಗಳಿಗೆ ಕೈಗನ್ನಡಿ ಹಿಡಿದಂತಿದೆ-

ಈ ಹೊತ್ತಿನಲ್ಲಿ ತಾಲಿಬಾನಿಗಳು ನಾನಿರುವಲ್ಲಿಗೇ ಬಂದು ನನ್ನನ್ನು ಕೊಲ್ಲುವುದನ್ನೇ ಎದುರು ನೋಡುತ್ತಿದ್ದೇನೆ. ಏಕೆಂದರೆ ತಾಲಿಬಾನಿಗಳ ಕಣ್ಣು ಮೊದಲು ಬೀಳುವುದೇ ನನ್ನಂಥವಳ ಮೇಲೆ. ತಾಲಿಬಾನಿಗಳ ರಾಜ್ಯದಲ್ಲಿ ಶಿಕ್ಷೆಗೆ ಒಳಗಾಗಲು ದೇಶದ್ರೋಹದ ಕೆಲಸವನ್ನೇ ಮಾಡಬೇಕೆಂದಿಲ್ಲ. ಇಲ್ಲಿ ಹೆಣ್ಣಾಗಿ ಹುಟ್ಟಿದರೆ ಸಾಕು. 

ನನ್ನನ್ನಾಗಲಿ ನನ್ನ ಕುಟುಂಬವನ್ನಾಗಲಿ ರಕ್ಷಣೆ ಮಾಡಲು ಯಾರೂ ಇಲ್ಲ. ನನ್ನ ಸಹಾಯಕ್ಕೆ ಯಾರೂ ಬಾರರು. ಅದು ನನಗೆ ಚೆನ್ನಾಗಿ ಗೊತ್ತಿದೆ. ಹಾಗೆಂದು ನಾನು ಓಡಿಹೋಗಲು ಆಗುವುದಿಲ್ಲ. ಓಡಿ ಹೋದರೂ ಎಲ್ಲಿಗೇ ಎಂದು ಓಡಲಿ. ಎಲ್ಲೆಡೆ ಅವರೇ ತುಂಬಿಕೊಂಡಿರುವಾಗ ಎಲ್ಲಿ ಅವಿತುಕೊಳ್ಳಲಿ. 

ದನಿಯೆತ್ತರಿಸಿ ಮಾತನಾಡುವ, ರಾಜಕೀಯದಲ್ಲಿ ಉನ್ನತ ಹುದ್ದೆಗೇರಿರುವ ಹೆಣ್ನನ್ನು ತಾಲಿಬಾನಿಗಳು ಎಂದಿಗೂ ಉಳಿಸುವುದಿಲ್ಲ. ನನ್ನ ಸೇನೆಯಲ್ಲಿ ಜನರಲ್ ಹುದ್ದೆಯ ಅಧಿಕಾರಿಯಾಗಿದ್ದವರು. ಅವರನ್ನು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಇದುವರೆಗೂ ನನ್ನ ಮೇಲೆ ಮೂರು ಬಾರಿ ಕೊಲೆ ಯತ್ನಗಳು ನಡೆದಿವೆ. ಪ್ರಜಾಪ್ರಭುತ್ವ ಸರ್ಕಾರ ಇದ್ದ ಸಮಯದಲ್ಲೇ ತಾಲಿಬಾನಿಗಳು ಅವರ ಕಡೆಯವರಿಮ್ದ ನನ್ನನ್ನು ಕೊಲ್ಲಲು ಶತಪ್ರಯತ್ನ ನಡೆಸಿದ್ದರು. ಈ ಬಾರಿ ಅವರದೇ ಸರ್ಕಾರ ಬರುತ್ತಿದೆ. ಈಗ ನನ್ನನ್ನು ಉಳಿಸದೇ ಬಿಡುವರೇ! 

ರಾಜಧಾನಿಗೆ ತಾಲಿಬಾನ್ ಮುತ್ತಿಗೆ ಹಾಕುತ್ತಿದ್ದಂತೆಯೇ ಸರ್ಕಾರ ಹಾಗೂ ಸೇನೆಯ ಉನ್ನತ ಮಟ್ಟದ ಅಧಿಕಾರಿಗಳು ಮುಳುಗುತ್ತಿದ್ದ ಹಡಗನ್ನು ತ್ಯಜಿಸಿದಂತೆ ಸುರಕ್ಷಿತ ಸ್ಥಳಗಳಿಗೆ ತಪ್ಪಿಸಿಕೊಂಡು ಹೋದರು. ಆದರೆ ನನ್ನಂಥವರಿಗೆ ಬೇರೆಲ್ಲೂ ಹೋಗಿ ಅವಿತುಕೊಳ್ಳುವ ಶಕ್ತಿ ಇಲ್ಲ. 

ಅಫ್ಘಾನಿಸ್ತಾನಕ್ಕೆ ತಾಲಿಬಾನ್ ಬಂಡುಕೋರರು ನುಗ್ಗಿ ದಾಂಧಲೆ ಶುರುವಿಟ್ಟುಕೊಂಡ ಸಂದರ್ಭದಲ್ಲಿ ದೇಶದ ವಿವಿಧ ಪ್ರಾಂತ್ಯಗಳಿಂದ ಜನರು ವಲಸೆ ಬಂದಿದ್ದು ರಾಜಧಾನಿ ಕಾಬೂಲಿಗೆ. ದೇಶದ ಯಾವುದೇ ಮೂಲೆಯಲ್ಲಿ ತಾಲಿಬಾನಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಇಡೀ ದೇಶ ಅವರ ತೆಕ್ಕೆಗೆ ಜಾರುವುದಿಲ್ಲ ಎನ್ನುವ ಒಂದೇ ಒಂದು ನಂಬಿಕೆಯಿಂದ ಅವರು ಕಾಬೂಲಿಗೆ ಬಂದಿದ್ದರು. ಅವರು ಕಾಬೂಲಿನ ಬೀದಿಗಳಲ್ಲಿ ಕುಟುಂಬ ಸಹಿತ ಬಿಡಾರ ಹೂಡಿದ್ದರು. 

ಅವರೆಲ್ಲರ ಪ್ರಾರ್ಥನೆ ಅಲ್ಲಾಹ್ ಕಿವಿ ಮುಟ್ಟಿಲ್ಲ. ದೇಶ ತಾಲಿಬಾನ್ ತೆಕ್ಕೆಗೆ ಜಾರಿದೆ. ಕಾಬೂಲಿನ ಬೀದಿಗಳಲ್ಲಿ ನೆಲೆನಿಂತಿರುವ ಮಂದಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತಮ್ಮ ಊರುಗಳಿಗೆ ಮರಳುತ್ತಾರೆ. ತಾಲಿಬಾನಿ ರಾಜ್ಯಭಾರಕ್ಕೆ ತಲೆಬಾಗುತ್ತಾರೆ. ಇಲ್ಲವೇ ಅವರ ವಿರೋಧ ಕಟ್ಟಿಕೊಂಡು ಮಸಣ ಸೇರುತ್ತಾರೆ. 

ಮಹಿಳೆಯರಿಗೆ, ಹೆಣ್ಣುಮಕ್ಕಳಿಗೆ ನಮ್ಮ ಆಡಳಿತದಲ್ಲಿ ಯಾವುದೇ ಅಪಾಯ ಒದಗುವುದಿಲ್ಲ ಎಂದು ತಾಲಿಬಾನ್ ಹೇಳಿದೆ ಎಂಬುದೇನೋ ನಿಜ. ಆದರೆ ಈವರೆಗಿನ ವಿದ್ಯಮಾನಗಳನ್ನು ಗಮನಿಸಿದರೆ ತಾಲಿಬಾನ್ ತನ್ನ ಯಾವ ಮಾತನ್ನು ಪಾಲಿಸಿದೆ ಎನ್ನುವುದರ ಲೆಕ್ಕ ಸಿಗುವುದಿಲ್ಲ. 

ಆಫ್ಘನ್ ಸರ್ಕಾರ ಮತ್ತು ಸೇನೆ ಜೊತೆ ಕೆಲಸ ನಿರ್ವಹಿಸಿದವರಿಗೆ ಕ್ಷಮೆ ನೀಡಲಾಗುವುದು ಎಂದು ತಾಲಿಬಾನ್ ತಿಳಿಸಿದೆ. ಆದರೆ ಇನ್ನೊಂದೆಡೆ ಈಗಾಗಲೇ ತಾಲಿಬಾನ್ ತನ್ನ ವಿರೋಧಿಗಳನ್ನು ಮಟ್ಟ ಹಾಕುವ ಸಲುವಾಗಿ ಮಾರಣಹೋಮ ಶುರು ಮಾಡಿದೆ ಎನ್ನುವ ವರದಿಗಳು ಕೇಳಿಬರುತ್ತಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com