ಇಸ್ಲಾಮಾಬಾದ್: ಭಾರತದ ಪರ ಗೂಢಚಾರ ನಡೆಸಿರುವ ಆರೋಪಕ್ಕೊಳಗಾಗಿ ಪಾಕಿಸ್ತಾನ ಜೈಲಿನಲ್ಲಿರುವ ಕುಲಭೂಷಣ್ ಜಾದವ್ ನ್ಯಾಯಾಲಯ ವಿಚಾರಣೆಗೆ ಸಂಬಂಧಿಸಿದಂತೆ ವಕೀಲರನ್ನು ನೇಮಿಸಲು ಭಾರತಕ್ಕೆ ಪಾಕ್ ಉಚ್ಛನ್ಯಾಯಾಲಯ ಕಾಲಾವಕಾಶ ನೀಡಿದೆ.
51 ವರ್ಷದ ನಿವೃತ್ತ ನೌಕಾದಳ ಅಧಿಕಾರಿಯಾಗಿರುವ ಕುಲಭೂಷಣ್ ಜಾದವ್ ಅವರಿಗೆ ಈ ಹಿಂದೆ ಪಾಕ್ ಸೇನಾ ನ್ಯಾಯಾಲಯ ಬೇಹುಗಾರಿಕೆ ಮತ್ತು ಭಯೋತ್ಪಾದನಾ ಚಟುವಟಿಕೆ ನಡೆಸಿದ ಆರೋಪದಡಿ 2017ರಲ್ಲಿ ಮರಣದಂಡನೆ ಸಜೆ ವಿಧಿಸಿತ್ತು.
ಪಾಕ್ ಸೇನಾ ನ್ಯಾಯಾಲಯದ ತೀರ್ಪಿನ ವಿರುದ್ಧ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಕುಲಭೂಷಣ್ ಜಾದವ್ ಅವರಿಗೆ ಯಾವುದೇ ಬಗೆಯ ರಾಜತಾಂತ್ರಿಕ ನೆರವನ್ನು ನೀಡಲು ಪಾಕ್ ಸಮ್ಮತಿ ಸೂಚಿಸಿಲ್ಲ ಹಾಗೂ ಮರಣದಂಡನೆ ತೀರ್ಪು ಪ್ರಶ್ನಾರ್ಹ ಎಂದು ಭಾರತ ವಾದಿಸಿತ್ತು.
ಇತ್ತಂಡಗಳ ವಾದ ಆಲಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯ ಜಾದವ್ ಅವರಿಗೆ ರಾಜತಾಂತ್ರಿಕ ನೆರವನ್ನು ನೀಡಬೇಕು ಹಾಗೂ ಮರಣದಂಡನೆ ತೀರ್ಪನ್ನು ಪುನರ್ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿತ್ತು.
Advertisement