ಗರ್ಭಿಣಿಗೆ ಒದೆದಿದ್ದ ವಿಡಿಯೊ ವೈರಲ್ ಬಳಿಕ ಪಾಕಿಸ್ತಾನದ ಭದ್ರತಾ ಸಿಬ್ಬಂದಿ ಬಂಧನ!

ಪಾಕಿಸ್ತಾನ ಅಪಾರ್ಟ್‌ಮೆಂಟ್‌ವೊಂದರ ಹೊರಗೆ ನಿಯೋಜಿಸಿದ್ದ ಭದ್ರತಾ ಸಿಬ್ಬಂದಿಯೊಬ್ಬ ಗರ್ಭಿಣಿಗೆ ಒದೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೆರೆಯ ದೇಶದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ವೈರಲ್ ಆದ ವಿಡಿಯೊದಲ್ಲಿನ ದೃಶ್ಯ
ವೈರಲ್ ಆದ ವಿಡಿಯೊದಲ್ಲಿನ ದೃಶ್ಯ

ಕರಾಚಿ: ಪಾಕಿಸ್ತಾನ ಅಪಾರ್ಟ್‌ಮೆಂಟ್‌ವೊಂದರ ಹೊರಗೆ ನಿಯೋಜಿಸಿದ್ದ ಭದ್ರತಾ ಸಿಬ್ಬಂದಿಯೊಬ್ಬ ಗರ್ಭಿಣಿಗೆ ಒದೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೆರೆಯ ದೇಶದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಮಹಿಳೆಯನ್ನು ಬೂಟಿನಿಂದ ಒದೆಯುತ್ತಿರುವ ದೃಶ್ಯವಿರುವ ವಿಡಿಯೊ ವೈರಲ್ ಆದ ಬಳಿಕ ಪೊಲೀಸರು ಭದ್ರತಾ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಮಹಿಳೆಯು ಕಟ್ಟಡದ ಹೊರಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.

ಭದ್ರತಾ ಸಿಬ್ಬಂದಿಯೊಂದಿಗೆ ಮಹಿಳೆ ಜಗಳವಾಡುತ್ತಿರುವಾಗ ಆತ ಆಕೆಗೆ ಕಪಾಳಮೋಕ್ಷ ಮಾಡುತ್ತಾನೆ. ಈ ವೇಳೆ ಕೆಳಗೆ ಬಿದ್ದ ಮಹಿಳೆ ಎದ್ದೇಳಲು ಪ್ರಯತ್ನಿಸುತ್ತಿರುತ್ತಾಳೆ. ಆದರೆ, ಭದ್ರತಾ ಸಿಬ್ಬಂದಿ ಅವಳ ಮುಖಕ್ಕೆ ಒದೆಯುತ್ತಾನೆ. ಈ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕರಾಚಿಯ ಗುಲಿಸ್ತಾನ್-ಎ-ಜೌಹರ್ ಬ್ಲಾಕ್‌ 17ರಲ್ಲಿರುವ ನೋಮನ್ ಗ್ರ್ಯಾಂಡ್ ಸಿಟಿಯಲ್ಲಿರುವ ಅಪಾರ್ಟ್‌ಮೆಂಟ್ ಕಟ್ಟಡವೊಂದರಲ್ಲಿ ತಾನು ಮನೆಗೆಲಸ ಮಾಡುತ್ತಿರುವುದಾಗಿ ಸನಾ ಎಂದು ಗುರುತಿಸಲಾಗಿರುವ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಆಕೆಯ ಪ್ರಕಾರ, ಆ.5 ರಂದು ಮುಂಜಾನೆ 3 ಗಂಟೆಗೆ ತನ್ನ ಮಗ ಸೊಹೈಲ್‌ನನ್ನು ತನಗೆ ಆಹಾರ ತಂದುಕೊಡುವಂತೆ ಹೇಳುತ್ತಾಳೆ. ಆಗ ಆತ ಅಪಾರ್ಟ್‌ಮೆಂಟ್ ಆವರಣವನ್ನು ಪ್ರವೇಶಿಸಲು ಪ್ರಯತ್ನಿಸಿದಾಗ, ಅಪಾರ್ಟ್‌ಮೆಂಟ್ ಒಕ್ಕೂಟದ ಪದಾಧಿಕಾರಿಗಳಾದ ಅಬ್ದುಲ್ ನಾಸಿರ್, ಆದಿಲ್ ಖಾನ್ ಮತ್ತು ಮಹಮ್ಮೂದ್ ಖಲೀಲ್ ಆತನನ್ನು ಪ್ರವೇಶಿಸದಂತೆ ತಡೆದರು.

ಈ ವೇಳೆ ನಾನು ವಿಚಾರಿಸಲು ಬಂದಾಗ, ಆದಿಲ್ ಕೋಪಗೊಂಡು ನನ್ನನ್ನು ನಿಂದಿಸಲು ಪ್ರಾರಂಭಿಸುತ್ತಾನೆ. ನಂತರ, ನನ್ನನ್ನು ಹೊಡೆಯಲು ಆತ ಸೆಕ್ಯುರಿಟಿಗೆ ಕೇಳಿದನು. ನಾನು 5-6 ತಿಂಗಳ ಗರ್ಭಿಣಿ, ಆತ, ನನಗೆ ಹೊಡೆದಾಗ ನೋವಿನಿಂದ ನಾನು ಪ್ರಜ್ಞಾಹೀನಳಾದೆ' ಎಂದು ಮಹಿಳೆ ತಿಳಿಸಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ.

ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ, ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ. ಅಲ್ಲದೆ, 'ಭದ್ರತಾ ಸಿಬ್ಬಂದಿಗೆ ಮಹಿಳೆಯ ಮೇಲೆ ಕೈ ಎತ್ತುವ ಮತ್ತು ಹಿಂಸಿಸುವ ಧೈರ್ಯ ಹೇಗೆ ಬಂತು?' ಎಂದು ಪ್ರಶ್ನಿಸಿದ್ದಾರೆ.

ಸದ್ಯ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com