ಪಾಕಿಸ್ತಾನ: ಧರ್ಮ ನಿಂದನೆ ಎಸಗಿದ್ದ ಮಹಿಳೆಗೆ ಮರಣದಂಡನೆ

ಪ್ರವಾದಿ ಮುಹಮ್ಮದ್ ಅವರ ನಂತರ ಮುಂದಿನ ಪ್ರವಾದಿ ತಾನೇ ಎಂದು ಘೋಷಿಸಿಕೊಂಡಿದ್ದಕ್ಕಾಗಿ ಪಾಕಿಸ್ತಾನದಲ್ಲಿ ಮಹಿಳೆಯೊಬ್ಬಳಿಗೆ ಮರಣದಂಡನೆ ವಿಧಿಸಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ಪ್ರವಾದಿ ಮುಹಮ್ಮದ್ ಅವರ ನಂತರ ಮುಂದಿನ ಪ್ರವಾದಿ ತಾನೇ ಎಂದು ಘೋಷಿಸಿಕೊಂಡಿದ್ದಕ್ಕಾಗಿ ಪಾಕಿಸ್ತಾನದಲ್ಲಿ ಮಹಿಳೆಯೊಬ್ಬಳಿಗೆ ಮರಣದಂಡನೆ ವಿಧಿಸಲಾಗಿದೆ. 

ಪ್ರಕರಣದಲ್ಲಿ ಆ ಮಹಿಳೆ ಧರ್ಮ ನಿಂದನೆ ಎಸಗಿರುವುದು ವಿಚಾರಣೆಯಲ್ಲಿ ಸಾಬೀತಾಗಿದೆ ಎಂದು ಹೆಚ್ಚುವರಿ ಜಿಲ್ಲಾ, ಸೆಷನ್ಸ್‌ ನ್ಯಾಯಾಧೀಶ ಮನ್ಸೂರ್‌ ಅಹ್ಮದ್‌ ಅಂತಿಮ ತೀರ್ಪು ಪ್ರಕಟಿಸಿದ್ದಾರೆ. ನಿಷ್ಟಾರ್ ಕಾಲೋನಿಯಲ್ಲಿ ಖಾಸಗಿ ಶಾಲೆಯ ಪ್ರಿನ್ಸಿಪಾಲ್‌ ಸಲ್ಮಾ ತನ್ವೀರ್ ಇಸ್ಲಾಂ ಕೊನೆಯ ಪ್ರವಾದಿ ಮಹಮದ್‌ ಅಲ್ಲ ತಾನೇ ಮುಂದಿನ ಪ್ರವಾದಿ ಎಂದು ಘೋಷಿಸಿಕೊಂಡಿದ್ದರು.

ಈ ಸಂಬಂಧ ಸ್ಥಳೀಯ ಧಾರ್ಮಿಕ ನಾಯಕ ನೀಡಿದ್ದ ದೂರಿನ ಮೇರೆಗೆ ಲಾಹೋರ್ ಪೊಲೀಸರು 2013 ರಲ್ಲಿ ತನ್ವೀರ್ ವಿರುದ್ಧ ದೈವದೂಷಣೆ ಮೊಕದ್ದಮೆ ದಾಖಲಿಸಿದ್ದರು. ಆಕೆ ಪರ ವಕೀಲ ಮುಹಮ್ಮದ್ ರಂಜಾನ್, ತನ್ನ ಕಕ್ಷಿದಾರೆ ಮಾನಸಿಕ ಅಸ್ವಸ್ಥರಾಗಿದ್ದು, ಆಕೆಯ ಮನಸ್ಸು ಸ್ಥಿಮಿತದಲ್ಲಿರುವುದಿಲ್ಲ ಎಂಬ ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಸಲ್ಲಿಸಿದ ಪಂಜಾಬ್ ಮಾನಸಿಕ ಆರೋಗ್ಯ, ವೈದ್ಯಕೀಯ ಮಂಡಳಿಯ ವರದಿಯಲ್ಲಿ ಆಕೆಯ ಮಾನಸಿಕ ಸ್ಥಿತಿ ಉತ್ತಮವಾಗಿಯೇ ಇದೆ ಎಂದು ಹೇಳಿದೆ.

ಇದರಿಂದ ಆಕೆ ನೀಡಿದ್ದ ಹೇಳಿಕೆ ಧರ್ಮನಿಂದನೆ ಎಂದು ಪರಿಗಣಿಸಿದ ನ್ಯಾಯಾಲಯ ತನ್ವೀರ್ ಗೆ ಮರಣದಂಡನೆ ವಿಧಿಸಿದೆ. ಅಲ್ಲದೆ ರೂ 5,000 ದಂಡವನ್ನು (ಪಾಕಿಸ್ತಾನದ ಕರೆನ್ಸಿಯಲ್ಲಿ) ವಿಧಿಸಿದೆ. ಪಾಕಿಸ್ತಾನದಲ್ಲಿ ಧರ್ಮನಿಂದೆಯ ಕಾನೂನುಗಳಡಿ ವಿಧಿಸಿದ ಶಿಕ್ಷೆಗಳು ತುಂಬಾ ಕಠಿಣವಾಗಿವೆ. 1987 ರಿಂದ ಧರ್ಮನಿಂದನೆಯ ಕಾನೂನಿನ ಅಡಿಯಲ್ಲಿ ಕನಿಷ್ಠ 1,472 ಪ್ರಕರಣಗಳು ದಾಖಲಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com