ಭಯೋತ್ಪಾದನಾ ಉದ್ಯಮವನ್ನು ಚಾಲ್ತಿಯಲ್ಲಿಟ್ಟಿದೆ ಪಾಕಿಸ್ತಾನದ ರಾಜತಾಂತ್ರಿಕತೆ

ಎಫ್ಎಟಿಎಫ್ ಎನ್ನುವುದು ಒಂದು ಅಂತರ್ ಸರ್ಕಾರಿ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಇದನ್ನು 1989ರಲ್ಲಿ ಜಾಗತಿಕ ಹಣಕಾಸು ಸೌಹಾರ್ದತೆಗೆ ಧಕ್ಕೆ ತರುವಂತಹ ಭಯೋತ್ಪಾದನೆಗೆ ಹಣಕಾಸಿನ ನೆರವು, ಹಣಕಾಸಿನ ಅವ್ಯವಹಾರಗಳು ಹಾಗೂ ಇತರ ಅಪಾಯಕಾರಿ ಚಟುವಟಿಕೆಗಳ ಮೇಲೆ ನಿಗಾ ಇಡಲು ಸ್ಥಾಪಿಸಲಾಗಿತ್ತು.
ಎಫ್ಎಟಿಎಫ್
ಎಫ್ಎಟಿಎಫ್

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಪ್ರಸ್ತುತ ಅಂತಾರಾಷ್ಟ್ರೀಯ ಸಮುದಾಯ ಪಾಕಿಸ್ತಾನದ ಆರ್ಥಿಕ ಸ್ಥಿತಿಗತಿಯ ಕುರಿತು ಹೆಚ್ಚೇನೂ ಯೋಚನೆ ಮಾಡುತ್ತಿಲ್ಲ. ಪಾಕಿಸ್ತಾನದ ಆರ್ಥಿಕ ಸ್ಥಿತಿಯೊಡನೆಯೇ, ಅದು ಭಯೋತ್ಕಾದಕರ ನೆಚ್ಚಿನ ತಾಣವಾಗಿ ರೂಪುಗೊಳ್ಳುವ ಸಾಧ್ಯತೆಗಳೂ ಇವೆ. ಪಾಕಿಸ್ತಾನದಂತಹ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಈ ಸಾಧ್ಯತೆಗಳನ್ನು ನಿಯಂತ್ರಿಸುವುದೂ ಕಷ್ಟಸಾಧ್ಯ. ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅವರು 2020ರಲ್ಲಿ ಅಮೆರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಪ್ರತಿನಿಧಿಗಳ ಸಂಸತ್ತು) ಅಧ್ಯಕ್ಷ ನ್ಯಾನ್ಸಿ ಪೆಲೋಸಿ ಅವರೊಡನೆ ಮ್ಯೂನಿಚ್‌ನಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನ ಭಯೋತ್ಪಾದನೆಯನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು.

ಅಮೆರಿಕಾದ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ತನ್ನ ದೇಶ ಕಳೆದ 15 ವರ್ಷಗಳಲ್ಲಿ ಪಾಕಿಸ್ತಾನಕ್ಕೆ 33 ಬಿಲಿಯನ್ ಡಾಲರ್ ಮೊತ್ತವನ್ನು ನೀಡಿದೆ. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಅಮೆರಿಕಾಗೆ ಬರಿ ಸುಳ್ಳುಗಳು ಮತ್ತು ದ್ರೋಹವನ್ನಷ್ಟೇ ನೀಡಿದೆ ಎಂದಿದ್ದರು. ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂದು ನೇರವಾಗಿ ಆರೋಪಿಸಿ, 2019ರಲ್ಲಿ ಪಾಕಿಸ್ತಾನಕ್ಕೆ ನೀಡಲಿದ್ದ 300 ಡಾಲರ್‌ಗಳ ಮೊತ್ತವನ್ನು ತಡೆಹಿಡಿದಿದ್ದರು. ಒಂದು ವೇಳೆ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹಾಗೂ ಅಮೆರಿಕಾದಿಂದ ಹಣಕಾಸಿನ ನೆರವು ಸಿಗುತ್ತದೆಯೇ ಎನ್ನುವುದು ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುವುದರ ಮೇಲೆ ನಿಗಾ ಇಡುವ ಫೈನಾನ್ಶಿಯಲ್‌ ಆ್ಯಕ್ಷನ್‌ ಟಾಸ್ಕ್ ಫೋರ್ಸ್‌ (ಎಫ್ಎಟಿಎಫ್) ನಿರ್ಧಾರದ ಮೇಲೆ ಅವಲಂಬಿತವಾಗಿದೆ. ಎಫ್ಎಟಿಎಫ್ ಎನ್ನುವುದು ಒಂದು ಅಂತರ್ ಸರ್ಕಾರಿ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಇದನ್ನು 1989ರಲ್ಲಿ ಜಾಗತಿಕ ಹಣಕಾಸು ಸೌಹಾರ್ದತೆಗೆ ಧಕ್ಕೆ ತರುವಂತಹ ಭಯೋತ್ಪಾದನೆಗೆ ಹಣಕಾಸಿನ ನೆರವು, ಹಣಕಾಸಿನ ಅವ್ಯವಹಾರಗಳು ಹಾಗೂ ಇತರ ಅಪಾಯಕಾರಿ ಚಟುವಟಿಕೆಗಳ ಮೇಲೆ ನಿಗಾ ಇಡಲು ಸ್ಥಾಪಿಸಲಾಗಿತ್ತು. ಎಫ್ಎಟಿಎಫ್ 39 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದು, 2 ಪ್ರಾದೇಶಿಕ ಸಂಸ್ಥೆಗಳಾದ ಯುರೋಪಿಯನ್ ಕಮಿಷನ್ ಹಾಗೂ ಗಲ್ಫ್ ಕೋಆಪರೇಷನ್ ಕೌನ್ಸಿಲ್‌ಗಳನ್ನು ಹೊಂದಿದೆ. ಎಫ್ಎಟಿಎಫ್ ಪಾಕಿಸ್ತಾನವನ್ನು ಜೂನ್ 2018ರಲ್ಲಿ ಬೂದುಪಟ್ಟಿಗೆ ಸೇರಿಸಿತ್ತು.

2020ರಲ್ಲಿ ಪ್ರಕಟವಾದ ವರದಿಯಲ್ಲಿ ಪಾಕಿಸ್ತಾನ್ ನ್ಯೂಸ್ ಇಂಟರ್ನ್ಯಾಶನಲ್  ಎಫ್ಎಟಿಎಫ್‌ನ 27 ಷರತ್ತುಗಳಲ್ಲಿ ಪಾಕಿಸ್ತಾನ 14ನ್ನು ಪೂರೈಸಿದೆ, ಆದ್ದರಿಂದ ಇದು ಪ್ರಗತಿಯ ಸೂಚನೆಯಾಗಿದೆ ಎಂದಿತ್ತು. ಇದರಲ್ಲಿ ಒಂದು ಪ್ರಮುಖ ಬೆಳವಣಿಗೆ ಎಂದರೆ ಭಯೋತ್ಪಾದನೆಗೆ ಹಣಕಾಸು ಒದಗಿಸುತ್ತಿದ್ದ, ಲಷ್ಕರ್ ತಯ್ಬಾ (ರಷ್ಯನ್ ಫೆಡರೇಷನ್ ನಿರ್ಬಂಧಿಸಿದೆ) ಸಹ ಸಂಸ್ಥಾಪಕ ಹಫೀಜ಼್ ಸಯೀದ್‌ಗೆ 11 ವರ್ಷಗಳ ಸೆರೆ ಘೋಷಿಸಿರುವುದು. ಆತನನ್ನು ಅಮೆರಿಕಾ ಹಾಗೂ ಭಾರತ ಎರಡೂ ರಾಷ್ಟ್ರಗಳು 175 ಜನರ ಸಾವಿಗೆ ಕಾರಣವಾದ 2008ರ ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಎಂದು ಪರಿಗಣಿಸಿವೆ.

ಭಾರತ ಹಲವು ಬಾರಿ ಆತನನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಹಲವು ಬಾರಿ ಕೇಳಿ ವೈಫಲ್ಯ ಕಂಡಿತ್ತು. ಪಾಕಿಸ್ತಾನವು 2018ರಲ್ಲಿ ಬೂದುಪಟ್ಟಿಗೆ ಸೇರ್ಪಡೆಯಾದರೂ, ಭಾರತ ನೆರೆ ರಾಷ್ಟ್ರವನ್ನು ಕಪ್ಪು ಪಟ್ಟಿಗೆ ಸೇರಿಸಲು ಪ್ರಯತ್ನಿಸುತ್ತಿದೆ.

ಅಕ್ಟೋಬರ್ ತಿಂಗಳಲ್ಲಿ ಎಫ್ಎಟಿಎಫ್ ಪಾಕಿಸ್ತಾನವನ್ನು ಬೂದುಪಟ್ಟಿಯಿಂದ ತೆಗೆದಿರುವುದು ಆ ರಾಷ್ಟ್ರಕ್ಕೆ ಸ್ವಲ್ಪ ನೆಮ್ಮದಿ ತಂದಿದೆ. ಪ್ಯಾರಿಸ್‌ನಲ್ಲಿ ನಡೆದ ಎರಡು ದಿನಗಳ ಸಮಗ್ರ ಅಧಿವೇಶನದ ಬಳಿಕ ಎಫ್ಎಟಿಎಫ್ ಪಾಕಿಸ್ತಾನ ತನ್ನ 34 ಅಂಶಗಳ ಕ್ರಮವನ್ನು ಕೈಗೊಂಡಿದೆ ಎಂದು ಘೋಷಿಸಿತು.

ಇರಾನ್ ಹಾಗೂ ಉತ್ತರ ಕೊರಿಯಾಗಳು ಎಫ್ಎಟಿಎಫ್ ಕಪ್ಪು ಪಟ್ಟಿಯಲ್ಲಿದ್ದು, 23 ದೇಶಗಳು ಬೂದುಪಟ್ಟಿಯಲ್ಲಿವೆ. ಬೂದುಪಟ್ಟಿಯಲ್ಲಿರುವ ರಾಷ್ಟ್ರಗಳು ತಮ್ಮ ಆಡಳಿತದಲ್ಲಿ ಹಣಕಾಸಿನ ಅವ್ಯವಹಾರ ಮಾಡದಂತೆ ಹೆಚ್ಚಿನ ಮೇಲ್ವಿಚಾರಣೆ ನಡೆಸಬೇಕಾಗುತ್ತದೆ. ಬೂದುಪಟ್ಟಿಯ ರಾಷ್ಟ್ರಗಳು ಭಯೋತ್ಪಾದನೆಗೆ ಹಣಕಾಸಿನ ನೆರವಿನ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಎಫ್ಎಟಿಎಫ್ ಅವನ್ನು ಕಪ್ಪುಪಟ್ಟಿಗೆ ಸೇರಿಸುತ್ತದೆ.

ಪ್ರಸ್ತುತ ಪಾಕಿಸ್ತಾನ ಬೂದುಪಟ್ಟಿಯಿಂದ ಹೊರಬಂದ ಕಾರಣ ಮೇಲ್ವಿಚಾರಣೆ ಅಗತ್ಯವಿರುವುದಿಲ್ಲ. ಆದರೂ ಪಾಕಿಸ್ತಾನ ಏಷ್ಯಾ/ಪೆಸಿಫಿಕ್ ಗ್ರೂಪ್ (ಎಪಿಜಿ) ಜೊತೆ ಕಾರ್ಯ ನಿರ್ವಹಿಸಿ, ಅಂತಾರಾಷ್ಟ್ರೀಯ ಹಣಕಾಸು ಅವ್ಯವಹಾರ ಹಾಗೂ ಭಯೋತ್ಪಾದನೆಗೆ ಸಹಕಾರದ ವಿರುದ್ಧ ಕಾರ್ಯಾಚರಣೆ ನಡೆಸಬೇಕಿದೆ. ಪಾಕಿಸ್ತಾನದ ಮುಂದಿನ ಪ್ರಗತಿ ವರದಿ ಫೆಬ್ರವರಿ 1, 2023ರಲ್ಲಿ ಬರಲಿದೆ.

ಚೀನಾ, ಮಲೇಷಿಯಾ, ಸೌದಿ ಅರೇಬಿಯಾ ಹಾಗೂ ಟರ್ಕಿ (2021ರಿಂದ ಟರ್ಕಿಯೂ ಬೂದುಪಟ್ಟಿಯಲ್ಲಿದೆ) ರಾಷ್ಟ್ರಗಳ ಬೆಂಬಲದ ಕಾರಣದಿಂದ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಿಲ್ಲ. ಮೂರು ರಾಷ್ಟ್ರಗಳ ಮತ ಸಾಕಾಗುವುದರಿಂದ, ಅವುಗಳ ಮತ ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರದಂತೆ ತಡೆಯುತ್ತದೆ. ಆದರೆ ಬೂದುಪಟ್ಟಿಯಿಂದ ಹೊರಬರಲು 12 ರಾಷ್ಟ್ರಗಳ ಮತ ಬೇಕಾಗಿದ್ದು, ಪಾಕಿಸ್ತಾನ ಮತ್ತೆ ಎಂಟು ರಾಷ್ಟ್ರಗಳ ಬೆಂಬಲ ಪಡೆಯಬೇಕಾಯಿತು.

ಎಫ್ಎಟಿಎಫ್ ತನ್ನ ಅಂತಿಮ ಹೇಳಿಕೆಯಲ್ಲಿ ರಷ್ಯಾ ಉಕ್ರೇನ್‌ನಲ್ಲಿ ನಡೆಸುತ್ತಿರುವ ಯುದ್ಧವನ್ನು ಖಂಡಿಸಿದೆ. ರಷ್ಯಾವನ್ನು ಎಫ್ಎಟಿಎಫ್ ಸಮಿತಿಗಳಿಂದ ಅಮಾನತುಗೊಳಿಸುವ ನಿರ್ಧಾರವನ್ನು ಅನುಮೋದಿಸಿದೆ. ಆದರೆ ರಷ್ಯಾವನ್ನು ಗುಂಪಿನಿಂದ ತೆಗೆಯುವುದಾಗಲಿ, ಅಥವಾ ಇರಾನ್, ಉತ್ತರ ಕೊರಿಯಾ ಹಾಗೂ ಈಗ ಮಯನ್ಮಾರ್ ಜೊತೆ ಕಪ್ಪು ಪಟ್ಟಿಗೆ ಸೇರಿಸುವುದಾಗಲಿ ಸಾಧ್ಯವಾಗಿಲ್ಲ.

ಮಲೇಷ್ಯಾ, ಟರ್ಕಿ, ಪಾಕಿಸ್ತಾನಗಳ ಸಂಬಂಧ

ಮಲೇಷಿಯಾ ಕಾಶ್ಮೀರ ವಿಚಾರದಲ್ಲಿ ಭಾರತದ ವಿರುದ್ಧ ಪಾಕಿಸ್ತಾನವನ್ನು ಬಲವಾಗಿ ಬೆಂಬಲಿಸುತ್ತಾ ಬಂದಿದೆ. ಪಾಕಿಸ್ತಾನ ಭಾರತದ ವಿರುದ್ಧ ನೇರವಾಗಿ ಗೆಲ್ಲಲು ಸಾಧ್ಯವಿಲ್ಲ ಎಂದು ಅರಿವಾಗಿ, ಪರೋಕ್ಷ ಯುದ್ಧ ನಡೆಸುತ್ತಿದೆ. ಇದರ ಪರಿಣಾಮವಾಗಿ, ಮಲೇಷಿಯಾ, ಗಲ್ಫ್ ರಾಷ್ಟ್ರಗಳು, ಹಾಗೂ ಇನ್ನೂ ಕೆಲವು ಇಸ್ಲಾಮಿಕ್ ರಾಷ್ಟ್ರಗಳು ಭಯೋತ್ಪಾದನೆಯ ವಿರುದ್ಧ ಕುರುಡಾಗಿರುವಂತೆ ನಟಿಸುವ, ಪಾಕಿಸ್ತಾನದ ಪರೋಕ್ಷ ಯುದ್ಧವನ್ನು ಬೆಂಬಲಿಸುವ ಅನಿವಾರ್ಯತೆಯಿದೆ. ಮಲೇಷ್ಯಾದ ಮಾಜಿ ಪ್ರಧಾನಿ ಮಹತಿರ್ ಮೊಹಮ್ಮದ್ ಕಾಶ್ಮೀರದ ಮೇಲೆ ಹಕ್ಕು ಸಾಧಿಸುತ್ತಿದ್ದ ಪಾಕಿಸ್ತಾನಕ್ಕೆ ಪ್ರಬಲ ಬೆಂಬಲಿಗರಾಗಿದ್ದರು. ಅವರು ಪದಚ್ಯುತಗೊಂಡ ಬಳಿಕವೂ, ಇಸ್ಲಾಮಿಕ್ ರಾಷ್ಟ್ರವಾಗಿರುವ ಕಾರಣ ಮಲೇಷ್ಯಾ ಪಾಕಿಸ್ತಾನವನ್ನು ಬೆಂಬಲಿಸುತ್ತಿದೆ.

ಟರ್ಕಿಯೂ ಮುಸ್ಲಿಂ ಬಾಹುಳ್ಯ ರಾಷ್ಟ್ರವಾಗಿದ್ದು, ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುತ್ತಿದೆ. ಟರ್ಕಿ ಅಧ್ಯಕ್ಷ ರಿಸೆಪ್ ಟಯ್ಯಿಪ್ ಎರ್ದೋಗನ್‌ರ ಮುಸ್ಲಿಂ ಜಗತ್ತಿ‌ನ ನಾಯಕನಾಗಬೇಕು, ಒಟ್ಟೋಮನ್ ಸಾಮ್ರಾಜ್ಯದ ಕನಸನ್ನು ಈಡೇರಿಸಬೇಕು ಎಂಬ ಹೆಬ್ಬಯಕೆಗೆ ಪಾಕಿಸ್ತಾನ ಪ್ರಮುಖ ಸಹಯೋಗಿಯಾಗಿದೆ. ಕೇವಲ ಧಾರ್ಮಿಕ ವಿಚಾರ ಮಾತ್ರವಲ್ಲದೆ, ಟರ್ಕಿ ಪಾಕಿಸ್ತಾನಕ್ಕೆ ರಕ್ಷಣಾ ವಿಚಾರದಲ್ಲೂ ಬೆಂಬಲವಾಗಿದೆ. ಸೌದಿ ಅರೇಬಿಯಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಕಾಶ್ಮೀರ ವಿಚಾರದಲ್ಲಿ ತಟಸ್ಥವಾಗಿರುವುದಕ್ಕೆ ಪ್ರತಿಕ್ರಿಯೆ ಎಂಬಂತೆ ಪಾಕಿಸ್ತಾನ ಅರಬ್ ಜಗತ್ತಿನಿಂದ ತನ್ನನ್ನು ತಾನು ದೂರ ಮಾಡಿಕೊಂಡಿದೆ.

ಸೆಪ್ಟೆಂಬರ್ 2019ರಲ್ಲಿ, ಟರ್ಕಿ, ಪಾಕಿಸ್ತಾನ ಹಾಗೂ ಮಲೇಷ್ಯಾಗಳು ಟರ್ಕಿಯ ನೇತೃತ್ವದಲ್ಲಿ ಹೊಸ ಟಿವಿ ಚಾನೆಲ್ ಆರಂಭಿಸುವ ಉದ್ದೇಶವನ್ನು ಘೋಷಿಸಿದವು. ಮೆಡಿಟರೇನಿಯನ್‌ - ಏಷ್ಯನ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ಸ್ 'ಟರ್ಕಿ - ಪಾಕಿಸ್ತಾನ: ಕೂಲಿ ಪತ್ರಕರ್ತರ ರಹಸ್ಯ ಸೇನಾಪಡೆ' ಎಂಬ ಹೆಸರಿನ ವರದಿಯನ್ನೂ ಪ್ರಕಟಿಸಿದ್ದವು. ಈ ವರದಿಯಲ್ಲಿ, ಮೂಲಗಳ ಪ್ರಕಾರ ಟರ್ಕಿಯ ವಿದೇಶಾಂಗ ಸಚಿವಾಲಯ 'ಇಸ್ಲಾಮೋಫೋಬಿಯಾ' ದೂರ ಮಾಡುವ ಉದ್ದೇಶದಿಂದ ಆರಂಭಿಸಲಿರುವ ಈ ಹೊಸ ಟಿವಿ ವಾಹಿನಿ ಆರಂಭಿಸುವ ಮುಖ್ಯ ಉದ್ದೇಶ ಸೌದಿ ಅರೇಬಿಯಾವನ್ನು ಇಸ್ಲಾಮಿಕ್ ಜಗತ್ತಿ‌ನ ನಾಯಕತ್ವದಿಂದ ದೂರ ಸರಿಸಿ, ಆ ಸ್ಥಾನವನ್ನು ಎರ್ದೋಗನ್ ತುಂಬಲು ಸಹಕರಿಸುವುದೇ ಆಗಿದೆ ಎಂದಿದೆ.

ಜನವರಿ 2021ರಲ್ಲಿ ಪ್ರಕಟವಾದ ಎರಡನೇ ವರದಿಯಲ್ಲಿ, ಎಂಇಎಂಆರ್‌ಐ ಟರ್ಕಿ - ಪಾಕಿಸ್ತಾನಗಳ ಈ ಮೈತ್ರಿ ಪರಮಾಣು ವಲಯಕ್ಕೂ ಬೆಳೆಯಬಹುದು, ಟರ್ಕಿ ಪಾಕಿಸ್ತಾನದಿಂದ ಅಣ್ವಸ್ತ್ರ ತಂತ್ರಜ್ಞಾನ ಪಡೆಯಬಹುದು ಎಂಬ ಆತಂಕ ವ್ಯಕ್ತಪಡಿಸಿದೆ. ಎಂಇಎಂಆರ್‌ಐ ಟಿವಿ ವರದಿಯ ಪ್ರಕಾರ, ಎರ್ದೋಗನ್ 2019ರಲ್ಲಿ ಟರ್ಕಿ ಅಣ್ವಸ್ತ್ರ ಸಾಮರ್ಥ್ಯ ಹೊಂದಬಹುದು ಎಂದು ಹೇಳಿದ್ದರು.

ಪಾಕಿಸ್ತಾನ ಮತ್ತು ಚೀನಾ ಸಂಬಂಧ

ದಕ್ಷಿಣ ಏಷ್ಯಾದಲ್ಲಿ ಪಾಕಿಸ್ತಾನ ಚೀನಾದ ಪ್ರಮುಖ ಸಹಯೋಗಿಯಾಗಿದೆ. ಭಾರತಕ್ಕೆ ಅಡ್ಡಿಯಾಗಲು ಪಾಕಿಸ್ತಾನಕ್ಕೆ ಚೀನಾ ನೀಡುತ್ತಿರುವ ಬೆಂಬಲ ಈಗಾಗಲೇ ಎಲ್ಲರಿಗೂ ತಿಳಿದಿದೆ. ಚೀನಾ ಪಾಕಿಸ್ತಾನಕ್ಕೆ ಎಫ್ಎಟಿಎಫ್ ವಿಚಾರದಲ್ಲಿ ಹಲವು ಬಾರಿ ಬೆಂಬಲಿಸಿದೆ. 2022ರಲ್ಲಿ ಚೀನಾ ಪಾಕಿಸ್ತಾನವನ್ನು ಬೂದುಪಟ್ಟಿಯಿಂದ ಹೊರತರಲು ರಾಜತಾಂತ್ರಿಕ ಪ್ರಯತ್ನಗಳನ್ನೂ ನಡೆಸಿ, ಅದರಲ್ಲಿ ಯಶಸ್ವಿಯೂ ಆಗಿದೆ.

<strong>ಗಿರೀಶ್ ಲಿಂಗಣ್ಣ</strong>
ಗಿರೀಶ್ ಲಿಂಗಣ್ಣ

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com