The New Indian Express
ಕಾಬೂಲ್: ತಾಲಿಬಾನ್ ವಿರುದ್ಧ ಸೋತು ತೆರೆಮರೆಗೆ ಸರಿದಿರುವ ಆಫ್ಘನ್ ಭದ್ರತಾಪಡೆಗಳ ಸೈನಿಕರು ಹಾಗೂ ಸಮಾನಮನಸ್ಕರು ತಾಲಿಬಾನ್ ವಿರುದ್ಧ ಹೋರಾಟ ಜಾರಿಯಲ್ಲಿಡಲು ಪರ್ಯಾಯ ಸಂಘಟನೆಯನ್ನು ಕಟ್ಟುತ್ತಿದೆ ಎನ್ನುವ ವರದಿ ಬಹಿರಂಗವಾಗಿದೆ. ಅದಕ್ಕೆ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಎಂದು ಹೆಸರಿಡಲಾಗಿದೆ. ಅದರ ಮೂಲಕ ದೇಶದಲ್ಲಿ ತಾಲಿಬಾನ್ ಆಡಳಿತ ನಡೆಸಿದರೂ ಅದಕ್ಕೆ ವಿರೋಧಿ ಬಣ ಹುಟ್ಟು ಹಾಕುವ ಪ್ರಕ್ರಿಯೆಗೆ ಚಾಲನೆ ದೊರೆತಂತಾಗಿದೆ. ತಾಲಿಬಾನಿಗೆ ನೆಮ್ಮದಿಯಿಂದ ರಾಜ್ಯಭಾರ ಮಾಡದಂತೆ ಮಾಡುಬೇಕು ಎನ್ನುವುದು ಈ ಸಂಘಟನೆಯ ಧ್ಯೇಯವಾಗಿರಲಿದೆ. ತಾಲಿಬಾನ್ ವಿರೋಧಿ ಬಣ ಕಟ್ಟುವುದಕ್ಕೂ ಮೊದಲು ತಾವು ತಾಲಿಬಾನ್ ಜೊತೆ ಮಾತುಕತೆ ನಡೆಸುವುದಾಗಿ ನೂತನ ಸಂಘಟನೆಯ ವಕ್ತಾರರು ತಿಳಿಸಿದ್ದಾರೆ.
ಮಾತುಕತೆಯ ಮುಖ್ಯ ಉದ್ದೇಶ ತಾಲಿಬಾನ್ ಸರ್ಕಾರ ರಚಿಸುವಾಗ ಎಲ್ಲರನ್ನೂ ಗಣನೆಗೆ ತೆಗೆದುಕೊಳ್ಳಬೇಕು, ರಕ್ತಪಾತ ನಡೆಯಬಾರದು. ಒಂದುವೇಳೆ ತಾಲಿಬಾನ್ ತನ್ನ ಷರತ್ತುಗಳಿಗೆ ಒಪ್ಪದಿದ್ದರೆ ದೇಶಾದ್ಯಂತ ತಾಲಿಬಾನ್ ವಿರುದ್ಧ ಚಳವಳಿ ಹುಟ್ಟು ಹಾಕುವುದಾಗಿ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ (ಎನ್ ಆರ್ ಎಫ್) ತಿಳಿಸಿದೆ.
ತಾಲಿಬಾನ್ ದೇಶವನ್ನು ತನ್ನ ವಶಕ್ಕೆ ಪಡೆದುಕೊಂಡಾಗಿನಿಂದ ಆಫ್ಘನ್ ಭದ್ರತಾ ಪಡೆ ಸಿಬ್ಬಂದಿ ಪಂಜ್ ಶೀರ್ ಎಂಬಲ್ಲಿ ನೆಲೆ ಕಂಡುಕೊಂಡಿದ್ದರು. ಇದೀಗ ಸಾವಿರಾರು ಮಂದಿ ನಾಗರಿಕರು ಅವರಿಗೆ ಬೆಂಬಲ ಕೋರಿ ನೂತನ ಸಂಘಟನೆ ಸೇರಲು ಮುಂದಾಗಿದ್ದಾರೆ. ಮುಜಾಹಿದೀನ್ ಕಮ್ಯಾಂಡರ್ ಶಾ ಮಸೂದ್ ಪುತ್ರ ಅಹಮದ್ ಮಸೂದ್ ತಾಲಿಬಾನ್ ವಿರುದ್ಧ 9,000 ಮಂದಿ ಹೋರಾಟಗಾರರ ಈ ಪಡೆಯನ್ನು ಕಟ್ಟಿಕೊಂಡಿರುವುದಾಗಿ ತಿಳಿದುಬಂದಿದೆ. 2001ರ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ದಾಳಿಗೂ ಮುನ್ನ ಶಾ ಮಸೂದ್ ನನ್ನು ಅಲ್ ಖೈದಾ ಹತ್ಯೆ ಮಾಡಿತ್ತು.
ಇದೀಗ ಆತನ ಪುತ್ರ ಅಹಮದ್ ಮಸೂದ್ ಮೂದಾಳತ್ವದಲ್ಲಿ ಆತನ ನೂತನ ಸಂಘಟನೆಯ ಹೋರಾಟಗಾರರು ತಾಲೀಮು ನಡೆಸುತ್ತಿರುವ ಫೋಟೋ ಬಿಡುಗಡೆಯಾಗಿದ್ದು ಸಂಚಲನ ಸೃಷ್ಟಿಸಿದೆ.