ಡಬ್ಲಿನ್: ಐರ್ಲೆಂಡ್‌ನಲ್ಲಿ ಕಳೆದ ವಾರ ಭಾರತ ಮೂಲದ ಪಾದ್ರಿಯೊಬ್ಬರ ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಪಾದ್ರಿಯ ಮುಖ, ತಲೆ ಮತ್ತು ಬೆನ್ನಿಗೆ ಆರು ಬಾರಿ ಇರಿದಿದ್ದಾರೆ.
ಆರ್ಡ್‌ಕೀನ್‌ನಲ್ಲಿರುವ ಯೂನಿವರ್ಸಿಟಿ ಹಾಸ್ಪಿಟಲ್ ವಾಟರ್‌ಫೋರ್ಡ್ ಬಳಿಯ ಚಾಪ್ಲಿನ್ ಮನೆಯಲ್ಲಿ ಅಕ್ಟೋಬರ್ 30 ರಂದು ಬೆಳಿಗ್ಗೆ 22 ವರ್ಷದ ಆಂಥೋನಿ ಸ್ವೀನಿ ಎಂಬಾತ 30 ವರ್ಷದ ಫಾದರ್ ಬೊಬಿತ್ ಅಗಸ್ಥಿ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕ್ರಿಮಿನಲ್ ಜಸ್ಟೀಸ್ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಹಾನಿಯನ್ನುಂಟುಮಾಡುವ ಆರೋಪವನ್ನು ಸ್ವೀನಿಯ ಮೇಲೆ ಹೊರಿಸಲಾಗಿದೆ.
ತನ್ನ ಇಬ್ಬರು ಸಹೋದ್ಯೋಗಿಗಳೊಂದಿಗೆ ಐರ್ಲೆಂಡ್‌ನಲ್ಲಿ ವಾಸಿಸುತ್ತಿರುವ ಫಾದರ್ ಬೊಬಿತ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅಲ್ಲಿ ಪ್ರಾರ್ಥನಾ ಮಂದಿರವನ್ನು ನಡೆಸುತ್ತಿದ್ದಾರೆ.
ದಾಳಿಯ ನಂತರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಡಿಸ್ಚಾರ್ಜ್ ಆದ ನಂತರ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಯೂನಿವರ್ಸಿಟಿ ಹಾಸ್ಪಿಟಲ್ ವಾಟರ್‌ಫೋರ್ಡ್‌ನ ಮನೋವೈದ್ಯಶಾಸ್ತ್ರ ವಿಭಾಗದಿಂದ ಸ್ವೀನಿ ಗೋಡೆಯನ್ನು ಹತ್ತಿ ಮೂರು ಪಾದ್ರಿಗಳು ವಾಸಿಸುವ ಹತ್ತಿರದ ಚಾಪ್ಲಿನ್‌ಗಳ ಮನೆಗೆ ಪ್ರವೇಶಿಸಿದ್ದಾನೆ ಎಂದು ಐರಿಶ್ ಸನ್ ವರದಿ ಮಾಡಿದೆ.
ಮನೆಯೊಳಗೆ ನುಗ್ಗಿದ ಕೂಡಲೇ ಆತ ಅಡುಗೆಮನೆಯಿಂದ ಸಿಪ್ಪೆ ಸುಲಿಯುವ ಚಾಕುವನ್ನು ತೆಗೆದುಕೊಂಡು ಮೇಲಕ್ಕೆ ಹೋಗಿದ್ದಾನೆ. ಈ ವೇಳೆ ಸ್ನಾನ ಮುಗಿಸಿ ಬರುತ್ತಿದ್ದ ಪಾದ್ರಿಯನ್ನು ಎದುರಾಗಿ ಅವರ ಮುಖ, ತಲೆ ಮತ್ತು ಬೆನ್ನಿಗೆ ಆರು ಬಾರಿ ಇರಿದಿದ್ದಾನೆ ಎಂದು ವಾಟರ್ಫೋರ್ಡ್ ಜಿಲ್ಲಾ ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಘಟನೆಯು 9.16 ಗಂಟೆಗೆ ಸಂಭವಿಸಿದೆ ಮತ್ತು ಸಿಸಿಟಿವಿ ಪ್ರಕಾರ, ಅದಾದ ಎರಡು ನಿಮಿಷಗಳ ನಂತರ ವ್ಯಕ್ತಿ ಮನೆಯಿಂದ ಓಡಿಹೋಗಿದ್ದಾನೆ ಎಂದು ಡಿಟೆಕ್ಟಿವ್ ಗಾರ್ಡಾ ಹಾರ್ಟಿ ಐರಿಶ್ ಸನ್‌ಗೆ ತಿಳಿಸಿದರು.
Advertisement