Reuters
ಲಂಡನ್: ಜಗತ್ತಿನ 215ಕ್ಕೂ ಹೆಚ್ಚು ರಾಷ್ಟ್ರಗಳನ್ನು ಕಾಡುತ್ತಿರುವ ಮಾರಕ ಕೊರೋನಾ ವೈರಸ್ ಸೋಂಕಿಗೆ ಮಾತ್ರೆ ಔಷಧಿಯನ್ನು ಅನುಮೋದಿಸಿದ ಮೊದಲ ದೇಶ ಎಂಬ ಕೀರ್ತಿಗೆ ಬ್ರಿಟನ್ ಪಾತ್ರವಾಗಿದೆ.
ಹೌದು.. ಕೊವಿಡ್ ಸೋಂಕಿತರಿಗೆ ಅಮೆರಿಕದ ಔಷಧ ತಯಾರಿಕ ಕಂಪೆನಿ ಮೆರ್ಕ್ (MRK) ತಯಾರಿಸಿರುವ ಮಾತ್ರೆಗಳನ್ನು ನೀಡಲು ಬ್ರಿಟನ್ ಸರ್ಕಾರ ಒಪ್ಪಿಗೆ ನೀಡಿದ್ದು, ಆ ಮೂಲಕ ಮಾತ್ರೆಗಳನ್ನು ಕೋವಿಡ್ ಚಿಕಿತ್ಸೆಗೆ ಅನುಮೋದಿಸಿದ ಮೊದಲ ದೇಶ ಎಂಬ ಕೀರ್ತಿಗೂ ಭಾಜನವಾಗಿದೆ.
ಇದನ್ನೂ ಓದಿ: WHO ಮನ್ನಣೆ ಬೆನ್ನಲ್ಲೇ ಕೋವ್ಯಾಕ್ಸಿನ್ ಲಸಿಕೆಯ ಬಳಕೆಯ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ
ಬ್ರಿಟನ್ನ ಇತಿಹಾಸದಲ್ಲಿ ಇದು ಮಹತ್ವದ ದಿನ. ಕೊವಿಡ್ ಚಿಕಿತ್ಸೆಗೆ ಮನೆಯಲ್ಲಿಯೇ ಔಷಧ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿರುವುದು ಮಹತ್ವದ ನಿರ್ಧಾರ ಎಂದು ಬ್ರಿಟನ್ನ ಆರೋಗ್ಯ ಇಲಾಖೆ ಕಾರ್ಯದರ್ಶಿ ಸಾಜಿದ್ ಜಾವಿದ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರು.
ಅಮೆರಿಕದ ಔಷಧ ತಯಾರಿಕ ಕಂಪೆನಿ ಮೆರ್ಕ್ (MRK) ತಯಾರಿಸಿರುವ ಮಾತ್ರೆಗಳನ್ನು ಕೊರೊನಾ ಸೋಂಕಿತರಿಗೆ ನೀಡಲು ಬ್ರಿಟನ್ ಔಷಧ ನಿಯಂತ್ರಣಾ ಸಂಸ್ಥೆ ಗುರುವಾರ ಅನುಮೋದನೆ ನೀಡಿತ್ತು. ಮೊಲ್ನುಪಿರವಿರ್ ಹೆಸರಿನಲ್ಲಿ ಈ ಮಾತ್ರೆಯು ಬ್ರಿಟನ್ನಲ್ಲಿ ಜನರಿಗೆ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಭಾರತದ 'ಕೋವ್ಯಾಕ್ಸಿನ್'ಗೆ ಕೊನೆಗೂ ಸಿಕ್ತು WHO ಮನ್ನಣೆ: ತುರ್ತು ಬಳಕೆಗೆ ಒಪ್ಪಿಗೆ
ಸೋಂಕಿತರಿಗೆ ದಿನಕ್ಕೆ ಎರಡು ಬಾರಿ ಮೆರ್ಕ್ ಮಾತ್ರೆ
ಇನ್ನು ಮೆರ್ಕ್ ಸಂಸ್ಥೆ ಹೇಳಿಕೊಂಡಂತೆ, ಕೊವಿಡ್ ಸೋಂಕಿತರಿಗೆ ಈ ಮಾತ್ರೆಗಳನ್ನು ದಿನಕ್ಕೆ ಎರಡು ಬಾರಿ ನೀಡಲಾಗುವುದು. ಸೋಂಕು ದೃಢಪಟ್ಟ ಮೊದಲ ಐದು ದಿನಗಳ ಒಳಗೆ ಮನೆಗಳಲ್ಲಿಯೇ ಈ ಮಾತ್ರೆಯನ್ನು ತೆಗೆದುಕೊಳ್ಳಬಹುದಾಗಿದೆ. ಕ್ಲಿನಿಕಲ್ ಟ್ರಯಲ್ಗಳ ವೇಳೆ ಈ ಮಾತ್ರೆಯ ಪರಿಣಾಮ ಸಾಬೀತಾಗಿದ್ದು, ಸೋಂಕಿತರು ಆಸ್ಪತ್ರೆಗೆ ದಾಖಲಾಗಬೇಕಾದ ಅನಿವಾರ್ಯತೆಯನ್ನು, ಸೋಂಕಿನ ಲಕ್ಷಣಗಳನ್ನು ಮತ್ತು ಸಾವು ಸಂಭವಿಸುವ ಸಾಧ್ಯತೆಗಳನ್ನು ಇದು ಕಡಿಮೆ ಮಾಡಿತ್ತು. ಮಾತ್ರೆಯ ಕ್ಲಿನಿಕಲ್ ಟ್ರಯಲ್ನಲ್ಲಿ ಪಾಲ್ಗೊಂಡಿದ್ದ 775 ರೋಗಿಗಳ ಪೈಕಿ ಮೊದಲ 29 ದಿನಗಳಲ್ಲಿ ಯಾರೊಬ್ಬರೂ ಮೃತಪಟ್ಟಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ.