ರಷ್ಯಾದಿಂದ ಅನಿಲ ಪೂರೈಕೆ ಸ್ಥಗಿತ; ಕೊರೆವ ಚಳಿಯ ನಡುವೆ ಕತ್ತಲಿನೆಡೆಗೆ ಯುರೋಪ್?

ಯುರೋಪಿನ ಗ್ಯಾಸ್ ಬಳಕೆ ತೀವ್ರವಾಗಿ ಕುಸಿದಿತ್ತು. ರಷ್ಯಾ ಸಣ್ಣ ಪ್ರಮಾಣದಲ್ಲಿ ಗ್ಯಾಸ್ ಸರಬರಾಜು ಸ್ಥಗಿತಗೊಳಿಸುತ್ತಿದ್ದ ಹಾಗೇ ಯುರೋಪಿನ ಮನೆಗಳು, ಉದ್ಯಮಗಳು, ಶಕ್ತಿ ಮೂಲಗಳು ನಲುಗಿ ಹೋದವು.
ನಾರ್ಡ್ ಸ್ಟ್ರೀಮ್ 1 ಗ್ಯಾಸ್ ಪೈಪ್ ಲೈನ್
ನಾರ್ಡ್ ಸ್ಟ್ರೀಮ್ 1 ಗ್ಯಾಸ್ ಪೈಪ್ ಲೈನ್
Updated on

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ರಷ್ಯಾ ಉಕ್ರೇನಿನ ಮೇಲೆ ದಾಳಿ ಮಾಡುತ್ತಿದ್ದ ಹಾಗೇ ಮಾಸ್ಕೋ ಮೇಲೆ ಎಲ್ಲಾ ರೀತಿಯ ನಿರ್ಬಂಧಗಳನ್ನು ಹೇರಿ, ರಷ್ಯಾವನ್ನು ನಿರ್ಬಂಧಿಸಬೇಕೆಂಬ ಕೂಗುಗಳೆದ್ದಿದ್ದವು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರನ್ನು ಮಂಡಿಯೂರುವಂತೆ ಮಾಡಬೇಕೆಂದು ಯುರೋಪಿನ ರಾಷ್ಟ್ರಗಳು ಒಂದರ ಮೇಲೊಂದು ಸ್ಪರ್ಧೆಗೆ ಬಿದ್ದಿದ್ದವು. ಅವುಗಳು ತಮ್ಮಿಂದ ರಷ್ಯಾಗೆ ಹೋಗುತ್ತಿದ್ದ ಹಣದ ಹರಿವನ್ನು ಸಂಪೂರ್ಣವಾಗಿ ನಿರ್ಬಂಧಿಸಿದರು. ರಷ್ಯಾ ಆರ್ಥಿಕತೆ ಕುಸಿದು ಹೋಗುವಂತೆ ಮಾಡಲು ಸಾಕಷ್ಟು ಕಠಿಣ ಕ್ರಮಗಳನ್ನೂ ಕೈಗೊಂಡರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಯುರೋಪಿಯನ್ ರಾಷ್ಟ್ರಗಳು ಈಗ ನಾಮುಂದು ತಾಮುಂದು ಎಂದು ರಷ್ಯಾದಿಂದ ಗ್ಯಾಸ್ ಖರೀದಿಯ ಡೀಲ್ ಕೈಗೆತ್ತಿಕೊಳ್ಳಲು ಸ್ಪರ್ಧೆಗಿಳಿದಿವೆ.

ಯುರೋಪ್ ನಾರ್ಡ್ ಸ್ಟ್ರೀಮ್ 1 (ಎನ್‌ಎಸ್1 - ರಷ್ಯಾದಿಂದ ಜರ್ಮನಿಗೆ ಪೈಪ್ ಲೈನ್ ಪುನರಾರಂಭ) ಕುರಿತ ನಾಟಕ ಆರಂಭವಾಗುವ ಮೊದಲೇ ಯುರೋಪಿನಲ್ಲಿ ಶಕ್ತಿಮೂಲಗಳ ಕೊರತೆ ಎದುರಾಗಿತ್ತು. ಹತ್ತು ದಿನಗಳ ಕಾಲ ರಿಪೇರಿಗೆಂದು ಮುಚ್ಚಿದ್ದ ಈ ಪ್ರಮುಖ ಪೈಪ್ ಲೈನ್ ಮೂಲಕ ಮತ್ತೆ ಗುರುವಾರದಿಂದ ನೈಸರ್ಗಿಕ ಅನಿಲ ಹರಿಯಲು ಆರಂಭಿಸಿದೆ. ಇಡಿಯ ಯುರೋಪ್ ತಮ್ಮ ಮನೆಗಳನ್ನು ಕೊರೆಯುವ ಚಳಿಯಿಂದ ಬೆಚ್ಚಗಿಡಲು ಮತ್ತು ಉದ್ಯಮಗಳನ್ನು ಚಾಲ್ತಿಯಲ್ಲಿಡಲು ಪರದಾಡುತ್ತಿತ್ತು.

ಯುರೋಪಿನ ಗ್ಯಾಸ್ ಬಳಕೆ ತೀವ್ರವಾಗಿ ಕುಸಿದಿತ್ತು. ರಷ್ಯಾ ಸಣ್ಣ ಪ್ರಮಾಣದಲ್ಲಿ ಗ್ಯಾಸ್ ಸರಬರಾಜು ಸ್ಥಗಿತಗೊಳಿಸುತ್ತಿದ್ದ ಹಾಗೇ ಯುರೋಪಿನ ಮನೆಗಳು, ಉದ್ಯಮಗಳು, ಶಕ್ತಿ ಮೂಲಗಳು ನಲುಗಿ ಹೋದವು. ಶಕ್ತಿ ಸಂಪನ್ಮೂಲ ಪೂರೈಸುವ ಸಾಮರ್ಥ್ಯ ಹೊಂದಿರುವ ರಷ್ಯಾ ಒಂದನ್ನು ಹೊರತುಪಡಿಸಿ ಇಡಿಯ ಯುರೋಪ್ ಕತ್ತಲಲ್ಲಿ ಮುಳುಗಿ ಹೋಗಿದೆ. ಇದರೊಡನೆ ರಷ್ಯಾ ಅಧ್ಯಕ್ಷ ಪುಟಿನ್ ಅನಿಲ ಪೂರೈಕೆ ಇನ್ನೂ ಸ್ಥಗಿತಗೊಳ್ಳಲಿದೆ ಎಂದು ಈಗಾಗಲೇ ಬೆದರಿಸಿದ್ದಾರೆ.

ವಾರ್ಷಿಕ ರಿಪೇರಿಗಳು ಆರಂಭವಾಗುವ ಮೊದಲೇ ಎನ್‌ಎಸ್1 ಮೂಲಕ ಹರಿಯುವ ಅನಿಲವನ್ನು 60% ಕಡಿತಗೊಳಿಸಲಾಗಿತ್ತು. ಅನಿಲ ಪೂರೈಕೆ ಪೈಪ್ ಲೈನಿನ ಸಾಮರ್ಥ್ಯಕ್ಕಿಂತ ಸಾಕಷ್ಟು ಕಡಿಮೆ ಇರುತ್ತದೆಂದು ಅಂದಾಜಿಸಲಾಗಿತ್ತು. ಸರ್ಕಾರಿ ಅಧಿಕಾರಿಗಳು ಪೈಪ್ ಲೈನ್ ಇನ್ನೆಂದೂ ಕಾರ್ಯಾಚರಿಸುವುದಿಲ್ಲ ಎಂದು ಹೆದರಿಕೊಂಡಿದ್ದರು. ಪುಟಿನ್ ಅನಿಲ ಪೂರೈಕೆಯನ್ನು ಯುರೋಪಿಯನ್ ಯೂನಿಯನ್ನಿನ ಮೇಲೆ ಉಕ್ರೇನ್ ವಾರ್ ವಿಚಾರದಲ್ಲಿ ಹತೋಟಿ ಸಾಧಿಸಲು ಬಳಸಿಕೊಳ್ಳುತ್ತಿದ್ದಾರೆಂದು ಆರೋಪಗಳು ಬಂದಿದ್ದವು.

ರಷ್ಯಾ ಯುರೋಪಿಗೆ ಅನಿಲ ಪೂರೈಕೆ ಸ್ಥಗಿತಗೊಳಿಸಿದೆಯೆ?

ರಷ್ಯಾ ಅನಿಲ ಪೂರೈಕೆಯನ್ನು ಗಮನಾರ್ಹವಾಗಿ ಕಡಿತಗೊಳಿಸಿದೆ. ಉಕ್ರೇನ್ ಮೇಲಿನ ದಾಳಿಗೂ ಮೊದಲೇ ರಷ್ಯಾ ಕಡಿಮೆ ಅವಧಿಯ ಸ್ಪಾಟ್ ಮಾರುಕಟ್ಟೆಗೆ ಅನಿಲ ಪೂರೈಸುತ್ತಿರಲಿಲ್ಲ. ಆದರೆ ಯುರೋಪಿಯನ್ ಒಕ್ಕೂಟ ರಷ್ಯಾದ ಬ್ಯಾಂಕುಗಳು ಮತ್ತು ಕಂಪನಿಗಳ ಮೇಲೆ ನಿರ್ಬಂಧ ಹೇರಿ, ಉಕ್ರೇನ್‌ಗೆ ಆಯುಧ ಸರಬರಾಜು ಮಾಡುತ್ತಿದ್ದಂತೆ ರಷ್ಯಾ ಆರು ದೇಶಗಳಿಗೆ ಅನಿಲ ಪೂರೈಕೆ ಸ್ಥಗಿತಗೊಳಿಸಿ, ಇನ್ನೂ ಆರು ದೇಶಗಳಿಗೆ ಕಡಿತಗೊಳಿಸಿತು.

ಯುರೋಪಿನ ನಾಯಕರು ಇದು ಅನಿರ್ದಿಷ್ಟತೆ ಉಂಟುಮಾಡಲು ಮತ್ತು ಅನಿಲ ದರವನ್ನು ಏರಿಸಲು‌ ಪುಟಿನ್ ಕೈಗೊಂಡ ರಾಜಕೀಯ ಕ್ರಮ ಎಂದರು. ಇದರ ಪರಿಣಾಮವಾಗಿ ಯುರೋಪಿಯನ್ ಯೂನಿಯನ್ನಿನ 27 ಸದಸ್ಯ ರಾಷ್ಟ್ರಗಳು ಚಳಿಗಾಲಕ್ಕೆ ಮೊದಲು ತಮ್ಮಲ್ಲಿರುವ ಅನಿಲ ಕೊರತೆ ಪೂರೈಸಿಕೊಳ್ಳಲು ಪರದಾಡುತ್ತಿವೆ. ಬೇಡಿಕೆ ಹೆಚ್ಚಾದಾಗ ಕಂಪನಿಗಳು ಮನೆಗಳನ್ನು ಮತ್ತು ಉದ್ಯಮಗಳನ್ನು ಬೆಚ್ಚಗಿಡಲು ಶೇಖರಿಸಿಟ್ಟಿದ್ದ ಅನಿಲವನ್ನು ಬಳಸುವ ಅನಿವಾರ್ಯತೆ ಎದುರಾಗಿತ್ತು. ಯುರೋಪಿಯನ್ ಯೂನಿಯನ್ ಪ್ರಸ್ತುತ ಕಡಿಮೆ ಅನಿಲವನ್ನು ಬಳಸಿ, ಚಳಿಗಾಲಕ್ಕೆ ಹೆಚ್ಚಿನ ಅನಿಲ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಯುದ್ಧಕ್ಕೂ ಮೊದಲು ರಷ್ಯಾ ಯುರೋಪಿನ 40% ನೈಸರ್ಗಿಕ ಅನಿಲವನ್ನು ಪೂರೈಸುತ್ತಿತ್ತು. ಬಳಿಕ ಇದು 15%ಕ್ಕೆ ಇಳಿಕೆಯಾಗಿ, ಬೆಲೆ ಆಗಸಕ್ಕೇರುವಂತೆ ಮಾಡಿತು. ನೈಸರ್ಗಿಕ ಅನಿಲ ನಮಗೆ ಅರಿವಿಲ್ಲದಂತೆ ಸಾಕಷ್ಟು ಕಾರ್ಯಗಳಲ್ಲಿ ಬಳಕೆಯಾಗುತ್ತದೆ. ಸ್ಟೀಲನ್ನು ಕತ್ತರಿಸಿ ಕಾರ್ ತಯಾರಿಸಲು, ಗಾಜಿನ ಬಾಟಲಿಗಳನ್ನು ನಿರ್ಮಿಸಲು, ಹಾಲು ಮತ್ತು ಚೀಸ್‌ಗಳ ಪ್ಯಾಶ್ಚರೀಕರಣಕ್ಕೆ ಬಳಕೆಯಾಗುತ್ತದೆ.

ಕಂಪನಿಗಳು ಈಗಾಗಲೇ ನಾವು ಇದ್ದಕ್ಕಿದ್ದಂತೆ ಉಷ್ಣವನ್ನು ಉತ್ಪಾದಿಸಲು ನೈಸರ್ಗಿಕ ಅನಿಲದ ಬದಲಿಗೆ ತೈಲ, ವಿದ್ಯುತ್ತನ್ನು ಬಳಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿವೆ. ಅತಿಯಾದ ಅನಿಲ ದರ ಯುರೋಪಿನಲ್ಲಿ ಅತಿಯಾದ ಹಣದುಬ್ಬರದಿಂದಾಗಿ ಆರ್ಥಿಕ ಹಿಂಜರಿಕೆ ಉಂಟುಮಾಡುವ ಭೀತಿ ಎದುರಾಗಿದೆ. ಆಹಾರ, ತೈಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವುದರಿಂದ ಗ್ರಾಹಕರ ಬಳಿ ಖರ್ಚು ಮಾಡಲು ಅತಿ ಕಡಿಮೆ ಹಣ ಲಭ್ಯವಿದೆ. ಸಂಪೂರ್ಣ ಅನಿಲ ಸ್ಥಗಿತ ಈಗಾಗಲೇ ಕುಸಿದಿರುವ ಆರ್ಥಿಕತೆಗೆ ಇನ್ನಷ್ಟು ತೊಂದರೆ ನೀಡಬಹುದು.

ನಾರ್ಡ್ ಸ್ಟ್ರೀಮ್ 1 ಪೈಪ್‌ಲೈನ್?

ಇದು ಬಾಲ್ಟಿಕ್ ಸಮುದ್ರದ ಆಳದಲ್ಲಿ ರಷ್ಯಾಗೆ ನೈಸರ್ಗಿಕ ಅನಿಲ ಸಾಗಾಟದ ಪ್ರಮುಖ ಪೈಪ್‌ಲೈನ್ ಆಗಿದ್ದು, ನೈಸರ್ಗಿಕ ಅನಿಲವೇ ಜರ್ಮನಿಯ ಪ್ರಮುಖ ಶಕ್ತಿಮೂಲವಾಗಿದೆ. ಜರ್ಮನಿಯ ನೆಟ್‌ವರ್ಕ್ ನಿಯಂತ್ರಕ ಕ್ಲಾಸ್ ಮುಲರ್ ಟ್ವಿಟರ್ ಮೂಲಕ ಅನಿಲ ಪೂರೈಕೆ ಗುರುವಾರದ ಬಳಿಕ ರಿಪೇರಿಯ ಮೊದಲಿನ, 40% ಪೂರೈಕೆಗೆ ತಲುಪಬಹುದು ಎಂದಿದ್ದಾರೆ. ಎನ್ಎಸ್1 ಕಾರ್ಯಾಚರಿಸಿದರೂ, ಯುರೋಪ್ ಚಳಿಗಾಲಕ್ಕೆ ಮೊದಲು 12 ಬಿಲಿಯನ್ ಕ್ಯೂಬಿಕ್ ಮೀಟರ್ ಗ್ಯಾಸ್ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ.

ಯುರೋಪಿಗೆ ಅನಿಲ ಪೂರೈಸುವ ಪೋಲ್ಯಾಂಡ್ ಮತ್ತು ಬೆಲಾರಸ್ ಪೈಪ್‌ಲೈನ್‌ಗಳೂ ಈಗಾಗಲೇ ಸ್ಥಗಿತಗೊಂಡಿವೆ. ಉಕ್ರೇನ್ ಮತ್ತು ಸ್ಲೋವಾಕಿಯಾ ಮೂಲಕ ಸಾಗುವ ಪೈಪ್‌ಲೈನ್ ಅಲ್ಪ ಪ್ರಮಾಣದ ಅನಿಲ ಪೂರೈಸುತ್ತಿದೆ. ಟರ್ಕಿ ಮತ್ತು ಬಲ್ಗೇರಿಯಾದ ಪೈಪ್‌ಲೈನ್ ಪರಿಸ್ಥಿತಿಯೂ ಹಾಗೇ ಇದೆ. ಅನಿಲ ನಾರ್ವೇ, ನಾರ್ತ್ ಆಫ್ರಿಕಾ ಮತ್ತು ಅಜೆರ್ಬೈಜಾನ್ ಮೂಲಕವೂ ಪೈಪ್‌ಲೈನ್ ಮೂಲಕ ಯುರೋಪಿಗೆ ಲಭಿಸುತ್ತಿದೆ.

ಪುಟಿನ್ ಉದ್ದೇಶವೇನು?

ರಷ್ಯಾದ ತೈಲ ಮತ್ತು ಅನಿಲ ರಫ್ತುದಾರರು ಕಡಿಮೆ ಪ್ರಮಾಣದಲ್ಲಿ ಪೂರೈಕೆ ಮಾಡುತ್ತಿದ್ದರೂ, ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ (ಐಇಎ) ಪ್ರಕಾರ ಹೆಚ್ಚಾದ ಬೆಲೆಗಳಿಂದಾಗಿ ಪುಟಿನ್ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಯುದ್ಧದ ಸಂದರ್ಭದಲ್ಲೂ ಯುರೋಪಿಗೆ ತೈಲ ಮತ್ತು ಅನಿಲ ಪೂರೈಕೆಯಿಂದ ರಷ್ಯಾದ ಆದಾಯ ದುಪ್ಪಟ್ಟಾಗಿದ್ದು, 95 ಬಿಲಿಯನ್ ಡಾಲರ್ ಆಗಿದೆ. ಕಳೆದ ಐದು ತಿಂಗಳಲ್ಲಿ ರಷ್ಯಾದ ಶಕ್ತಿಮೂಲಗಳ ಆದಾಯ ಪೂರ್ಣ ಚಳಿಗಾಲದ ಆದಾಯಕ್ಕಿಂತಲೂ ಮೂರು ಪಟ್ಟು ಹೆಚ್ಚಾಗಿದೆ. ಪುಟಿನ್ ಕೈಯಲ್ಲಿ ಈಗ ಸಾಕಷ್ಟು ಹಣವಿದ್ದು, ಅವರು ಯುದ್ಧದ ಖರ್ಚನ್ನೂ ಹೊಂದಿಸಬಲ್ಲರು. ಅನಿಲ ಪೂರೈಕೆಯ ಬೇಡಿಕೆ ಯುರೋಪಿಯನ್ನರು ಉಕ್ರೇನ್‌ಗೆ ಬೆಂಬಲ ನೀಡುವುದರಿಂದಲೂ ಅನಿಲ ಪೂರೈಕೆಗೆ ಗಮನ ಹರಿಸುವಂತೆ ಮಾಡಬಲ್ಲದು.

"ಕಳೆದ ವರ್ಷ ಗಮನಿಸಿದಂತೆ ರಷ್ಯಾ ರಾಜಕೀಯ ಹತೋಟಿ ಸಾಧಿಸಲು ಯುರೋಪಿಗೆ ಅನಿಲ ಪೂರೈಕೆಯಿಂದ ಬರುವ ಲಾಭವನ್ನು ಬಿಟ್ಟುಕೊಡಬಹುದು ಎಂದು ನಂಬಲು ಸಾಧ್ಯವಿಲ್ಲ" ಎಂದು ಐಇಎ ಕಾರ್ಯನಿರ್ವಾಹಕ ನಿರ್ದೇಶಕ ಫೇಯ್ತ್ ಬಿರೋಲ್ ಹೇಳಿದ್ದಾರೆ. ಮಂಗಳವಾರ ಪುಟಿನ್ ಒಂದು ವೇಳೆ ಕೆನಡಾಗೆ ರಿಪೇರಿಗೆ ಕಳುಹಿಸಿರುವ ಟರ್ಬೈನ್ ಜುಲೈ ಅಂತ್ಯದೊಳಗೆ ಬರದಿದ್ದರೆ, ಎನ್‌ಎಸ್1ರ ಇನ್ನೊಂದು ಟರ್ಬೈನ್ ಸಹ ರಿಪೇರಿಗಾಗಿ ಸ್ಥಗಿತವಾಗುತ್ತದೆ, ಅದರಿಂದ ಅನಿಲ ಪೂರೈಕೆಯೂ ನಿಲ್ಲುತ್ತದೆ ಎಂದಿದ್ದರು. ಕೆನಡಾ ಕಂಪ್ರೆಶನ್ ಸ್ಟೇಷನ್ಗೆ ಬೇಕಾಗುವ ಬಿಡಿಭಾಗವನ್ನು ಪೂರೈಸಲು ಅನುಮತಿ ನೀಡಿದ್ದೇವೆ ಎಂದಿದೆ.

"ನಮ್ಮ ಪಾಲುದಾರರು ಅವರು ಮಾಡಿರುವ ತಪ್ಪನ್ನು ರಷ್ಯಾ ಮತ್ತು ಗಾಜ಼್‌ಪ್ರೊಮ್ (ರಷ್ಯಾದ ಸರ್ಕಾರಿ ಸ್ವಾಮ್ಯದ ಅನಿಲ ಪೂರೈಕೆ ಸಂಸ್ಥೆ) ಮೇಲೆ ಹೊರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಂಪೂರ್ಣ ತಪ್ಪು" ಎಂದಿದ್ದಾರೆ ಪುಟಿನ್.

ಯುರೋಪ್ ಏನು ಮಾಡಲು ಸಾಧ್ಯ?

ಯುರೋಪಿಯನ್ ಯೂನಿಯನ್ ಹೆಚ್ಚು ವೆಚ್ಚದಾಯಕ ಎಲ್‌ಎನ್‌ಜಿ ಮೊರೆ ಹೋಗಿದ್ದು, ಇದು ಅಮೆರಿಕಾ ಮತ್ತು ಕತಾರ್‌ನಿಂದ ಸಮುದ್ರ ಮಾರ್ಗದಲ್ಲಿ ಸರಬರಾಜಾಗುತ್ತದೆ. ಜರ್ಮನಿ ತನ್ನ ಉತ್ತರ ಸಮುದ್ರ ತೀರದಲ್ಲಿ ಎಲ್‌ಎನ್‌ಜಿ ಆಮದು ಟರ್ಮಿನಲ್ ನಿರ್ಮಾಣಕ್ಕೆ ವೇಗ ಹೆಚ್ಚಿಸಿದೆ. ಮೊದಲ ನಾಲಕ್ಕು ಟರ್ಮಿನಲ್‌ಗಳು ವರ್ಷಾಂತ್ಯದ ವೇಳೆಗೆ ಚಾಲ್ತಿಗೆ ಬರಲಿವೆ. ಆದರೆ ಕೇವಲ ಎಲ್‌ಎನ್‌ಜಿ ಈ ಕೊರತೆ ನೀಗಿಸಲು ಸಾಧ್ಯವಿಲ್ಲ.

ಅಮೆರಿಕಾದಿಂದ ಯುರೋಪಿಗೆ ಬಹುತೇಕ ಅನಿಲ ಪೂರೈಸುವ ಟೆಕ್ಸಾಸ್ ಫ್ರೀ ಪೋರ್ಟ್‌ನ ಟರ್ಮಿನಲ್‌ನಲ್ಲಿ ಕಾಣಿಸಿಕೊಂಡ ಬೆಂಕಿ ರಾತ್ರಿ ಬೆಳಗಾಗುವಷ್ಟರಲ್ಲಿ 2.5% ಅನಿಲ ಪೂರೈಕೆಯನ್ನು ಕಡಿತಗೊಳಿಸಿದೆ. ಪ್ರಸ್ತುತ ಯುರೋಪ್ ಮುಂದೆ ಅನಿಲ ಉಳಿಕೆ ಮತ್ತು ಬದಲಿ ಇಂಧನಗಳ ಬಳಕೆಯೇ ಪರಿಹಾರವಾಗಿದೆ.

ಜರ್ಮನಿ ಕಲ್ಲಿದ್ದಲು ಗಣಿಗಳನ್ನು ಹೆಚ್ಚು ಕಾರ್ಯಾಚರಿಸುತ್ತಿದ್ದು, ಅನಿಲ ಉಳಿಕೆಗೆ ಒತ್ತು ನೀಡುವ ಹರಾಜು ಪ್ರಕ್ರಿಯೆಗೆ ಚಾಲನೆ ನೀಡುತ್ತಿದೆ. ಯುರೋಪಿಯನ್ ಒಕ್ಕೂಟ ಸದಸ್ಯ ರಾಷ್ಟ್ರಗಳಿಗೆ ಮುಂದಿನ ತಿಂಗಳುಗಳಲ್ಲಿ ಅನಿಲ ಬಳಕೆಯನ್ನು 15% ಕಡಿಮೆಗೊಳಿಸಲು ಕರೆ ನೀಡಿದೆ. ಯುರೋಪಿಯನ್ ಕಮಿಷನ್ ಅತಿಯಾದ ಅನಿಲ ಕೊರತೆ ಎದುರಾದರೆ ಕಡ್ಡಾಯವಾಗಿ ಅನಿಲ ಬಳಕೆ ಕಡಿತಗೊಳಿಸುವ ಅಧಿಕಾರಕ್ಕಾಗಿ ಬೇಡಿಕೆ ಸಲ್ಲಿಸಿದೆ. ಮುಂದಿನ ಮಂಗಳವಾರ ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳ ಅನಿಲ ಸಚಿವರು ತುರ್ತು ಸಭೆ ಕರೆದಿದ್ದಾರೆ.

ಯುರೋಪಿನ ದೇಶಗಳು ಬದಲಿ ಶಕ್ತಿ ಪೂರೈಕೆಗೆ ಒದ್ದಾಡುತ್ತಿದ್ದು, ಇಟಲಿ, ಫ್ರಾನ್ಸ್ ಮತ್ತಿತರ ದೇಶಗಳು ಅಲ್ಜೀರಿಯಾ, ಅಜೆರ್ಬೈಜಾನ್ ಹಾಗೂ ಯುಎಇಗಳೊಡನೆ ವ್ಯವಹಾರಕ್ಕೆ ತೊಡಗಿವೆ.

ಚಳಿಗಾಲದಲ್ಲಿ ಫ್ರೀಜ್ ಆಗಲಿದೆಯೇ ಯುರೋಪ್?

ಸರ್ಕಾರಗಳು ಮೊದಲು ಉದ್ಯಮಗಳ ಮೇಲೆ ನಿರ್ಬಂಧ ಹೇರುವುದರಿಂದ ಮನೆಗಳು, ಶಾಲೆಗಳು ಮತ್ತು ಹಾಸ್ಪಿಟಲ್‌ಗಳ ಉಷ್ಣ ಪೂರೈಕೆ ಸ್ಥಗಿತವಾಗದು. ಉದ್ಯಮಗಳು ಮತ್ತು ಅತಿ ಅನಿಲ ಬಳಸುವವರ ಮೇಲೆ ನಿರ್ಬಂಧ ಹೇರುವ ಸಾಧ್ಯತೆಗಳಿವೆ. ಐಇಎ ಯುರೋಪಿನ ದೇಶಗಳಿಗೆ ಜನರಲ್ಲಿ ಮನೆಗಳ ಹಂತದಿಂದಲೇ ಅನಿಲ ಉಳಿಸುವ ಜಾಗೃತಿ ಮೂಡಿಸಲು ಕರೆ ನೀಡಿದೆ.

"ಯುರೋಪಿನ ನಾಯಕರು ಇದಕ್ಕಾಗಿ ಈಗಲೇ ತಯಾರಿ ನಡೆಸದಿದ್ದರೆ, ಜನತೆಯ ಪ್ರತಿಕ್ರಿಯೆ ಗಂಭೀರ ಸ್ವರೂಪದ್ದಾಗಿರಬಹುದು" ಎಂದು ಬೈರೋಲ್ ತಿಳಿಸಿದ್ದಾರೆ.

ಈ ಚಳಿಗಾಲ ಯುರೋಪಿನ ಒಗ್ಗಟ್ಟಿನ ಪರೀಕ್ಷೆಯಾಗಿದ್ದು, ಅದು ಇದರಲ್ಲಿ ಅನುತ್ತೀರ್ಣವಾಗಲು ಸಾಧ್ಯವಿಲ್ಲ. ಈ ಒಗ್ಗಟ್ಟು ಕೇವಲ ಅನಿಲಕ್ಕೆ ಮಾತ್ರವಲ್ಲ, ಇತರ ವಿಷಯಗಳಿಗೂ ಸೇರಿದಂತೆ ಮೂಡಬೇಕಿದೆ.

<strong>ಗಿರೀಶ್ ಲಿಂಗಣ್ಣ </strong>
ಗಿರೀಶ್ ಲಿಂಗಣ್ಣ 

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com