'ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ': ಆಫ್ಘಾನಿಸ್ತಾನದಿಂದ ಅಮೆರಿಕ ಕಾಲ್ಕಿತ್ತ ಬೆನ್ನಲ್ಲೇ  ತಾಲಿಬಾನ್ ಯೂ ಟರ್ನ್!

ಆಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಸಂಪೂರ್ಣವಾಗಿ ಕಾಲ್ಕಿತ್ತ ಬೆನ್ನಲ್ಲೇ ಉಲ್ಟಾ ಹೊಡೆದಿರುವ ತಾಲಿಬಾನ್ ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ ಎಂದು ಹೇಳಿದೆ.
ತಾಲಿಬಾನ್ (ಸಂಗ್ರಹ ಚಿತ್ರ)
ತಾಲಿಬಾನ್ (ಸಂಗ್ರಹ ಚಿತ್ರ)

ಕಾಬೂಲ್: ಆಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಸಂಪೂರ್ಣವಾಗಿ ಕಾಲ್ಕಿತ್ತ ಬೆನ್ನಲ್ಲೇ ಉಲ್ಟಾ ಹೊಡೆದಿರುವ ತಾಲಿಬಾನ್ ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ ಎಂದು ಹೇಳಿದೆ.

ಈ ಹಿಂದೆ ಭಾರತ ಮತ್ತು ಪಾಕಿಸ್ತಾನ ದೇಶಗಳ ಆಂತರಿಕ ವಿಚಾರವಾದ ಕಾಶ್ಮೀರದ ವಿಚಾರವಾಗಿ ತಾನು ತಲೆದೋರಿಸುವುದಿಲ್ಲ. ಅದು ಆ ದೇಶಗಳ ಆಂತರಿಕ ಸಮಸ್ಯೆಯಾಗಿದ್ದು, ಅವುಗಳೇ ಪರಿಹರಿಸಿಕೊಳ್ಳಬೇಕು. ತಾನು ಇದರಲ್ಲೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದ ತಾಲಿಬಾನ್ ಇದೀಗ ಮತ್ತೆ ಉಲ್ಟಾ ಹೊಡೆದಿದ್ದು, ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ ಎಂದು ಹೇಳಿದೆ.

ಬಿಬಿಸಿ ಉರ್ದು ಸುದ್ದಿವಾಹಿನಿಯ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ತಾಲಿಬಾನ್ ವಕ್ತಾರ ಸುಹೈಲ್‌ ಶಾಹಿನ್‌, "ನಾನು ಮುಸ್ಲಿಮರಾಗಿರುವ ಕಾರಣ ಕಾಶ್ಮೀರದ, ಭಾರತದ ಹಾಗೂ ವಿಶ್ವದ ಯಾವುದೇ ದೇಶದ ಮುಸ್ಲಿಮರ ಪರವಾಗಿ ಧ್ವನಿ ಎತ್ತುವ ಹಕ್ಕಿದೆ," ಎಂದು ಹೇಳಿದ್ದಾರೆ. 

"ನಾವು ನಮ್ಮ ಧ್ವನಿಯನ್ನು ಎತ್ತುತ್ತೇವೆ ಹಾಗೂ ಮುಸ್ಲಿಮರು ಎಲ್ಲರೂ ನಿಮ್ಮ ಜನರು ಎಂದು ಹೇಳುತ್ತೇವೆ. ಹಾಗೆಯೇ ಮುಸ್ಲಿಮರು ಕೂಡಾ ನಿಮ್ಮ ನಾಗರಿಕರು ಎಂದು ನಾವು ಹೇಳುತ್ತೇವೆ. ಎಲ್ಲಾ ದೇಶಗಳಲ್ಲಿಯೂ ಮುಸ್ಲಿಮರಿಗೆ ಸಮಾನವಾದ ಹಕ್ಕು ಆ ದೇಶದ ಕಾನೂನಿನ ಅಡಿಯಲ್ಲಿ ಸಿಗಬೇಕು ಎಂದು ಹೇಳಿದ್ದಾರೆ. 

ಈ ಹಿಂದೆ ಕಾಶ್ಮೀರ ಭಾರತದ ಆಂತರಿಕ ವಿಚಾರ ಎಂದಿದ್ದ ತಾಲಿಬಾನ್‌ 
ಕಾಬೂಲ್‌ ಅನ್ನು ತನ್ನ ವಶಕ್ಕೆ ಪಡೆದುಕೊಂಡ ಕೆಲವು ದಿನಗಳ ನಂತರ ತಾಲಿಬಾನ್‌, "ಕಾಶ್ಮೀರದ ವಿಚಾರದ ಭಾರತಕ್ಕೆ ಸಂಬಂಧಿಸಿದ ಆಂತರಿಕ ವಿಚಾರ," ಎಂದು ಹೇಳಿತ್ತು. "ಕಾಶ್ಮೀರ ವಿಚಾರ ಎರಡು ದೇಶಗಳಿಗೆ ಬಿಟ್ಟಿದ್ದು, ಭಾರತ-ಪಾಕಿಸ್ತಾನ ಕುಳಿತು ಬಗೆಹರಿಸಿಕೊಳ್ಳಲಿ," ಎಂದು ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ಹೇಳಿದ್ದರು. ಪಾಕಿಸ್ತಾನ ನಮಗೆ ಎರಡನೇ ಮನೆ ಇದ್ದಂತೆ ಆದರೆ ಎರಡು ದೇಶಗಳ ನಡುವಿನ ವಿಚಾರಕ್ಕೆ ನಾವು ತಲೆ ಹಾಕುವುದಿಲ್ಲ ಅದನ್ನು ಅವರೇ ಬಗೆಹರಿಸಿಕೊಳ್ಳಲಿ ಎಂದಿದ್ದರು. 

ಈಗಿನ ಅಫ್ಘಾನಿಸ್ತಾನ ಆಡಳಿತವು ಪಾಕಿಸ್ತಾನವನ್ನು ತನ್ನ ಎರಡನೇ ಮನೆ ಎಂದು ಭಾವಿಸಿದೆ. ಹೀಗಾಗಿ ಆ ದೇಶದ ವಿರುದ್ಧದ ಚಟುವಟಿಕೆಗಳಿಗೆ ಅಫ್ಘಾನಿಸ್ತಾನದ ನೆಲದಲ್ಲಿ ಅವಕಾಶ ನೀಡುವುದಿಲ್ಲ ಎಂದು ಮುಜಾಹಿದ್ ಸಂದರ್ಶನದಲ್ಲಿ ಹೇಳಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com