ಆಫ್ಘಾನಿಸ್ತಾನದಲ್ಲಿ ಸೇನಾ ಪಾತ್ರ ವಹಿಸದಂತೆ ಭಾರತಕ್ಕೆ ತಾಲೀಬಾನ್ ಎಚ್ಚರಿಕೆ!

ತಾಲೀಬಾನ್ ಉಗ್ರ ಸಂಘಟನೆ ಆಫ್ಘಾನಿಸ್ತಾನದಲ್ಲಿ ಸೇನಾ ಪಾತ್ರ ವಹಿಸದಂತೆ ಭಾರತಕ್ಕೆ ಎಚ್ಚರಿಕೆ ನೀಡಿದೆ. 
ತಾಲೀಬಾನ್
ತಾಲೀಬಾನ್

ಕಾಬೂಲ್: ಆಫ್ಘಾನಿಸ್ತಾನದಲ್ಲಿ ಸಲ್ಮಾ ಅಣೆಕಟ್ಟು, ರಸ್ತೆ ನಿರ್ಮಾಣ ಅಭಿವೃದ್ಧಿ ವಿಚಾರಗಳಂತಹ ಮೂಲಸೌಕರ್ಯ ಯೋಜನೆಗಳಿಗೆ ಕೈಜೋಡಿಸಿರುವ ಭಾರತದ ಮಾನವೀಯ ಹಾಗೂ ಅಭಿವೃದ್ಧಿ ನೆರವನ್ನು ಸ್ವಾಗತಿಸಿರುವ ತಾಲೀಬಾನ್ ಉಗ್ರ ಸಂಘಟನೆ ಆಫ್ಘಾನಿಸ್ತಾನದಲ್ಲಿ ಸೇನಾ ಪಾತ್ರ ವಹಿಸದಂತೆ ಭಾರತಕ್ಕೆ ಎಚ್ಚರಿಕೆ ನೀಡಿದೆ. 

ಎಎನ್ಐ ಜೊತೆ ಮಾತನಾಡಿರುವ ಕತಾರ್ ಮೂಲದ ತಾಲೀಬಾನ್ ಉಗ್ರ ಸಂಘಟನೆಯ ವಕ್ತಾರ ಸುಹೈಲ್ ಶಹೀನ್ "ಸೇನಾ ಪಾತ್ರ ಎಂದರೇನು ಅರ್ಥ? ಆಫ್ಘಾನಿಸ್ತಾನದ ಸೇನೆಗೆ ಬಂದು ಅಲ್ಲಿ ಅವರ ಅಸ್ತಿತ್ವ ಇರುವುದಾದರೆ ಅದರಿಂದ ಅವರಿಗೆ ಒಳ್ಳೆಯದಾಗುವುದಿಲ್ಲ. ಆಫ್ಘಾನಿಸ್ತಾನದಲ್ಲಿ ಬೇರೆ ರಾಷ್ಟ್ರಗಳ ಸೇನಾ ಇರುವಿಕೆಯ ಪರಿಸ್ಥಿತಿಯನ್ನು ಅವರು ನೋಡಿದ್ದಾರೆ ಎನಿಸುತ್ತದೆ. ಈ ವಿಷಯ ಅವರಿಗೆ ತೆರೆದ ಪುಸ್ತಕವಾಗಿದೆ. ಆದರೆ ಭಾರತ ಆಫ್ಘಾನಿಸ್ತಾನದ ಜನತೆಗೆ ಹಾಗೂ ರಾಷ್ಟ್ರೀಯ ಯೋಜನೆಗಳಿಗೆ ಚಾಚಿರುವ ಸಹಾಯ ಹಸ್ತ ಶ್ಲಾಘನೀಯ ಎಂದೂ ತಾಲೀಬಾನ್ ಹೇಳಿದೆ. 

ಭಾರತ ಆಫ್ಘಾನಿಸ್ತಾನದಲ್ಲಿ ಸಂಸತ್ ಭವನ, ಶಾಲೆ, ರಸ್ತೆ, ಜಲಾಶಯಗಳ ನಿರ್ಮಾಣಕ್ಕೆ 2 ಬಿಲಿಯನ್ ಹೂಡಿ ಮಾಡಿದೆ. ಆಫ್ಘಾನಿಸ್ತಾನದ ಜನತೆಗೆ ಭಾರತ ಮಾಡಿರುವ ಎಲ್ಲಾ ಸಹಾಯವನ್ನು ನಾವು ಶ್ಲಾಘಿಸುತ್ತೇವೆ ಎಂದು ಶಾಹೀನ್ ಹೇಳಿದ್ದಾರೆ. 

ಆಫ್ಘಾನಿಸ್ತಾನ ಯುದ್ಧಗ್ರಸ್ತವಾಗಿದ್ದು ಹಲವು ಪ್ರಾಂತ್ಯಗಳು ಈಗಾಗಲೇ ತಾಲೀಬಾನ್ ವಶವಾಗಿವೆ. ಈ ಹಿನ್ನೆಲೆಯಲ್ಲಿ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳು ಅಲ್ಲಿನ ರಾಯಭಾರಿ ಕಚೇರಿಗಳಿಂದ ಅಧಿಕಾರಿಗಳನ್ನು, ಜನತೆಯನ್ನು ವಾಪಸ್ ಕರೆಸಿಕೊಳ್ಳುತ್ತಿವೆ. 

ಇದೇ ವೇಳೆ ರಾಯಭಾರ ಕಚೇರಿಗಳು, ರಾಜತಾಂತ್ರಿಕ ಅಧಿಕಾರಿಗಳನ್ನು ಟಾರ್ಗೆಟ್ ಮಾಡುವುದಿಲ್ಲ ಎಂಬ ಭರವಸೆ ನೀಡಿರುವ ತಾಲೀಬಾ, "ನಮ್ಮಿಂದ ರಾಜತಾಂತ್ರಿಕ ಅಧಿಕಾರಿಗಳು, ರಾಯಭಾರ ಕಚೇರಿಗಳಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ, ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳುವುದು ಅವರಿಗೆ ಬಿಟ್ಟ ವಿಚಾರ" ಎಂದು ಹೇಳಿದೆ

ಪಕ್ತಿಯಾ ಪ್ರಾಂತ್ಯದಲ್ಲಿರುವ ಗುರುದ್ವಾರದಲ್ಲಿ ಸಿಖ್ ಧಾರ್ಮಿಕ ಧ್ವಜವನ್ನು ಇಳಿಸಿದ ಘಟನೆಯನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿ  ಆಫ್ಘಾನಿಸ್ತಾನದಲ್ಲಿ ಜೀವಿಸುತ್ತಿರುವ ಹಿಂದೂಗಳು, ಸಿಖ್ ಸಮುದಾಯದವರ ಸುರಕ್ಷತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ತಾಲೀಬಾನ್ ವಕ್ತಾರರು, ಸಿಖ್ ಸಮುದಾಯದವರೇ ಸಿಖ್ ಧ್ವಜವನ್ನು ಕೆಳಗಿಳಿಸಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರಿಗೆ ಅವರ ಧರ್ಮವನ್ನು ಆಚರಿಸಲು ಅವಕಾಶವಿರಲಿದೆ ಎಂದು ಹೇಳಿದ್ದಾರೆ. 

ಗುರುದ್ವಾರದಲ್ಲಿನ ಘಟನೆ ವರದಿಯಾದಾಗ ನಮ್ಮ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದೆವು. ನಮ್ಮ ಭದ್ರತಾ ಪಡೆಗಳು ಗುರುದ್ವಾರಕ್ಕೆ ತೆರಳಿ ಸಮಸ್ಯೆಯನ್ನು ಆಲಿಸಿದರು ಎಂದು ವಕ್ತಾರರು ತಿಳಿಸಿದ್ದಾರೆ. 

ಇದೇ ವೇಳೆ ಪಾಕಿಸ್ತಾನದ ಮೂಲದ ಲಷ್ಕರ್ ಎ ತಯ್ಬಾ ಹಾಗೂ ತಾಲೀಬಾನ್ ಆಳವಾದ ಸಂಬಂಧಗಳನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ. ದಶಕಗಳ ನಂತರ ಶುರಾಗಳು ಪಾಕಿಸ್ತಾನದ ನಗರಗಳಾದ ಕ್ವೆಟ್ಟಾ ಹಾಗೂ ಪೇಷಾವರಗಳಿಂದ ಕಾರ್ಯನಿರ್ವಹಣೆ ಮಾಡುತ್ತಿದ್ದು, ತಲೀಬಾನಿಗಳ ನಾಯಕರು ಪಾಕಿಸ್ತಾನದ ಐಎಸ್ಐ ನೊಂದಿಗೆ ಉತ್ತಮ ಸಂಬಂಧ ಹೊಂದಿದೆ. 

ಇನ್ನು ಒಂದು ವೇಳೆ ಆಫ್ಘಾನಿಸ್ತಾನ ತಾಲೀಬಾನಿಗಳ ವಶವಾದರೆ ಆಫ್ಘಾನಿಸ್ತಾನದ ನೆಲ ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಕೆಯಾಗಲಿದೆ ಎಂಬ ಆತಂಕವೂ ಭಾರತಕ್ಕೆ ಇದೆ. ಆದರೆ ಈ ಆರೋಪಳನ್ನು ನಿರಾಕರಿಸಿರುವ ತಾಲೀಬಾನ್ ವಕ್ತಾರರು ಆಫ್ಘಾನಿಸ್ತಾನದ ನೆಲವನ್ನು ಭಾರತ ಸೇರಿದಂತೆ ಯಾವುದೇ ದೇಶದ ವಿರುದ್ಧದ ಚಟುವಟಿಕೆಗಳಿಗೆ ಬಳಕೆ ಮಾಡಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com