ಪಾಕಿಸ್ತಾನದಲ್ಲಿ ದಶಕದಲ್ಲೇ ಅತ್ಯಂತ ಭೀಕರ ಪ್ರವಾಹ; 1000ಕ್ಕೂ ಹೆಚ್ಚು ಸಾವು
ಸುಕ್ಕೂರು: ಪಾಕಿಸ್ತಾನ ಕಳೆದ ಒಂದು ದಶಕದಲ್ಲೇ ಅತ್ಯಂತ ಭೀಕರ ಮಾನ್ಸೂನ್ ಪ್ರವಾಹ ಎದುರಿಸುತ್ತಿದ್ದು, ಮಳೆ ಸೃಷ್ಟಿಸಿದ ಅನಾಹುತಗಳಿಂದ 1000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಮತ್ತು ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಲೆಕ್ಕವಿಲ್ಲದಷ್ಟು ಮನೆಗಳು ಕೊಚ್ಚಿಹೋಗಿವೆ, ಪ್ರಮುಖ ಕೃಷಿಭೂಮಿ ನಾಶವಾಗಿದೆ.
ಜೂನ್‌ನಿಂದ ಮಳೆ ಪ್ರಾರಂಭವಾದಾಗಿನಿಂದ ಇದುವರೆಗೆ ಮಳೆ ಸಂಬಂಧಿ ಘಟನೆಗಳಲ್ಲಿ 1,061 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಪ್ರವಾಹದಿಂದ ನದಿಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳು ಮತ್ತು ಸೇತುವೆಗಳನ್ನು ಕೊಚ್ಚಿಕೊಂಡು ಹೋಗಿದ್ದು, ಉತ್ತರದ ನೂರಾರು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದಾದ್ಯಂತ ಜೂನ್ 14 ರಿಂದ 3,451 ಕಿಮೀ ರಸ್ತೆ ಪ್ರವಾಹದ ನೀರಿಗೆ ಕೊಚ್ಚಿ ಹೋಗಿದೆ. 149 ಸೇತುವೆಗಳು ಕುಸಿದು ಬಿದ್ದಿವೆ. 170 ವಾಣಿಜ್ಯ ಅಂಗಡಿಗಳು, 949,858 ಮನೆಗಳು ಭಾಗಶಃ ಅಥವಾ ಸಂಪೂರ್ಣವಾಗಿ ನಾಶವಾಗಿವೆ. 719,558 ಜಾನುವಾರುಗಳನ್ನು ಪ್ರವಾಹ ಆಹುತಿ ಪಡೆದಿದೆ.
ಈ ವರ್ಷದ ಪ್ರವಾಹವು 33 ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.
ಪಾಕಿಸ್ತಾನದ ಬಲೂಚಿಸ್ತಾನ್, ಖೈಬರ್ ಪಖ್ತುನ್ಖ್ವಾ, ಗಿಲ್ಗಿಟ್ ಬಾಲ್ಟಿಸ್ತಾನ್ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ಅತಿ ಹೆಚ್ಚಿನ ಹಾನಿಯಾಗಿದ್ದು, ಕನಿಷ್ಠ 110 ಜಿಲ್ಲೆಗಳಲ್ಲಿ ಮಳೆಯ ರೌದ್ರಾವತಾರದಿಂದ ಭೀಕರ ಪ್ರವಾಹ ಉಂಟಾಗಿದೆ. ಅವುಗಳಲ್ಲಿ 72 ಜಿಲ್ಲೆಗಳು ತೀವ್ರ ವಿಪತ್ತಿಗೆ ಒಳಗಾಗಿವೆ.
ಮಳೆ, ಪ್ರವಾಹದಲ್ಲಿ ಸಿಲುಕಿದ 51,275 ಮಂದಿಯನ್ನು ರಕ್ಷಿಸಲಾಗಿದೆ. 498,442 ಮಂದಿಯನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ