ಶೇ 52 ರಷ್ಟು ಇಂಧನ ಬೆಲೆ ಹೆಚ್ಚಳ: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಪ್ರತಿಭಟನೆಗಳು, ಸರ್ಕಾರದ ವಿರುದ್ಧ ಆಕ್ರೋಶ

ಬಾಂಗ್ಲಾದೇಶದಲ್ಲಿ ಇಂಧನ ಬೆಲೆಗಳ ತೀವ್ರ ಏರಿಕೆ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಂಗ್ಲಾದೇಶದ ಮಾಧ್ಯಮಗಳ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಶೇ 50ಕ್ಕಿಂತ ಹೆಚ್ಚು ಹೆಚ್ಚಿಸಿದ್ದು, ಇದು 'ಈವರೆಗಿನ ಅತ್ಯಧಿಕ ಹೆಚ್ಚಳ' ಎನ್ನಲಾಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಢಾಕಾ: ಬಾಂಗ್ಲಾದೇಶದಲ್ಲಿ ಇಂಧನ ಬೆಲೆಗಳ ತೀವ್ರ ಏರಿಕೆ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಂಗ್ಲಾದೇಶದ ಮಾಧ್ಯಮಗಳ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಶೇ 50ಕ್ಕಿಂತ ಹೆಚ್ಚು ಹೆಚ್ಚಿಸಿದ್ದು, ಇದು 'ಈವರೆಗಿನ ಅತ್ಯಧಿಕ ಹೆಚ್ಚಳ' ಎನ್ನಲಾಗಿದೆ. ಬೆಲೆ ಏರಿಕೆ ವಿರುದ್ಧ ಆಕ್ರೋಶಗೊಂಡ ಜನರು, ಬಾಂಗ್ಲಾದೇಶದಾದ್ಯಂತ ಇರುವ ಇಂಧನ ಕೇಂದ್ರಗಳನ್ನು ಸುತ್ತುವರಿದು ಅನಿರೀಕ್ಷಿತ ಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರವು ಶುಕ್ರವಾರ ಇಂಧನ ದರ ಹೆಚ್ಚಳ ಮಾಡಿತು. ನಂತರ ಡೀಸೆಲ್ ದರ ಪ್ರತಿ ಲೀಟರ್‌ಗೆ 34 ಟಾಕಾ, ಆಕ್ಟೇನ್ ಪ್ರತಿ ಲೀಟರ್‌ಗೆ 46 ಟಾಕಾ ಮತ್ತು ಪೆಟ್ರೋಲ್ ದರ ಲೀಟರ್‌ಗೆ 44 ಟಾಕಾ ಹೆಚ್ಚಾಗಿದೆ. ಹಲವಾರು ಬಾಂಗ್ಲಾದೇಶದ ಮಾಧ್ಯಮಗಳು, ಏರಿಕೆಯಾಗಿರುವ ಇಂಧನ ಬೆಲೆಯು ಶೇ 51.7 ರಷ್ಟಾಗಿದ್ದು, ದೇಶವು ಸ್ವಾತಂತ್ರ್ಯ ಪಡೆದ ನಂತರದ ಇದು ಅತ್ಯಧಿಕ ಏರಿಕೆಯಾಗಿದೆ ಎಂದು ಹೇಳಿವೆ.

ಸರ್ಕಾರವು ಇಂಧನ ಬೆಲೆ ಏರಿಕೆಯನ್ನು ಘೋಷಿಸುತ್ತಿದ್ದಂತೆ, ಜನರು ತಮ್ಮ ವಾಹನಗಳ ಟ್ಯಾಂಕ್‌ಗಳನ್ನು ತುಂಬಲು ತಡರಾತ್ರಿಯಲ್ಲೇ ಇಂಧನ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಹಲವಾರು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ.

ದಕ್ಷಿಣ ಏಷ್ಯಾದ ಈ ದೇಶದ $416 ಶತಕೋಟಿ ಆರ್ಥಿಕತೆಯು ಕೆಲ ವರ್ಷಗಳಿಂದ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿದೆ. ಆದರೆ, ಹೆಚ್ಚುತ್ತಿರುವ ಇಂಧನ ಮತ್ತು ಆಹಾರದ ಬೆಲೆಗಳು ಅದರ ಆಮದು ಬಿಲ್ ಅನ್ನು ಹೆಚ್ಚಿಸಿವೆ. ಇದು ಅಂತರರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ಜಾಗತಿಕ ಸಾಲ ನೀಡುವ ಸಂಸ್ಥೆಗಳಿಂದ ಸಾಲವನ್ನು ಪಡೆಯಲು ಸರ್ಕಾರವನ್ನು ಪ್ರೇರೇಪಿಸಿದೆ. ಹೀಗಾಗಿ ಸರ್ಕಾರವು ಒತ್ತಡಕ್ಕೆ ಸಿಲುಕಿದೆ.

'ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಭಾಯಿಸುವಲ್ಲಿ ಸಾಮಾನ್ಯ ಜನರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರವು ಸಾರ್ವಜನಿಕ ಆಸ್ತಿಯನ್ನು ಲೂಟಿ ಮತ್ತು ದುರುಪಯೋಗ ಮಾಡಿಕೊಳ್ಳುತ್ತಿರುವುದರಿಂದ ಜನರು ತೊಂದರೆಗೆ ಸಿಲುಕಿದ್ದಾರೆ' ಎಂದು ಪ್ರತಿಭಟನಾಕಾರರೊಬ್ಬರು ಹೇಳಿರುವುದಾಗಿ ಢಾಕಾ ಟ್ರಿಬ್ಯೂನ್ ಉಲ್ಲೇಖಿಸಿದೆ.

ಸರ್ಕಾರದ ಘೋಷಣೆಯ ನಂತರ ಬಸ್‌ಗಳಲ್ಲಿ ಪ್ರಯಾಣ ದರವೂ ಹೆಚ್ಚಾಗಿದ್ದು, ಹಲವು ಸಂಘಟನೆಗಳು ಇಧನ್ನು ತಿರಸ್ಕರಿಸಿವೆ. ಸರಿಯಾದ ವೆಚ್ಚ ವಿಶ್ಲೇಷಣೆ ನಂತರ ಬಸ್ ಹೊಸ ಪ್ರಯಾಣ ದರವನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಾಗಿರುವ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಇಂಧನ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಬಾಂಗ್ಲಾದೇಶದ ಇಂಧನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಸರ್ಕಾರದ ಬಾಂಗ್ಲಾದೇಶ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿ) ಆರು ತಿಂಗಳಲ್ಲಿ ಜುಲೈ ವರೆಗಿನ ಇಂಧನ ಮಾರಾಟದಲ್ಲಿ 8 ಬಿಲಿಯನ್ ಟಾಕಾ (85 ಮಿಲಿಯನ್ ಡಾಲರ್) ನಷ್ಟವನ್ನು ಅನುಭವಿಸಿದೆ.

ಸದ್ಯ ನವೀಕರಿಸಿದ ಬೆಲೆಗಳನ್ನು ಒಪ್ಪಿಕೊಳ್ಳಲು ಪ್ರತಿಯೊಬ್ಬರಿಗೂ ಸಾಧ್ಯವಿಲ್ಲ. ಆದರೆ, ನಮಗೆ ಬೇರೆ ಆಯ್ಕೆ ಇರಲಿಲ್ಲ. ಜನರು ತಾಳ್ಮೆಯಿಂದಿರಬೇಕು. ಜಾಗತಿಕ ಬೆಲೆಗಳು ಕುಸಿದರೆ ಬೆಲೆಗಳನ್ನು ಸರಿಹೊಂದಿಸಲಾಗುವುದು ಎಂದು ವಿದ್ಯುತ್, ಇಂಧನ ಮತ್ತು ಖನಿಜ ಸಂಪನ್ಮೂಲಗಳ ರಾಜ್ಯ ಸಚಿವ ನಸ್ರುಲ್ ಹಮೀದ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಬಾಂಗ್ಲಾದೇಶದಲ್ಲಿ ಹಣದುಬ್ಬರವು ಸತತ ಒಂಬತ್ತು ತಿಂಗಳವರೆಗೆ ಶೇ 6 ರಷ್ಟು ದಾಖಲಾಗಿತ್ತು. ಜುಲೈನಲ್ಲಿ ವಾರ್ಷಿಕ ಹಣದುಬ್ಬರವು ಶೇಕಡಾ 7.48 ಕ್ಕೆ ತಲುಪಿದೆ. ಹೀಗಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ತಮ್ಮ ದೈನಂದಿನ ಖರ್ಚುಗಳನ್ನು ಸರಿದೂಗಿಸಲು ಪರದಾಡುವಂತಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com