ಆಫ್ಘನ್ ಆತ್ಮಾಹುತಿ ಬಾಂಬ್ ದಾಳಿ ಖಂಡಿಸಿ ಮಹಿಳೆಯರ ಪ್ರತಿಭಟನೆ, ಹೆಚ್ಚಿನ ಭದ್ರತೆಗೆ ಒತ್ತಾಯ
ಕಾಬುಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್‌ನ ಶಿಯಾ ಶಿಕ್ಷಣ ಕೇಂದ್ರದಲ್ಲಿ ಹತ್ತಾರು ವಿದ್ಯಾರ್ಥಿಗಳು ಮೃತಪಟ್ಟ ಮತ್ತು ಗಾಯಗೊಳ್ಳಲು ಕಾರಣವಾದ ಆತ್ಮಾಹುತಿ ಬಾಂಬ್ ದಾಳಿಯನ್ನು ವಿರೋಧಿಸಿ ಅಫ್ಘಾನಿಸ್ತಾನದ ಮಹಿಳೆಯರ ಗುಂಪು ಶನಿವಾರ ಪ್ರತಿಭಟಿಸಿತು. ಈವೇಳೆ, ತಾಲಿಬಾನ್ ನಡೆಸುತ್ತಿರುವ ಸರ್ಕಾರದಿಂದ ಉತ್ತಮ ಭದ್ರತೆಗೆ ಒತ್ತಾಯಿಸಿದರು. ತಾಲಿಬಾನ್ ಪೊಲೀಸರು ಪ್ರತಿಭಟನೆಯನ್ನು ಕೊನೆಗೊಳಿಸಿದರು.
ಶಿಯಾ ಸಮುದಾಯ ವಾಸಿಸುತ್ತಿದ್ದ ನೆರೆಹೊರೆಯಲ್ಲಿ ನೂರಾರು ವಿದ್ಯಾರ್ಥಿಗಳು ತುಂಬಿದ್ದ ಶಿಕ್ಷಣ ಕೇಂದ್ರದ ಮೇಲೆ ಶುಕ್ರವಾರ ಬಾಂಬ್ ದಾಳಿ ನಡೆದಿದ್ದು, 19 ಜನರು ಮೃತಪಟ್ಟಿದ್ದಾರೆ ಮತ್ತು 27 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಶಿಯಾ ಸಮುದಾಯಕ್ಕೆ ಸೇರಿದ ಜನಾಂಗೀಯ ಹಜಾರಾಗಳು ಹೆಚ್ಚಾಗಿ ವಾಸಿಸುವ ಪ್ರದೇಶವಾದ ಕಾಬುಲ್‌ನ ದಷ್ಟಿ ಬರ್ಚಿಯ ಸಮೀಪವಿರುವ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ಸ್ಫೋಟ ಸಂಭವಿಸಿದೆ. ಇಸ್ಲಾಮಿಕ್ ಸ್ಟೇಟ್ ಗುಂಪು ಇತ್ತೀಚಿನ ವರ್ಷಗಳಲ್ಲಿ ದಷ್ಟಿ ಬರ್ಚಿ ಮತ್ತು ಶಿಯಾ ಜನಾಂಗದವರು ವಾಸಿಸುವ ಇತರ ಪ್ರದೇಶಗಳಲ್ಲಿ ಶಾಲೆಗಳು, ಆಸ್ಪತ್ರೆಗಳು ಮತ್ತು ಮಸೀದಿಗಳ ಮೇಲೆ ಪುನರಾವರ್ತಿತ, ಭಯಾನಕ ದಾಳಿಗಳನ್ನು ನಡೆಸಿದೆ.
ಶನಿವಾರ ಸುಮಾರು 20 ಪ್ರತಿಭಟನಾಕಾರರು ದಷ್ಟಿ ಬರ್ಚಿ ಪ್ರದೇಶದಲ್ಲಿ ಸುಮಾರು 45 ನಿಮಿಷಗಳ ಕಾಲ ಜಮಾಯಿಸಿ ಪ್ರತಿಭಟನೆ ನಡೆಸಿದರು. ಆದರೆ, ಅವರ ಪ್ರತಿಭಟನೆಯನ್ನು ತಾಲಿಬಾನ್ ಕೊನೆಗೊಳಿಸಿತು. ಪ್ರತಿಭಟನಾಕಾರರು ಇಂಗ್ಲಿಷ್ ಮತ್ತು ದಾರಿ ಭಾಷೆಯಲ್ಲಿ 'ಸ್ಟಾಪ್ ಹಜಾರ್ ಜಿನೋಸೈಡ್' ಎಂಬ ಬ್ಯಾನರ್‌ಗಳನ್ನು ಹಿಡಿದಿದ್ದರು.
'ದೇಶದಲ್ಲಿ ನಮ್ಮ ಸರ್ಕಾರ ಭದ್ರತೆ ಒದಗಿಸಿದೆ ಎಂದು ತಾಲಿಬಾನ್ ಸರ್ಕಾರ ಹೇಳುತ್ತಿದೆ. ಆದರೆ, ನಾವು ಅವರನ್ನು ಕೇಳುತ್ತಿದ್ದೇವೆ, ಮಹಿಳಾ ವಿದ್ಯಾರ್ಥಿಗಳನ್ನು ಗುರಿಯಾಗಿಸಲು ಶೈಕ್ಷಣಿಕ ಕೇಂದ್ರಕ್ಕೆ ಪ್ರವೇಶಿಸುವ ದಾಳಿಕೋರರನ್ನು ತಡೆಯಲು ಏಕೆ ಸಾಧ್ಯವಾಗಲಿಲ್ಲ. ಈ ಘಟನೆಯಲ್ಲಿ ಒಂದು ಕುಟುಂಬವು ನಾಲ್ವರನ್ನು ಕಳೆದುಕೊಂಡಿದೆ, ಈ ದಾಳಿಗಳು ಏಕೆ ಇನ್ನೂ ನಡೆಯುತ್ತಿವೆ' ಎಂದು ಪ್ರತಿಭಟನಾಕಾರ ಫಾತಿಮಾ ಮೊಹಮ್ಮದಿ ಹೇಳಿದರು.
ಕಾಜ್ ಶಿಕ್ಷಣ ಕೇಂದ್ರದ ಸಿಬ್ಬಂದಿ ಶನಿವಾರ ದಾಳಿಯಿಂದ ಉಂಟಾದ ಭಗ್ನಾವಶೇಷಗಳನ್ನು ಸ್ವಚ್ಛಗೊಳಿಸಿದರು. ಸಂತ್ರಸ್ತರ ಕುಟುಂಬ ಸದಸ್ಯರು ತಮ್ಮ ಪ್ರೀತಿಪಾತ್ರರ ರಕ್ತದಿಂದ ಆವೃತವಾದ ವಸ್ತುಗಳನ್ನು ಹುಡುಕಿದರು.
ದಾಳಿಯಿಂದ ಬದುಕುಳಿದ ವಿದ್ಯಾರ್ಥಿನಿ ಜಹ್ರಾ ಅವರು ಪೆನ್ನು ಖರೀದಿಸಲು ಕೆಲವೇ ನಿಮಿಷಗಳ ಮೊದಲು ಹೊರಗೆ ಹೋಗಿದ್ದರಿಂದ ಯಾವುದೇ ಹಾನಿಯಾಗಲಿಲ್ಲ. ದಾಳಿಯಲ್ಲಿ ತನ್ನ ಸ್ನೇಹಿತರನ್ನು ಕಳೆದುಕೊಂಡಿದ್ದೇನೆ ಮತ್ತು ಉತ್ತಮ ಭವಿಷ್ಯಕ್ಕಾಗಿ ತನ್ನ ಭರವಸೆಯನ್ನು ಕಳೆದುಕೊಂಡಿದ್ದೇನೆ ಎಂದು ಅವರು ಹೇಳಿದರು.
ದಾಳಿಯ ಹೊಣೆಯನ್ನು ಯಾರೂ ಇನ್ನೂ ಹೊತ್ತುಕೊಂಡಿಲ್ಲ. ಆಗಸ್ಟ್ 2021 ರಲ್ಲಿ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ ತಾಲಿಬಾನ್‌ನ ಮುಖ್ಯ ಪ್ರತಿಸ್ಪರ್ಧಿಯಾದ ಇಸ್ಲಾಮಿಕ್ ಸ್ಟೇಟ್ ಗುಂಪು ಈ ಹಿಂದೆ ದಷ್ಟಿ ಬರ್ಚಿ ಸೇರಿದಂತೆ ಹಜಾರಾ ಸಮುದಾಯವನ್ನು ಗುರಿಯಾಗಿಸಿ ಹಿಂಸಾಚಾರದ ಕ್ರೂರ ಅಭಿಯಾನದಲ್ಲಿ ತೊಡಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ