ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಬರಾದರ್ ನೇತೃತ್ವದಲ್ಲಿ ಆಫ್ಘನ್ ಸರ್ಕಾರ ರಚನೆ
ಅಮೆರಿಕ ಸೇನೆ ಹಿಂತೆಗೆತ ಮತ್ತು ಆಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡ ಬಳಿಕ ತಾಲಿಬಾನ್ ಸರ್ಕಾರ ರಚನೆಗೆ ಅಂತಿಮ ಕಸರತ್ತು ನಡೆಸಿದ್ದು, ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಬರಾದರ್ ನೇತೃತ್ವದಲ್ಲೇ ಆಫ್ಘನ್ ಸರ್ಕಾರ ರಚನೆಯಾಗಲಿದೆ ಎಂದು ತಿಳಿದುಬಂದಿದೆ.
Published: 03rd September 2021 02:14 PM | Last Updated: 03rd September 2021 02:33 PM | A+A A-

ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಬರಾದರ್ (ರಾಯಿಟರ್ಸ್ ಚಿತ್ರ)
ಕಾಬೂಲ್: ಅಮೆರಿಕ ಸೇನೆ ಹಿಂತೆಗೆತ ಮತ್ತು ಆಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡ ಬಳಿಕ ತಾಲಿಬಾನ್ ಸರ್ಕಾರ ರಚನೆಗೆ ಅಂತಿಮ ಕಸರತ್ತು ನಡೆಸಿದ್ದು, ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಬರಾದರ್ ನೇತೃತ್ವದಲ್ಲೇ ಆಫ್ಘನ್ ಸರ್ಕಾರ ರಚನೆಯಾಗಲಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ತಾಲಿಬಾನ್ ಸಂಘಟನೆ ಮಾಹಿತಿ ನೀಡಿದ್ದು, ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಬರಾದರ್ ಹೊಸ ಅಫ್ಘಾನ್ ಸರ್ಕಾರವನ್ನು ಮುನ್ನಡೆಸಲಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಹೇಳಿದೆ.
ಇನ್ನು ಅಮೆರಿಕ ಸೇನೆ ಆಫ್ಘಾನಿಸ್ತಾನದಿಂದ ಕಾಲ್ಕಿತ್ತ ಬಳಿಕ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು ಮೊದಲೇ ಸಂಕಷ್ಟದಲ್ಲಿದ್ದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಸರ್ಕಾರಿ ಸಂಸ್ಥೆಗಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದು, ಸರ್ಕಾರಿ ಕಚೇರಿಗಳು ಸಿಬ್ಬಂದಿಗಳಿಲ್ಲದೇ ಮುಚ್ಚಲ್ಪಟ್ಟಿವೆ. ಅಲ್ಲದೆ ಗಾಯದ ಮೇಲೆ ಬರೆ ಎಂಬಂತೆ ಅತ್ತ ಪಂಜ್ ಶೀರ್ ನಲ್ಲಿ ತಾಲಿಬಾನ್ ಆಡಳಿತವನ್ನು ಒಪ್ಪಿಕೊಳ್ಳದ ನಾರ್ಥರ್ನ್ ಅಲಯನ್ಸ್ ಪಡೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು ಅಲ್ಲಿಯೂ ಭೀಕರ ಯುದ್ಧ ಮುಂದುವರೆದಿದೆ.
ಹೀಗಾಗಿ ನೂತನ ಸರ್ಕಾರ ರಚನೆ ಮಾಡುತ್ತಿರುವ ತಾಲಿಬಾನ್ ಮೇಲೆ ಅತೀವ ಒತ್ತಡವಿದ್ದು, ಸರ್ಕಾರ ರಚನೆ ಮಾಡಿದರೂ ತಾಲಿಬಾನ್ ಗೆ ಆಡಳಿತ ಕಬ್ಬಿಣದ ಕಡಲೆಯಾಗಿರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬರಾದರ್ ಸರ್ಕಾರದಲ್ಲಿ ತಾಲಿಬಾನ್ ಮುಖಂಡರು
ಇನ್ನು ನೂತನ ತಾಲಿಬಾನ್ ಸರ್ಕಾರದಲ್ಲಿ ಮುಲ್ಲಾ ಬರಾದರ್ ಮುಖ್ಯಸ್ಥರಾಗಿದ್ದರೆ. ದಿವಂಗತ ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ ಅವರ ಪುತ್ರ ಮುಲ್ಲಾ ಮೊಹಮ್ಮದ್ ಯಾಕೂಬ್ ಮತ್ತು ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್ಜಾಯ್ ಅವರು ಸರ್ಕಾರದ ಪ್ರಮುಖ ಹುದ್ದೆಗಳನ್ನು ಅಲಂಕರಿಸಲಿದ್ದಾರೆ ಎನ್ನಲಾಗಿದೆ.