
ಇಸ್ಲಾಮಾಬಾದ್: ವಿದೇಶಿ ನಾಯಕರಿಂದ ಪಡೆದ ಉಡುಗೊರೆಗಳ ಮಾರಾಟಕ್ಕೆ ಸಂಬಂಧಿಸಿದ ತೋಷಖಾನಾ ಪ್ರಕರಣದಲ್ಲಿ 5 ವರ್ಷಗಳ ಕಾಲ ಸಾರ್ವಜನಿಕ ಹುದ್ದೆಯಿಂದ ಅನರ್ಹಗೊಳಿಸುವ ಪಾಕಿಸ್ತಾನ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಪಾಕಿಸ್ತಾನದ ಉನ್ನತ ಚುನಾವಣಾ ಸಂಸ್ಥೆಯ ನಿರ್ಧಾರವನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಶನಿವಾರ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ತಮ್ಮ ವಕೀಲ ಬ್ಯಾರಿಸ್ಟರ್ ಅಲಿ ಜಾಫರ್ ಮೂಲಕ ಇಸ್ಲಾಮಾಬಾದ್ ಹೈಕೋರ್ಟ್ (IHC) ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
70 ವರ್ಷ ವಯಸ್ಸಿನ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ರಾಜಕಾರಣಿ ಇಮ್ರಾನ್ ಖಾನ್ ಸಂಸತ್ತಿನ ಸದಸ್ಯತ್ವವನ್ನು ಕಳೆದುಕೊಂಡರು ಮತ್ತು ತೋಷಖಾನಾ ಪ್ರಕರಣದಲ್ಲಿ ಐದು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಪಾಕಿಸ್ತಾನದ ಚುನಾವಣಾ ಆಯೋಗ ನಿರ್ಬಂಧಿಸಿದೆ. ಪ್ರಧಾನಿಯಾಗಿದ್ದಾಗ ವಿದೇಶಿ ಗಣ್ಯರಿಂದ ಸ್ವೀಕರಿಸಿದ್ದ ಅಮೂಲ್ಯ ಉಡುಗೊರೆಗಳ ಮಾರಾಟದಿಂದ ಬಂದ ಹಣವನ್ನು ಮರೆಮಾಡಿದ್ದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಹೇಳಿ ಆಯೋಗ ಅವರನ್ನು 5 ವರ್ಷಗಳ ಸಾರ್ವಜನಿಕ ಹುದ್ದೆಯಿಂದ ಅನರ್ಹಗೊಳಿಸಿತ್ತು.
ಇದೀಗ ಈ ಆದೇಶವನ್ನು ಪ್ರಶ್ನಿಸಿರುವ ಇಮ್ರಾನ್ ಖಾನ್ ತಮ್ಮ ವಕೀಲ ಬ್ಯಾರಿಸ್ಟರ್ ಅಲಿ ಜಾಫರ್ ಮೂಲಕ ಇಸ್ಲಾಮಾಬಾದ್ ಹೈಕೋರ್ಟ್ (IHC) ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಶನಿವಾರ ವಿಚಾರಣೆಗೆ ತಕ್ಷಣವೇ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ಜಾಫರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅವರ ಅರ್ಜಿ ಸ್ವೀಕರಿಸಿದ ನ್ಯಾಯಾಲಯ ತುರ್ತು ವಿಚಾರಣೆಯ ವಿಷಯವಲ್ಲ ಎಂದು ಅಭಿಪ್ರಾಯಪಟ್ಟಿದ್ದು, ವಿಚಾರಣೆಯನ್ನು ಸೋಮವಾರಕ್ಕೆ ನಿಗದಿಪಡಿಸಿದೆ.
ಪಾಕಿಸ್ತಾನ್-ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಸಲ್ಲಿಸಿರುವ ಅರ್ಜಿಯಲ್ಲಿ ಭ್ರಷ್ಟ ಆಚರಣೆಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಥವಾ ಜನಪ್ರತಿನಿಧಿಗಳನ್ನು ಅನರ್ಹಗೊಳಿಸಲು ಇಸಿಪಿಗೆ "ಅಧಿಕಾರವಿಲ್ಲ".. ಹೀಗಾಗಿ ಆಯೋಗದ ಆದೇಶವನ್ನು ಅಮಾನತುಗೊಳಿಸುವಂತೆ ಅರ್ಜಿಯಲ್ಲಿ ಕೋರಿದ್ದಾರೆ.
Advertisement