ಬ್ರಿಟನ್ ರಾಜಮನೆತನದ ಪ್ರಿನ್ಸ್ ಹ್ಯಾರಿ- ಮೇಗನ್ ದಂಪತಿಗೆ ಹೆಣ್ಣು ಮಗು 'ಲಿಲ್ಲಿಬೆಟ್' ಜನನ

ಬ್ರಿಟನ್‌ನ ರಾಜಮನೆತನದ ಪ್ರಿನ್ಸ್ ಹ್ಯಾರಿ ಮತ್ತು ಮೇಗನ್ ಮಾರ್ಕಲ್ ದಂಪತಿಗೆ ಹೆಣ್ಣು ಮಗು ಜನನವಾಗಿದ್ದು, ಮಗುವಿಗೆ 'ಲಿಲ್ಲಿಬೆಟ್' ಡಯಾನಾ ಎಂದು ಹೆಸರಿಡಲಾಗಿದೆ.
ಪ್ರಿನ್ಸ್ ಹ್ಯಾರಿ ಮತ್ತು ಮೇಗನ್ ದಂಪತಿ
ಪ್ರಿನ್ಸ್ ಹ್ಯಾರಿ ಮತ್ತು ಮೇಗನ್ ದಂಪತಿ

ಲಂಡನ್: ಬ್ರಿಟನ್‌ನ ರಾಜಮನೆತನದ ಪ್ರಿನ್ಸ್ ಹ್ಯಾರಿ ಮತ್ತು ಮೇಗನ್ ಮಾರ್ಕಲ್ ದಂಪತಿಗೆ ಹೆಣ್ಣು ಮಗು ಜನನವಾಗಿದ್ದು, ಮಗುವಿಗೆ 'ಲಿಲ್ಲಿಬೆಟ್' ಡಯಾನಾ ಎಂದು ಹೆಸರಿಡಲಾಗಿದೆ.

ಈ ಕುರಿತಂತೆ ಲಂಡನ್ ಅರಮನೆಯ ಪತ್ರಿಕಾ ಕಾರ್ಯದರ್ಶಿಗಳು ಪ್ರಕಟಣೆ ಮೂಲಕ ತಿಳಿಸಿದ್ದು, ಜೂನ್ 4 ಶುಕ್ರವಾರ ಬೆಳಗ್ಗೆ ಅಮೆರಿಕದ ಕ್ಯಾಲಿಪೋರ್ನಿಯಾದ ಸಂತಾ ಬಾರ್ಬರಾ ಕಾಟೇಜ್ ಆಸ್ಪತ್ರೆಯಲ್ಲಿ  11.40 ಕ್ಕೆ ಮಗುವಿನ ಜನನವಾಗಿದೆ. ಈ ವೇಳೆ ತಂದೆ ಹ್ಯಾರಿ ಕೂಡ ಹಾಜರಿದ್ದರು. ಮಗು ಮತ್ತು ತಾಯಿ  ಆರೋಗ್ಯವಾಗಿದ್ದಾರೆ. ಹುಟ್ಟಿದಾಗ ಮಗು 3.486 ಕಿಲೋ ಗ್ರಾಂ ತೂಕವಿತ್ತು ಎಂದು ಪ್ರಕಟಣೆ ತಿಳಿಸಿದೆ.

ಈ ದಂಪತಿಗಳ ಎರಡನೇ ಮಗು ಇದಾಗಿದ್ದು, ಈ ದಂಪತಿಗೆ 2019 ರಲ್ಲಿ ಮೊದಲ ಗಂಡು ಮಗು ಆರ್ಚಿ ಜನನವಾಗಿತ್ತು. 

ಮುತ್ತಜ್ಜಿಯ ಹೆಸರು
ಪ್ರಸ್ತುತ ಜನನವಾಗಿರುವ ಹೆಣ್ಣು ಮಗುವಿಗೆ ಲಿಲ್ಲಿಬೆಟ್ (ಲಿಲ್ಲಿ ಡಯನಾ) ಎಂದು ನಾಮಕರಣ ಮಾಡಲಾಗಿದೆ. ಲಿಲ್ಲಿಬೆಟ್ ಎಂಬುದು ಆಕೆಯ ಮುತ್ತಜ್ಜಿ ರಾಣಿ ಎಲಿಜಬೆತ್ II ಹೆಸರಾಗಿದೆ ಎನ್ನಲಾಗಿದೆ. ರಾಣಿ ಎಲಿಜಬೆತ್ II ಅವರನ್ನು ಕುಟುಂಬ ಸದಸ್ಯರು ಲಿಲಿಬೆಟ್ ಎಂದು ಕರೆಯತ್ತಿದ್ದರು ಎನ್ನಲಾಗಿದೆ. ಅಜ್ಜಿ, ವೇಲ್ಸ್  ರಾಜಕುಮಾರಿಯ ಗೌರವಾರ್ಥವಾಗಿ ಈ ಹೆಸರಿಡಲಾಗಿದೆ ಎಂದು ತಿಳಿದುಬಂದಿದೆ. 

ಮಗಳು ಲಿಲ್ಲಿಯ ಆಗಮನದಿಂದ ನಮಗೆ ಅತೀವ ಸಂತೋಷವಾಗಿದೆ. ನಾವು ಊಹಿಸಿದ್ದಕಿಂತಲೂ ಹೆಚ್ಚು ಪ್ರಪಂಚದಾದ್ಯಂತ ನಮಗೆ ದಕ್ಕಿದ ಪ್ರೀತಿ ಮತ್ತು ಪ್ರಾರ್ಥನೆಗಳಿಗೆ ಕೃತಜ್ಞರಾಗಿರುತ್ತೇವೆ ಎಂದು ಪ್ರಿನ್ಸ್ ಹ್ಯಾರಿ ಮತ್ತು ಡಚಸ್ ಆಫ್ ಸುಸೆಕ್ಸ್ ಮೇಗನ್ ಅವರು ತಿಳಿಸಿದ್ದಾರೆ.

ಮೇಘನ್ ಮತ್ತು ಪ್ರಿನ್ಸ್ ಹ್ಯಾರಿ ತಮ್ಮ ರಾಜಮನೆತನದ ಹುದ್ದೆಗಳಿಂದ ಕಳೆದ ವರ್ಷ ಅಧಿಕೃತವಾಗಿ ಕೆಳಗಿಳಿದಿದ್ದರು. ಕಳೆದ ವರ್ಷದಿಂದಲೂ ಅವರು ದಕ್ಷಿಣ ಕ್ಯಾಲಿಫೋರ್ನಿಯಾದ ತಮ್ಮ ಹೊಸ ಮನೆಯಲ್ಲಿ ಪುತ್ರ ಆರ್ಚಿಯೊಂದಿಗೆ ವಾಸಿಸುತ್ತಿದ್ದಾರೆ. ಇದೀಗ ಈ ಪುಟ್ಟ ರಾಯಲ್ ಕುಟುಂಬಕ್ಕೆ ಲಿಲಿಬೆಟ್  ಆಗಮನವಾದಂತಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com