ಜಗತ್ತಿನಾದ್ಯಂತ ಒಮಿಕ್ರಾನ್ ಇದುವರೆಗೆ ಎಲ್ಲೆಲ್ಲಿ, ಎಷ್ಟು ಮಂದಿಯಲ್ಲಿ ಕಾಣಿಸಿಕೊಂಡಿದೆ?

ಕೋವಿಡ್‍ನ ರೂಪಾಂತರಿಗಳಾದ ಡೆಲ್ಟಾ, ಸಾರ್ಸ್ ಇವೆಲ್ಲವುಗಳಿಗಿಂತ ಇದು ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕಾಣಿಸಿಕೊಂಡಿದ್ದ ಬೇರೆ ಬೇರೆ ರೂಪಾಂತರಿಗಳು ಜನರ ಬದುಕನ್ನು ಹೈರಾಣಗೊಳಿಸಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೊರೋನಾ ವೈರಸ್‍ನ ಹೊಸ ರೂಪಾಂತರ ಒಮಿಕ್ರಾನ್ ಜಗತ್ತಿನಾದ್ಯಂತ ಕಾಣಿಸಿಕೊಂಡಿದೆ. ಕಳೆದ ಎರಡು ವರ್ಷಗಳಿಂದ ಕಾಣಿಸಿಕೊಂಡಿದ್ದ ಕೋವಿಡ್‍ನ ರೂಪಾಂತರಿಗಳಾದ ಡೆಲ್ಟಾ, ಸಾರ್ಸ್ ಇವೆಲ್ಲವುಗಳಿಗಿಂತ ಇದು ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕಾಣಿಸಿಕೊಂಡಿದ್ದ ಬೇರೆ ಬೇರೆ ರೂಪಾಂತರಿಗಳು ಜನರ ಬದುಕನ್ನು ಹೈರಾಣಗೊಳಿಸಿತ್ತು. ಇದೀಗ ಒಮಿಕ್ರಾನ್ ಜನರ ನಿದ್ದೆಗೆಡಿಸುತ್ತಿದೆ.

ಯುನೈಟೆಡ್ ಕಿಂಗ್‍ಡಮ್ ನಂತರ ಹೆಚ್ಚಿನ ಯುರೋಪಿಯನ್ ದೇಶಗಳಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿರುವ ವರದಿಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಗುರುತಿಸಲ್ಪಟ್ಟ ಕೆಲವೇ ದಿನಗಳ ನಂತರ, ಪ್ರಪಂಚದಾದ್ಯಂತ ಸರ್ಕಾರಗಳು ಒಮಿಕ್ರಾನ್ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿವೆ. ಈಗಾಗಲೇ ಬೆಲ್ಜಿಯಂ, ಬೋಟ್ಸ್ ವಾನಾ, ಹಾಂಗ್ ಕಾಂಗ್, ಬ್ರಿಟನ್, ಇಸ್ರೇಲ್‍ಗಳಲ್ಲಿ ಈ ವೈರಸ್ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಿಂದ ಬರುವ ಎಲ್ಲ ವಿಮಾನಗಳಿಗೆ ಕೆಲವು ದೇಶಗಳು ನಿಷೇಧ ಹೇರಿವೆ.

ಜೆಕ್ ರಿಪಬ್ಲಿಕ್:

ಉತ್ತರ ಜೆಕ್ ನಗರದ ಲಿಬೆರೆಕ್‍ನಲ್ಲಿರುವ ಪ್ರಾದೇಶಿಕ ಆಸ್ಪತ್ರೆಯ ವಕ್ತಾರರು, ಒಬ್ಬ ಮಹಿಳೆಯಲ್ಲಿ ಹೊಸ ಓಮಿಕ್ರಾನ್ ವೈರಸ್ ಪತ್ತೆಯಾಗಿರುವ ಬಗ್ಗೆ ದೃಢಪಡಿಸಿದ್ದಾರೆ. ಜೆಕ್ ಪ್ರಧಾನಿ ಆಂಡ್ರೆಜ್ ಬಾಬಿಸ್ ಅವರು, ಮಹಿಳೆಯು ನಮೀಬಿಯಾಕ್ಕೆ ಭೇಟಿ ನೀಡಿ ದಕ್ಷಿಣ ಆಫ್ರಿಕಾ ಮತ್ತು ದುಬೈ ಮೂಲಕ ಜೆಕ್ ಗಣರಾಜ್ಯಕ್ಕೆ ಮರಳಿದ್ದಾರೆ ಎಂದು ಹೇಳಿದ್ದಾರೆ.

ಇಟಲಿ:

ಮೊಜಾಂಬಿಕ್‍ಗೆ ಪ್ರಯಾಣಿಸಿದ ಇಟಾಲಿಯನ್ ವ್ಯಕ್ತಿಗೆ ಒಮಿಕ್ರಾನ್ ಕಾಣಿಸಿಕೊಂಡಿದೆ. ನವೆಂಬರ್ 11ರಂದು ವ್ಯಾಪಾರದ ಕಾರಣ ರೋಮ್‍ಗೆ ಹೋಗಿದ್ದ ಅವರು ನಪ್ಲೇಸ್‍ನಲ್ಲಿನ ಅವರ ಮನೆಗೆ ಮರಳಿದ್ದರು. ಇದೀಗ ಇಬ್ಬರು ಮಕ್ಕಳು ಸೇರಿದಂತೆ ಕುಟುಂಬದ ಐವರು ಸದಸ್ಯರಲ್ಲಿ ಒಮಿಕ್ರಾನ್ ಪಾಸಿಟಿವ್ ದೃಢಪಟ್ಟಿದೆ. ಮಿಲನ್‍ನಲ್ಲಿರುವ ಸಾಕೊ ಆಸ್ಪತ್ರೆಯು ಈ ರೂಪಾಂತರವನ್ನು ದೃಢಪಡಿಸಿದೆ ಮತ್ತು ಇಟಲಿಯ ರಾಷ್ಟ್ರೀಯ ಆರೋಗ್ಯ ಸಂಸ್ಥೆಯು ವ್ಯಕ್ತಿಯು ಎರಡು ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದಾನೆ ಎಂದು ಹೇಳಿದೆ.

ಜರ್ಮನಿ:

ನವೆಂಬರ್ 24 ರಂದು ದಕ್ಷಿಣ ಆಫ್ರಿಕಾದಿಂದ ವಿಮಾನದಲ್ಲಿ ಬಂದ ಇಬ್ಬರು ಪ್ರಯಾಣಿಕರಲ್ಲಿ ಓಮಿಕ್ರಾನ್ ರೂಪಾಂತರ ದೃಢಪಡಿಸಲಾಗಿದೆ ಎಂದು ಮ್ಯೂನಿಚ್ ಮೂಲದ ಮೈಕ್ರೋಬಯಾಲಜಿ ಸೆಂಟರ್, ಮ್ಯಾಕ್ಸ್ ವಾನ್ ಪೆಟೆನ್‍ಕೋಫರ್ ಸಂಸ್ಥೆ ತಿಳಿಸಿದೆ. ಓಮಿಕ್ರಾನ್ ರೂಪಾಂತರವು ಬಹುಶಃ ಹಲವಾರು ಪರೀಕ್ಷಿತ ವ್ಯಕ್ತಿಗಳಲ್ಲಿ ಕಂಡುಬಂದಿದೆ ಎಂದು ಡಚ್ ಸಾರ್ವಜನಿಕ ಆರೋಗ್ಯ ಸಂಸ್ಥೆಯು ಹೇಳಿದೆ. ಅವರು ಶುಕ್ರವಾರ ದಕ್ಷಿಣ ಆಫ್ರಿಕಾದಿಂದ ಎರಡು ವಿಮಾನಗಳಲ್ಲಿ ಆಮ್ ಸ್ಟರ್ ಡ್ಯಾಮ್‍ಗೆ ಬಂದ ನಂತರ ಐಸೋಲೇಟ್ ಮಾಡಲಾಗಿದೆ.

ಯುಕೆ:

ಕೊರೋನ ವೈರಸ್‍ನ ಓಮಿಕ್ರಾನ್ ರೂಪಾಂತರದ ಎರಡು ಪ್ರಕರಣಗಳು ಕಂಡುಹಿಡಿದ ನಂತರ ಮಾಸ್ಕ್ ಧರಿಸುವುದು ಮತ್ತು ಅಂತರರಾಷ್ಟ್ರೀಯ ವಿಮಾನಗಳ ಮೂಲಕ ಆಗಮಿಸುವವರ ಪರೀಕ್ಷೆಯ ಕುರಿತು ಯುಕೆ ಶನಿವಾರ ನಿಯಮಗಳನ್ನು ಬಿಗಿಗೊಳಿಸಲಾಗಿದ್ದು, ಉದ್ದೇಶಿತ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕ ಎಂದು ಬ್ರಿಟಿನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಇದೀಗ ಒಮಿಕ್ರಾನ್ ಹರಡುವಿಕೆಯನ್ನು ತಡೆಗಟ್ಟಲು ಮತ್ತು ಜನರ ರಕ್ಷಣೆಗಾಗಿ ಇದು ಜವಾಬ್ದಾರಿಯುತ ಕ್ರಮವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಸ್ರೇಲ್:

ಇಲ್ಲಿ ಒಂದು ಪ್ರಕರಣ ಕಾಣಿಸಿಕೊಂಡಿದ್ದು, ಏಳು ಶಂಕಿತ ಪ್ರಕರಣಗಳು ವರದಿಯಾಗಿದೆ. ದೃಢಪಟ್ಟವರಿಗೆ ಎರಡು ಡೋಸ್ ಲಸಿಕೆ ನೀಡಲಾಗಿದೆಯೇ ಎಂದು ಆರೋಗ್ಯ ಸಚಿವಾಲಯ ಮಾಹಿತಿ ಬಹಿರಂಗಪಡಿಸಿಲ್ಲ. ಏಳು ಶಂಕಿತ ಪ್ರಕರಣಗಳಲ್ಲಿ ಮೂವರು ಎರಡು ಡೋಸ್ ಅನ್ನು ಪಡೆದುಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಇನ್ನು ದಕ್ಷಿಣಆಫ್ರಿಕಾದ ದೇಶಗಳಿಂದ ಇತ್ತೀಚೆಗೆ ಹಿಂದಿರುಗಿದ 800 ಪ್ರಯಾಣಿಕರನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಇಸ್ರೇಲ್ ಹೇಳಿದೆ.

ನೆದರ್ ಲೆಂಡ್ಸ್:

ದಕ್ಷಿಣ ಆಫ್ರಿಕಾದಿಂದ ಎರಡು ವಿಮಾನಗಳಲ್ಲಿ ಶುಕ್ರವಾರ ಆಮ್ ಸ್ಟರ್ ಡ್ಯಾಮ್‍ಗೆ ಬಂದ ನಂತರ ಐಸೋಲೇಟ್ ಮಾಡಿದ ಪರೀಕ್ಷಿತ ಹಲವಾರು ವ್ಯಕ್ತಿಗಳಲ್ಲಿ ಓಮಿಕ್ರಾನ್ ರೂಪಾಂತರವು ಬಹುಶಃ ಕಂಡುಬಂದಿದೆ" ಎಂದು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಫಾರ್ ಪಬ್ಲಿಕ್ ಹೆಲ್ತ್ ಸಂಸ್ಥೆ ಹೇಳಿದೆ. ಇದು ಹೊಸ ರೂಪಾಂತರವೇ ಎಂದು ಖಚಿತ ಪಡಿಸಲು ಹಲವು ಪರೀಕ್ಷೆ ನಡೆಸಲಾಗುತ್ತಿದೆ. ಇದರ ಫಲಿತಾಂಶ ಭಾನುವಾರ ಪ್ರಕಟವಾಗಲಿದ್ದು, ಸುಮಾರು 61 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com