'ಓಮಿಕ್ರಾನ್' ರೂಪಾಂತರಿಗೆ ಸಡ್ಡು; ಅಮೆರಿಕ ಮೂಲದ ಔಷಧ ಸಂಸ್ಥೆ Novavaxನಿಂದ 100 ದಿನಗಳಲ್ಲಿ ಕೋವಿಡ್ ಲಸಿಕೆ ಭರವಸೆ!
ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡು ಜಗತ್ತೀನಾದ್ಯಂತ ಭಾರಿ ಆತಂಕ ಸೃಷ್ಟಿಸಿರುವ ಕೊರೋನಾ ವೈರಸ್ ಹೊಸ ರೂಪಾಂತರ 'ಓಮಿಕ್ರಾನ್' ಗೆ ಇನ್ನು 100 ದಿನಗಳಲ್ಲಿ ಪರಿಣಾಮಕಾರಿ ಲಸಿಕೆ ಸಂಶೋಧನೆ ಮಾಡುವುದಾಗಿ ಅಮೆರಿಕ ಮೂಲದ ಔಷಧ ತಯಾರಿಕಾ ಸಂಸ್ಥೆ ನೋವಾವ್ಯಾಕ್ಸ್ ಸಂಸ್ಥೆ ಭರವಸೆ ನೀಡಿದೆ.
ಈ ಕುರಿತು ಹೇಳಿಕೆ ನೀಡಿರುವ ಸಂಸ್ಥೆ ಈಗಾಗಲೇ ತಮ್ಮ ತಜ್ಞರ ತಂಡ ಲಸಿಕೆ ಸಂಶೋಧನೆಯಲ್ಲಿ ಕಾರ್ಯನಿರತವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಲಸಿಕೆಯ ಪರಿಣಾಮಕಾರಿತ್ವ ಕುರಿತು ಕಾರ್ಯ ಆರಂಭಿಸಲಿದೆ ಎಂದು ಹೇಳಿದೆ. ಮುಂದಿನ ಕೆಲವು ವಾರಗಳಲ್ಲಿ ಲಸಿಕೆ ಪರೀಕ್ಷೆ ಮತ್ತು ಉತ್ಪಾದನೆಗೆ ಸಿದ್ಧವಾಗಲಿದೆ. ಈ ಲಸಿಕೆಯು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸಬಹುದು. ಈಗಾಗಲೇ ಗುರುತಿಸಲಾಗಿರುವ ಜೀನ್ B.1.1.529 ಆಧಾರದ ಮೇಲೆ ಲಸಿಕೆಯನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದೆ ಎಂದು Novavax ಹೇಳಿದೆ.
ಪ್ರೋಟೀನ್ ಆಧರಿತ ಲಸಿಕೆ
ಅಮೆರಿಕದಲ್ಲಿ ನೊವಾವ್ಯಾಕ್ಸ್ ತಯಾರಿಸಿದ COVID-19 ಲಸಿಕೆ ಸೂಕ್ಷ್ಮಾಣು ಪ್ರೋಟೀನ್ ಅನ್ನು ಆಧರಿಸಿದ್ದು, ಈಗಾಗಲೇ ಗುರುತಿಸಲಾಗಿರುವ 'ಓಮಿಕ್ರಾನ್' ರೂಪಾಂತರಿಯ ಜೀನ್ B.1.1.529 ಆಧಾರದ ಮೇಲೆ ಲಸಿಕೆಯನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದೆ. ಆರಂಭಿಕ ಕೆಲಸ ಪೂರ್ಣಗೊಳಿಸಲು ಕೆಲವು ವಾರಗಳು ಬೇಕಾಗಬಹುದು. Omigron ಆಂಟಿಮೈಕ್ರೊಬಿಯಲ್ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು Novavax ಹೇಳಿದೆ.
ಹೇಳಿಕೆ ಬೆನ್ನಲ್ಲೇ ಏರಿಕೆ ಕಂಡ ಸಂಸ್ಥೆಯ ಷೇರು ಮೌಲ್ಯ
ಇನ್ನು ರೂಪಾಂತರಿ ಓಮಿಕ್ರಾನ್ ಗೆ ತನ್ನ ಸಂಸ್ಥೆ ಲಸಿಕೆ ಅಭಿವೃದ್ಧಿ ಪಡಿಸುತ್ತಿರುವುದಾಗಿ ಸಂಸ್ಥೆ ಹೇಳಿಕೆ ನೀಡಿದ ಬೆನ್ನಲ್ಲೇ Novavax ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ 9 ಪ್ರತಿಶತದಷ್ಟು ಏರಿಕೆ ಕಂಡಿದೆ.
ಈ ಹಿಂದೆ Novavax ಲಸಿಕೆಯ ತುರ್ತು ಬಳಕೆಯನ್ನು ಈ ತಿಂಗಳ ಆರಂಭದಲ್ಲಿ ಇಂಡೋನೇಷ್ಯಾ ಮತ್ತು ನಂತರ ಫಿಲಿಪೈನ್ಸ್ ದೇಶಗಳು ಅನುಮೋದಿಸಿದ್ದವು. ಅಲ್ಲದೆ Novavax ತನ್ನ COVID-19 ಲಸಿಕೆ ಬಳಕೆಗಾಗಿ ಸಿಂಗಾಪುರ ಸರ್ಕಾರದ ಅನುಮೋದನೆ ಕೋರಿದೆ. ಒಂದು ವೇಳೆ ವಿಶೇಷ ಅನುಮತಿಯ ಅಡಿಯಲ್ಲಿ ಈ ಲಸಿಕೆಯನ್ನು ಅನುಮೋದಿಸಿದರೆ ಸಿಂಗಪುರದಲ್ಲಿ ಇದು ಮೊದಲ ಪ್ರೋಟೀನ್ ಆಧಾರಿತ COVID-19 ಲಸಿಕೆಯಾಗಲಿದೆ.
ಇತರೆ ಸಂಸ್ಥೆಗಳಿಂದಲೂ ಲಸಿಕೆ ಪ್ರಯೋಗ
ಮತ್ತೊಂದೆಡೆ ನೋವಾವ್ಯಾಕ್ಸ್ ಮಾತ್ರವಲ್ಲದೇ ಜರ್ಮನಿಯ ಬಯೋಎನ್‌ಟೆಕ್ ಮತ್ತು ಅಮೆರಿಕ ಮೂಲದ ಜಾನ್ಸನ್ ಮತ್ತು ಜಾನ್ಸನ್‌ನಂತಹ ದೈತ್ಯ ಸಂಸ್ಥೆಗಳೂ ಕೂಡ ‘ಓಮಿಕ್ರಾನ್’ ರೂಪಾಂತರದ ವಿರುದ್ಧ ತಮ್ಮ ಲಸಿಕೆಗಳ ಪರಿಣಾಮಕಾರಿತ್ವವನ್ನು ಪರೀಕ್ಷಿಸುತ್ತಿವೆ. ಅಂತೆಯೇ, Inovio ಫಾರ್ಮಾಸ್ಯುಟಿಕಲ್ಸ್ ತನ್ನ ಕೋವಿಡ್ ಲಸಿಕೆ INO-4800 ನ ಪರಿಣಾಮಕಾರಿತ್ವವನ್ನು ಹೊಸ ರೂಪಾಂತರದ ವಿರುದ್ಧ ಪರೀಕ್ಷಿಸಲು ಪ್ರಾರಂಭಿಸಿದೆ. ಪರೀಕ್ಷಾ ಪ್ರಕ್ರಿಯೆಯು ಪೂರ್ಣಗೊಳ್ಳಲು ಸುಮಾರು ಒಂದೆರಡು ವಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ