ಪಂಜಶೀರ್ ಪ್ರಾಂತ್ಯ ನಮ್ಮ ತೆಕ್ಕೆಗೆ ಎಂದ ತಾಲಿಬಾನ್; ಕೇವಲ ರಸ್ತೆ ಮಾತ್ರ ನಿಯಂತ್ರಣದಲ್ಲಿದೆ ಎಂದು ತಿರುಗೇಟು ಕೊಟ್ಟ ರೆಸಿಸ್ಟೆನ್ಸ್ ಫೋರ್ಸ್!
ಕಾಬೂಲ್: ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ತಾಲಿಬಾನ್ ಉಗ್ರರು ಇದೀಗ ಪಂಜ್‌ಶೀರ್ ಪ್ರಾಂತ್ಯವನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡಿರುವುದಾಗಿ ಘೋಷಿಸಿದ್ದು, ಇದಕ್ಕೆ ತಿರುಗೇಟು ನೀಡಿರುವ ರೆಸಿಸ್ಟೆನ್ಸ್ ಫೋರ್ಸ್ ಪಂಜ್ ಶೀರ್ ನ ರಸ್ತೆ ಮಾತ್ರ ನಿಮ್ಮ ನಿಯಂತ್ರಣದಲ್ಲಿದೆ ಎಂದು ತಿರುಗೇಟು ನೀಡಿದೆ.
ಈ ಹಿಂದೆ ಪಂಜ್‌ಶೀರ್‌ನ ಎಲ್ಲ ಜಿಲ್ಲೆಗಳನ್ನು ವಶಕ್ಕೆ ಪಡೆದಿದ್ದೇವೆ. ಯಾರ ವಿರುದ್ಧವೂ ಆಫ್ಘನ್ ಭೂಮಿ ಬಳಕೆಗೆ ಅವಕಾಶವಿಲ್ಲ. ಅಫ್ಘಾನಿಸ್ತಾನವನ್ನು ಮರಳಿ ಕಟ್ಟುವ ಕಡೆ ನಮ್ಮ ಗಮನ ಇರಲಿದೆ ಎಂದು ತಾಲಿಬಾನ್ ಸಂಘಟನೆ ವಕ್ತಾರ ಸುಹೈಲ್ ಶಾಹಿನ್ ಹೇಳಿಕೆ ನೀಡಿದ್ದರು.
ರೆಸಿಸ್ಟೆನ್ಸ್ ಫೋರ್ಸ್ ತಿರುಗೇಟು
ಈ ಹೇಳಿಕೆಗೆ ರೆಸಿಸ್ಟೆನ್ಸ್ ಫೋರ್ಸ್ ತಿರುಗೇಟು ನೀಡಿದ್ದು, ಪಂಜ್‌ಶೀರ್ ಕಣಿವೆ ಮೇಲೆ ಇನ್ನೂ ನಮ್ಮ ಹಿಡಿತವಿದೆ. ತಾಲಿಬಾನ್ ಕೇವಲ ಪಂಜ್‌ಶೀರ್ ರಸ್ತೆಯನ್ನು ವಶಕ್ಕೆ ಪಡೆದಿದೆ. ಪಂಜ್‌ಶೀರ್ ಪ್ರಾಂತ್ಯ ಅವರ ಹಿಡಿತಕ್ಕೆ ಸಿಲುಕಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರೆಸಿಸ್ಟೆನ್ಸ್ ಫೋರ್ಸ್, 'ಪಂಜಶೀರ್ ಅನ್ನು ಆಕ್ರಮಿಸಿಕೊಂಡಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ. ಆದರೆ ಅದು ಸುಳ್ಳು. ಹೋರಾಟವನ್ನು ಮುಂದುವರಿಸಲು ಕಣಿವೆಯಾದ್ಯಂತ ಎಲ್ಲಾ ಆಯಕಟ್ಟಿನ ಸ್ಥಾನಗಳಲ್ಲಿ NRF (National Resistance Front of Afghanistan)ಗಳು ಇವೆ. ತಾಲಿಬಾನ್ ಮತ್ತು ಅವರ ಪಾಲುದಾರರ ವಿರುದ್ಧದ ಹೋರಾಟವು ನ್ಯಾಯ ಮತ್ತು ಸ್ವಾತಂತ್ರ್ಯದವರೆಗೂ ಮುಂದುವರಿಯುತ್ತದೆ ಎಂದು ಅಫ್ಘಾನಿಸ್ತಾನದ ಜನರಿಗೆ ನಾವು ಭರವಸೆ ನೀಡುತ್ತೇವೆ ಎಂದು ಹೇಳಿದೆ.
ಕೆಲ ದಿನಗಳ ಹಿಂದೆಯೂ ತಾಲಿಬಾನ್ ಪಂಜ್‌ಶೀರ್ ಬಗ್ಗೆ ಮಾತನಾಡಿದ್ದಾಗ ಅಲ್ಲಿನ ನಾಯಕರು ಇದೇ ರೀತಿ ತಿರುಗೇಟು ನೀಡಿ ನಾವು ತಾಲಿಬಾನ್ಗಳ ಬೆದರಿಕೆಗೆ ಜಗ್ಗುವುದಿಲ್ಲ ಎಂದು ಹೇಳಿದ್ದರು.
ರೆಸಿಸ್ಟೆನ್ಸ್ ಫೋರ್ಸ್ ನ ವಕ್ತಾರ ಸೇರಿ ಮೂವರ ಕೊಂದ ತಾಲಿಬಾನ್
ಇನ್ನು ಪಂಜ್ ಶೀರ್ ನಲ್ಲಿ ನಡೆಯುತ್ತಿರುವ ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ರೆಸಿಸ್ಟೆನ್ಸ್ ಫೋರ್ಸ್ ನ ವಕ್ತಾರ ಸೇರಿ ಮೂವರು ಹೋರಾಟಗಾರರು ಸಾವನ್ನಪ್ಪಿದ್ದಾರೆ. ನ್ಯಾಶನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ ಪಡೆಯ ವಕ್ತಾರ ಫಾಹಿಮ್ ದಷ್ಟಿ ಸೇರಿ ಒಟ್ಟು ಮೂವರು ಪ್ರಮುಖ ನಾಯಕರು ಸಾವನ್ನಪ್ಪಿದ್ದಾರೆ ಎಂದು ಸ್ವತಃ ಎನ್ಆರ್ ಎಫ್ ಟ್ವೀಟ್ ಮಾಡಿದೆ. ಅದಾಗ್ಯೂ ತಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದೆ.
ಇದೇ ವಿಚಾರವಾಗಿ ಅಫ್ಘಾನಿಸ್ತಾನ ಪತ್ರಕರ್ತ ಫ್ರೆಡ್ ಬೆಜಾನ್ ಕೂಡ ಫಾಹಿಮ್ ದಷ್ಟಿ ಸಾವಿನ ಬಗ್ಗೆ ಟ್ವೀಟ್ ಮಾಡಿದ್ದಾರೆ. ತಾಲಿಬಾನಿಗಳ ದಾಳಿಗೆ ಪಂಜಶಿರ್ ಹೋರಾಟ ಪಡೆಯ ವಕ್ತಾರ ಫಾಹಿಮ್ ದಷ್ಟಿ ಸೇರಿ ಮೂವರು ಪ್ರಮುಖ ನಾಯಕರು ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಇದು ಪಂಜಶಿರ್ ಪ್ರತಿರೋದಕ ಪಡೆಗೆ ದೊಡ್ಡ ಹೊಡೆತ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಇದೇ ಫಾಹಿಮ್ ದಷ್ಟಿ ಟ್ವೀಟ್ ಮಾಡಿ, ನಾವು ತಾಲಿಬಾನಿಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದೇವೆ. 600ಕ್ಕೂ ಹೆಚ್ಚು ಉಗ್ರರನ್ನು ಕೊಂದಿದ್ದೇವೆ. ಸುಮಾರು 100 ಉಗ್ರರು ನಮ್ಮ ಸೆರೆಯಲ್ಲಿ ಇದ್ದಾರೆ ಎಂದು ಹೇಳಿದ್ದರು.
ಸಾಲೇಹ್ ಮೊಹಮ್ಮದ್ ಸಾವು !
ಮತ್ತೊಂದು ಮೂಲದ ಪ್ರಕಾರ ಎನ್ಆರ್ಎಫ್ಎ ಪಡೆಯ ಇನ್ನೊಬ್ಬ ಮುಖ್ಯ ಕಮಾಂಡರ್ ಸಾಲೇಹ್ ಮೊಹಮ್ಮದ್ರನ್ನು ಕೂಡ ಕೊಂದಿದ್ದಾಗಿ ತಾಲಿಬಾನ್ ಹೇಳಿಕೊಂಡಿದೆ. ಇವರೂ ಕೂಡ ಪ್ರಮುಖ ನಾಯಕರೇ ಆಗಿದ್ದು, ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದರು. ಪ್ರಮುಖ ನಾಯಕರನ್ನೆಲ್ಲ ಕಳೆದುಕೊಂಡ ಪಂಜಶಿರ್ ಪಡೆ ಇದೀಗ ಮಾತುಕತೆಗೆ ಮುಂದಾಗಿದೆ ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ