ತಾನೇ ತಯಾರಿಸಿದ್ದ ಗನ್ ನಿಂದ ಶಿಂಜೊ ಅಬೆ ಕೊಂದ ಕೊಲೆಗಾರ, ನಿರುದ್ಯೋಗವೇ ಹತ್ಯೆಗೆ ಕಾರಣವಾಯ್ತಾ?

ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಕೊಂದ ಕೊಲೆಗಾರ ಅವರ ಹತ್ಯೆಗಾಗಿ ತಾನೇ ತಯಾರಿಸಿದ್ದ ಗನ್ ಬಳಕೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಶಿಂಜೋ ಅಬೆ ಹಂತಕ
ಶಿಂಜೋ ಅಬೆ ಹಂತಕ

ಟೋಕಿಯೊ: ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಕೊಂದ ಕೊಲೆಗಾರ ಅವರ ಹತ್ಯೆಗಾಗಿ ತಾನೇ ತಯಾರಿಸಿದ್ದ ಗನ್ ಬಳಕೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹೌದು.. ಹಾಡಹಗಲೇ ಜಪಾನ್ ಮಾಜಿ ಪ್ರಧಾನಿಯನ್ನು ನಡು ರಸ್ತೆಯಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಗುಂಡಿಟ್ಟು ಕೊಲ್ಲಲಾಗಿದ್ದು, ಹಂತಕನನ್ನು 41 ವರ್ಷದ ಟೆಟ್ಸುಯಾ ಯಮಗಾಮಿ ಎಂದು ಗುರುತಿಸಲಾಗಿದೆ. ಟೆಟ್ಸುಯಾ ಯಮಗಾಮಿ ನಿರುದ್ಯೋಗಿಯಾಗಿದ್ದು, ಈ ಹಿಂದೆ ಜಪಾನೀಸ್ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದ ಎನ್ನಲಾಗಿದೆ. ಈ ಜಪಾನೀಸ್ ನೌಕಾಪಡೆಯನ್ನು ಜಪಾನೀಸ್ ಮಾರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್ (JMSDF) ಎಂದು ಕರೆಯಲಾಗುತ್ತದೆ. ನೌಕಾಪಡೆ ಸೇವೆ ಬಳಿಕ ಯಮಗಾಮಿ ಕೆಲಸವಿಲ್ಲದೇ ಜೀವನ ಸಾಗಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಅಬೆ ಹತ್ಯೆ ನಡೆದ ಸಂದರ್ಭದಲ್ಲಿ ಶೂಟರ್ ಯಮಗಾಮಿ ಕೇವಲ 10 ಅಡಿ ದೂರದಲ್ಲಿದ್ದ. ಈತ ಮೊದಲ ಗುಂಡು ಹಾರಿಸಿದಾಗ ರಕ್ಷಣಾ ಸಿಬ್ಬಂದಿ ಅಲರ್ಟ್ ಆದರೂ ಅವರು ಕ್ರಮ ಕೈಗೊಳ್ಳುವಷ್ಟರಲ್ಲಿಯೇ ಯಮಗಾಮಿ 2ನೇ ಬುಲೆಟ್ ಹಾರಿಸಿದ್ದ. ಮೊದಲ ಬುಲೆಟ್ ಅಬೆಗೆ ಹಾನಿ ಮಾಡಲಿಲ್ಲವಾದರೂ, ಹಂತಕ ಹಾರಿಸಿದ ಎರಡನೇ ಬುಲೆಟ್ ನೇರವಾಗಿ ಅವರ ಎದೆ ಸೀಳಿತ್ತು. ಹೀಗಾಗಿ ಶಿಂಜೋ ಅಬೆ ಭಾಷಣದ ಮಧ್ಯೆಯೇ ವೇದಿಕೆಯ ಮೇಲೆ ಕುಸಿದು ಬಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿಗಳು ಯಮಗಾಮಿಯನ್ನು ನೆಲಕ್ಕೆ ಕೆಡವಿ ಅತನನ್ನು ಬಂಧಿಸಿದರು.

ತೀವ್ರ ರಕ್ತಸ್ರಾವದಿಂದ ಅಬೆ ಸಾವು
ಇನ್ನು ರಕ್ತ ಮಡುವಿನಲ್ಲಿ ಬಿದ್ದಿದ್ದ ಅಬೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ತೀವ್ರ ರಕ್ತ ಸ್ರಾವದಿಂದ ಬಳಲುತ್ತಿದ್ದರು. ಅಂತಿಮವಾಗಿ ಅಬೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದರು ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.

ಹಂತಕನೇ ತಯಾರಿಸಿದ್ದ ಬಂದೂಕು
ಜಪಾನ್ ನಲ್ಲಿ ಶಸ್ತ್ರಾಸ್ತ್ರ ಕಾನೂನುಗಳು ಅತ್ಯಂತ ಕಠಿಣವಾಗಿದ್ದು, ಯಾವುದೇ ವ್ಯಕ್ತಿ ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರ ಹೊಂದುವಂತಿಲ್ಲ. ಪರವಾನಗಿ ಕೂಡ ಜಪಾನ್ ನಲ್ಲಿ ಅಷ್ಟು ಸುಲಭವಾಗಿ ದೊರೆಯುವುದಿಲ್ಲ. ಇದೇ ಕಾರಣಕ್ಕೆ ಹಂತಕ ತಾನೇ ಬಂದೂಕು ತಯಾರಿಸಿಕೊಂಡಿದ್ದ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಚ್ಚರಿ ಎಂದರೆ ಅಬೆ ಕೊಲೆಯ ಬಳಿಕ ಹಂತಕ ಯಮಗಾಮಿ ಓಡಿ ಹೋಗಲೂ ಕೂಡ ಯತ್ನಿಸಿಲ್ಲ. ಕೂಡಲೇ ಆತನನ್ನು ಭದ್ರತಾ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಸ್ತುತ ಆತನನ್ನು ನಾರಾದ ನಿಶಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಹಂತಕ ಯಮಗಾಮಿ ಅಬೆ ಅವರನ್ನು ಕೊಲ್ಲುವ ಉದ್ದೇಶದಿಂದಲೇ ಗನ್ ತಯಾರಿಸಿಕೊಂಡು ಅವರ ಭಾಷಣ ನಡೆಯುತ್ತಿದ್ದ ಜಾಗಕ್ಕೆ ಬಂದಿದ್ದ. ಅಬೆ ಅವರ ವಿರುದ್ಧ ಆತ ಅತೃಪ್ತಿ ಹೊಂದಿದ್ದ ಎನ್ನಲಾಗಿದೆ.

ನೂರು ವರ್ಷಗಳಲ್ಲಿ ಮೊದಲ ಕೊಲೆ
ಇನ್ನು ಜಪಾನ್ ಇತಿಹಾಸದಲ್ಲೇ ಅಬೆ ಹತ್ಯೆ ಭಾರಿ ಸಂಚಲನ ಮೂಡಿಸಿದ್ದು, ಸುಮಾರು ನೂರು ವರ್ಷಗಳಲ್ಲಿ ಜಪಾನ್‌ನ ಹಾಲಿ ಅಥವಾ ಮಾಜಿ ಪ್ರಧಾನಿಯೊಬ್ಬರನ್ನು ಹತ್ಯೆ ಮಾಡಿರುವುದು ಇದೇ ಮೊದಲು ಎನ್ನಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com