ಪರಿಸ್ಥಿತಿ ನಿಯಂತ್ರಣಕ್ಕೆ ತನ್ನಿ: ಭದ್ರತಾ ಪಡೆಗಳಿಗೆ ಹಂಗಾಮಿ ಅಧ್ಯಕ್ಷ ವಿಕ್ರಮಸಿಂಘೆ ಆದೇಶ; ಸಿಂಗಾಪುರಕ್ಕೆ ಗೋಟಬಯ ಪ್ರಯಾಣ

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದಾಗಿ ಉಲ್ಬಣವಾಗಿರುವ ನಾಗರೀಕ ಸಂಘರ್ಷವನ್ನು ಶೀಘ್ರದಲ್ಲೇ ನಿಯಂತ್ರಣಕ್ಕೆ ತನ್ನಿ ಎಂದು ಶ್ರೀಲಂಕಾ ಭದ್ರತಾಪಡೆಗಳಿಗೆ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಆದೇಶ ನೀಡಿದ್ದಾರೆ.
ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ
ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ

ಕೊಲಂಬೋ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದಾಗಿ ಉಲ್ಬಣವಾಗಿರುವ ನಾಗರೀಕ ಸಂಘರ್ಷವನ್ನು ಶೀಘ್ರದಲ್ಲೇ ನಿಯಂತ್ರಣಕ್ಕೆ ತನ್ನಿ ಎಂದು ಶ್ರೀಲಂಕಾ ಭದ್ರತಾಪಡೆಗಳಿಗೆ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಆದೇಶ ನೀಡಿದ್ದಾರೆ.

ಹಂಗಾಮಿ ಅಧ್ಯಕ್ಷರಾಗಿ ನೇಮಕವಾದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಈ ಆದೇಶ ನೀಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. "ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಶಸ್ತ್ರ ಪಡೆಗಳು ಮತ್ತು ಪೊಲೀಸರಿಗೆ ಸೂಚನೆ ನೀಡಲಾಗಿದೆ'' ಎಂದು ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ ಎನ್ನಲಾಗಿದೆ.

ಆಕ್ರೋಶಭರಿತ ನಾಗರಿಕರ ಪ್ರತಿಭಟನೆಗೆ ಅಂಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ಮಾಲ್ಡೀವ್ಸ್ ಪರಾರಿಯಾದ ಬೆನ್ನಲ್ಲೇ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ವಿಚಾರವನ್ನು ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಘೋಷಿಸಿದ್ದರು. ಅಲ್ಲದೆ ಇಂತಹ ಅಧಿಕಾರ ಇದು ಸಂವಿಧಾನದ 37(1)ನೇ ಪರಿಚ್ಛೇದದ ಅಡಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಶ್ರೀಲಂಕಾದಲ್ಲಿ ಸರ್ಕಾರ ಆಂತರಿಕ ತುರ್ತು ಪರಿಸ್ಥಿತಿ ಹೇರಿದ್ದು, ಇದೀಗ ಪರಿಸ್ಥಿತಿಯನ್ನು ಆದಷ್ಟು ಬೇಗ ನಿಯಂತ್ರಿಸುವಂತೆ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಭದ್ರತಾ ಪಡೆಗಳಿಗೆ ಆದೇಶ ನೀಡಿದ್ದಾರೆ.

ಸಿಂಗಾಪುರದತ್ತ ಗೋಟಬಯ
ಇನ್ನು ಬಿಕ್ಕಟ್ಟುಪೀಡಿತ ಶ್ರೀಲಂಕಾದಿಂದ ಮಾಲ್ಡೀವ್ಸ್ ಪಲಾಯಗೈದಿದ್ದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ಇದೀಗ ಸಿಂಗಾಪುರದತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಶ್ರೀಲಂಕಾದ ‘ಡೈಲಿ ಮಿರರ್‌’ ಪತ್ರಿಕೆ ವರದಿ ಮಾಡಿದ್ದು,  ಶ್ರೀಲಂಕಾದ ವಾಯುಪಡೆಯ ವಿಮಾನದಲ್ಲಿ ಮಾಲೆಯ ವೆಲಾನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೋಟಬಯ ಇಳಿದಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ದೃಢಪಡಿಸಿದೆ. ಸದ್ಯ ಮಾಲ್ಡೀವ್ಸ್‌ನಲ್ಲಿ ಇರುವ ಗೊಟಬಯ ಇಂದು ರಾತ್ರಿ ಸಿಂಗಾಪುರಕ್ಕೆ ತೆರಳಲಿದ್ದಾರೆ ಎಂದು ವರದಿಯಾಗಿದೆ. 

ಹಂಗಾಮಿ ಅಧ್ಯಕ್ಷರ ನೇಮಕಕ್ಕೆ ತೀವ್ರ ವಿರೋಧ
ಇನ್ನು ಪಲಾಯನ ಗೈದಿರುವ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಹಂಗಾಮಿ ಅಧ್ಯಕ್ಷರನ್ನು ನೇಮಕ ಮಾಡಿರುವುದಕ್ಕೆ ಪ್ರತಿಭಟನಾಕಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಅಲ್ಲದೆ ಪ್ರಧಾನಿಯಾಗಿರುವ ವಿಕ್ರಮಸಿಂಘೆ ರಾಷ್ಟ್ರಪತಿ ಅಧಿಕಾರ ಚಲಾಯಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರು, 'ಪ್ರಧಾನಿಯವರು ರಾಷ್ಟ್ರಪತಿಯ ಅಧಿಕಾರವನ್ನು ಚಲಾಯಿಸಲು ಸಾಧ್ಯವಿಲ್ಲ.. ಕರ್ಫ್ಯೂ ಅಥವಾ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಅಧಿಕಾರ ಅವರಿಗಿಲ್ಲ. ರಾಷ್ಟ್ರಪತಿಗಳು ಅವರನ್ನು ನೇಮಿಸಿದರೆ ಅಥವಾ ಅಧ್ಯಕ್ಷರ ಕಚೇರಿ ಖಾಲಿಯಾಗಿದ್ದರೆ ಅಥವಾ ಸಿಜೆ ಸ್ಪೀಕರ್ ಅವರೊಂದಿಗೆ ಸಮಾಲೋಚಿಸಿ ರಾಷ್ಟ್ರಪತಿಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ರೂಪಿಸಿದರೆ ಮಾತ್ರ ಪ್ರಧಾನಿ ಹಂಗಾಮಿ ಅಧ್ಯಕ್ಷರಾಗುತ್ತಾರೆ ಎಂದು ಪ್ರೇಮದಾಸ ಟ್ವೀಟ್ ಮಾಡಿದ್ದಾರೆ.

ಗೋಟಬಯ ರಾಜಿನಾಮೆ ಪತ್ರ ಬಂದಿಲ್ಲ: ಸ್ಪೀಕರ್
ಇನ್ನು ಪರಾರಿಯಾದ ಅಧ್ಯಕ್ಷ ಗೋಟಬಯ ರಾಜಪಕ್ಸ ರಾಜಿನಾಮೆ ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಈ ವರೆಗೂ ಗೋಟಬಯ ರಾಜಿನಾಮೆ ಪತ್ರ ತಮಗೆ ಬಂದಿಲ್ಲ ಎಂದು ಶ್ರೀಲಂಕಾ ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಹೇಳಿದ್ದಾರೆ. "ನಾವು ಇನ್ನೂ ಅಧ್ಯಕ್ಷ ಗೋಟಾಬಯ ಅವರ ರಾಜೀನಾಮೆಯನ್ನು ಸ್ವೀಕರಿಸಿಲ್ಲ, ಆದರೆ ಒಂದು ದಿನದಲ್ಲಿ ನಾವು ಪಡೆಯುತ್ತೇವೆ ಎಂದು ನಾವು ಭಾವಿಸುತ್ತೇವೆ" ಎಂದು ಅಬೇವರ್ಧನ ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com