ತಾಲಿಬಾನಿಗಳು ಇಷ್ಟು ಕಡಿಮೆ ಸಮಯದಲ್ಲಿ ಒಂದಿಡೀ ದೇಶ ವಶಪಡಿಸಿಕೊಂಡಿದ್ದು ಹೇಗೆ?

ಅಫ್ಘಾನಿಸ್ತಾನ ಸಂಸತ್ತಿನೊಳಗೆ ತಾಲಿಬಾನಿಗಳು ಬಂದೂಕುಧಾರಿಗಳಾಗಿ ನುಗ್ಗುವುದನ್ನು ಇಡೀ ಜಗತ್ತೇ ಆತಂಕದಿಂದ ನೋಡುತ್ತಿದೆ. ಈ ಸಮಯದಲ್ಲಿ ನಮ್ಮೆಲ್ಲರಲ್ಲೂ ಮೂಡುತ್ತಿರುವ ಪ್ರಶ್ನೆ ಹೀಗೂ ಉಂಟೆ ಎಂಬುದಲ್ಲ, ಅತ್ಯಂತ ಕಡಿಮೆ ಸಮಯದಲ್ಲಿ ತಾಲಿಬಾನಿಗಳು ಇಡೀ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂದು. 
ಅಫ್ಘಾನಿಸ್ತಾನ ಅಧ್ಯಕ್ಷರ ನಿವಾಸಕ್ಕೆ ಲಗ್ಗೆ ಇಟ್ಟ ತಾಲಿಬಾನ್ ಬಂಡುಕೋರರು
ಅಫ್ಘಾನಿಸ್ತಾನ ಅಧ್ಯಕ್ಷರ ನಿವಾಸಕ್ಕೆ ಲಗ್ಗೆ ಇಟ್ಟ ತಾಲಿಬಾನ್ ಬಂಡುಕೋರರು
Updated on

ಕಾಬೂಲ್: ಕೇವಲ ಒಂದು ತಿಂಗಳ ಹಿಂದಷ್ಟೇ ಅಫ್ಘಾನಿಸ್ತಾನದೊಳಕ್ಕೆ ಲಗ್ಗೆಯಿಟ್ತ ತಾಲಿಬಾನ್ ಇಷ್ಟೊಂದು ಕ್ಷಿಪ್ರ ಗತಿಯಲ್ಲಿ ದೇಶವನ್ನೇ ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಕೆಲ ಸಮಯದ ಹಿಂದಶ್ಟೇ ತಾಲಿಬಾನ್ ದೇಶದ ಶೇ.೬೫ರಷ್ಟು ಭಾಗವನ್ನು ವಶಪಡಿಸಿಕೊಂಡಿದೆ ಎಂದು ಹೇಳಲಾಗಿತ್ತು. ಅಷ್ಟರೊಳಗೇ ತಾಲಿಬಾನ್ ದೇಶದ ಚುಕ್ಕಾಣಿ ಹಿಡಿದುಬಿಟ್ಟಿದೆ. ಸಂಸತ್ತಿನೊಳಗೆ ತಾಲಿಬಾನಿಗಳು ಬಂದೂಕುಧಾರಿಗಳಾಗಿ ನುಗ್ಗುವುದನ್ನು ಇಡೀ ಜಗತ್ತೇ ಆತಂಕದಿಂದ ನೋಡುತ್ತಿದೆ. ಈ ಸಮಯದಲ್ಲಿ ನಮ್ಮೆಲ್ಲರಲ್ಲೂ ಮೂಡುತ್ತಿರುವ ಪ್ರಶ್ನೆ ಹೀಗೂ ಉಂಟೆ ಎಂಬುದಲ್ಲ, ಅತ್ಯಂತ ಕಡಿಮೆ ಸಮಯದಲ್ಲಿ ತಾಲಿಬಾನಿಗಳು ಇಡೀ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂದು. 

ಆಫ್ಘನ್ ಸೇನೆ ಎಡವಿದ್ದೆಲ್ಲಿ?

ತಾಲಿಬಾನ್ ಅನ್ನು ದೇಶದಿಂದ ಹೊಡೆದೋಡಿಸಿ ಕಳೆದ 20 ವರ್ಷಗಳಿಂದ ಅಲ್ಲಿಯೇ ನೆಲೆಗೊಂಡಿದ್ದ ಅಮೆರಿಕ ಹಾಗೂ ನ್ಯಾಟೊ ಪಡೆಗಳು ಹಿಂದಕ್ಕೆ ಮರಳುವ ಪ್ರಕ್ರಿಯೆಗೆ ಚಾಲನೆ ದೊರೆಯಿತು. ಅದರ ಅಂಗವಾಗಿ ಅಮೆರಿಕ ಸಾವಿರಾರು ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿತು. ತಾನು ಅಧಿಕಾರವನ್ನು ಆಫ್ಘನ್ ಸೇನೆಯ ಕೈಗೆ ಹಸ್ತಾಂತರಿಸಿ ಪರಿಸ್ಥಿತಿ ಕೈಮೀರದಂತೆ ಸಹಾಯ ಮಾಡಿಯೇ ದೇಶ ತೊರೆಯುವುದಾಗಿ ಅಮೆರಿಕ ವಾಗ್ದಾನ ನೀಡಿತ್ತು. ಆದರೆ ಆದದ್ದೇ ಬೇರೆ. ತಾಲಿಬಾನಿಗಳು ದೇಶವನ್ನು ನುಂಗುವುದನ್ನು ಕೈಕಟ್ಟಿಕೊಂಡು ನೋಡಿತು. ಆಫ್ಘನ್ ಪಡೆಗಳು ತಾಲಿಬಾನಿಗಳ ವಿರುದ್ಧ ಹೋರಾಟ ನಡೆಸುವ ಸಮಯದಲ್ಲಿ ತಾನು ನೆರವಿಗೆ ಧಾವಿಸುವುದಾಗಿ ಹೇಳಿದ್ದರೂ ಅದೇಕೋ ಪೂರ್ಣ ಪ್ರಮಾಣದಲ್ಲಿ ಸಹಾಯವನ್ನು ಚಾಚಲಿಲ್ಲ. ಅದಕ್ಕೇ ಅಂತಾರಾಷ್ಟ್ರೀಯ ಸಮುದಾಯ ಅಮೆರಿಕವನ್ನು ದೂಷಿಸುತ್ತಿದೆ. 

ನೆರವಾದ ಆಂತರಿಕ ಭ್ರಷ್ಟಾಚಾರ

ಆಫ್ಘನ್ ಸೇನೆಯಲ್ಲಿ 3 ಲಕ್ಷ ಸೈನಿಕರಿದ್ದರು, ಕೋಟ್ಯಂತರ ರೂ. ಬೆಲೆಯ ಅಮೆರಿಕ ನಿರ್ಮಿತ ಅಸ್ತ್ರಗಳಿದ್ದವು. ಆದರೆ ಅವೆಲ್ಲವೂ ಕಾಗದಪತ್ರಗಳಲ್ಲಿ ಮಾತ್ರವೇ ಇದ್ದವು ಎಂದು ಈಗ ತಿಳಿದುಬರುತ್ತಿದೆ. ಅಸಲಿಗೆ ಆಫ್ಘನ್ ಸೇನೆ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಕಳಪೆ ನಾಯಕತ್ವ ಸೇರಿದಂತೆ ಹಲವು ಆಂತರಿಕ ಸಮಸ್ಯೆಗಲನ್ನು ಹೊಂದಿತ್ತು. ಈ ಪರಿಸ್ಥಿತಿಯ ಲಾಭವನ್ನು ತಾಲಿಬಾನ್ ಪಡೆದುಕೊಂಡಿತು. ಹಿಂದಿನ ಬಾರಿ ತಾಲಿಬಾನಿಗಳನ್ನು ಹೊಡೆದೋಡಿಸುವಲ್ಲಿ ಅಮೆರಿಕ ವಾಯುಪಡೆಯ ವಿಮಾನಗಳು ಮಹತ್ತರ ಪಾತ್ರಗಳನ್ನು ನಿರ್ವಹಿಸಿದ್ದವು. ಈ ಬಾರಿ ಅಮೆರಿಕ ವಾಯುಪಡೆಯ ಸಹಾಯ ಲಭ್ಯವಾಗಲಿಲ್ಲ. 

ಶಾಂತಿ ಒಪ್ಪಂದದ ಸೋಲು

ಕಳೆದ ವರ್ಷ ಅಮೆರಿಕ ತಾನು ದೇಶದಿಂದ ಕಾಲ್ತೆಗೆಯುವುದಾಗಿ ತಾಲಿಬಾನ್ ಶರತ್ತಿಗೆ ಸಹಿ ಹಾಕಿದಾಗಲೇ ತಾಲಿಬಾನ್ ಗೆ ಬಲ ಬಂದಿತ್ತು. ದೇಶದೊಳಕ್ಕೆ ನುಗ್ಗಲು ರಹದಾರಿ ಸಿಕ್ಕಂತಾಗಿತ್ತು. ಅಫ್ಘಾನಿಸ್ತಾನದಲ್ಲಿ ಹಲವು ತಿಂಗಳುಗಳಿಂದ ದಾಳಿ, ಸ್ಫೋಟ ಪ್ರಕರಣಗಳು ಹೆಚ್ಚಿದ್ದವು. ಅಮೆರಿಕ ದೇಶದ ನೆಲದಿಂದ ಕಾಲ್ತೆಗೆದರೆ ಮಾತ್ರ ಶಾಂತಿ ನೆಲೆಸಲು ಅನುವು ಮಾಡಿಕೊಡುವುದಾಗಿ ತಾಲಿಬಾನ್ ಶರತ್ತು ವಿಧಿಸಿತ್ತು. ಆದರೆ ಅಮೆರಿಕ ಶರತ್ತಿಗೆ ಸಹಿ ಹಾಕಿದ ನಂತರವೂ ದಾಳಿ ಪ್ರಕರಣಗಳು ಕಡಿಮೆಯಾಗಿರಲಿಲ್ಲ. ಹೀಗಾಗಿ ತಾಲಿಬಾನ್ ವಂಚನೆ ಎಸಗಿದೆ ಎನ್ನುವುದು ಸ್ಥಳೀಯರ ಆರೋಪ.

ತಾಲಿಬಾನಿಗಳಿಂದ ಸೈಕಾಲಾಜಿಕಲ್ ಯುದ್ಧ ತಂತ್ರ ಬಳಕೆ

ನೇರಾನೇರ ಶಸ್ತ್ರಾಸ್ತ್ರಗಳನ್ನು ಹಿಡಿದು ಕಾಳಗ ನಡೆಸಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಸರ್ಕಾರಿ ಅಧಿಕಾರಿಗಳು, ನೌಕರರ ಮೊಬೈಲುಗಳಿಗೆ ಒಂದರ ಹಿಂದೊಂದರಂತೆ ಸಂದೇಶಗಳನ್ನು ಕಳುಹಿಸಿ ಭಯವನ್ನು ಸೃಷ್ಟಿಸಿತ್ತು. ಆ ಸಂದೇಶಗಳಲ್ಲಿ ಇನ್ನುಮುಂದೆ ತಾಲಿಬಾನ್ ನಾಯಕತ್ವದ ಆದೇಶದಂತೆ ನಡೆಯಬೇಕು ಎಂಬುದಾಗಿ ಎಚ್ಚರಿಕೆ ಸೂಚಿಸಲಾಗಿತ್ತು. ಒಂದು ವೇಳೆ ತಮ್ಮ ಆದೇಶದಂತೆ ನಡೆಯದಿದ್ದರೆ ಪ್ರಾಣಪಾಯ ಖಚಿತ ಎನ್ನುವ ಅರ್ಥದಲ್ಲಿ ಜೀವಬೆದರಿಕೆ ಒಡ್ಡಿದ್ದರು. ಹಲವೆಡೆ ಗ್ರಾಮದ ಮುಖಂಡರ ಮೂಲಕ ತಾಲಿಬಾನಿಗಳು ಗ್ರಾಮಸ್ಥರಿಗೆ ತಮ್ಮ ಸೂಚನೆಯನ್ನು ತಲುಪಿಸಿದ್ದರು. ಆ ಮೂಲಕ ತಾಲಿಬಾನ್ ಆಡಳಿತ ಬರುವುದನ್ನು ಬಹಳ ಹಿಂದಿನಿಂದಲೇ ಸಾರುತ್ತಾ ಬಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com