ಅಮೆರಿಕಾ: ರೇಥಿಯಾನ್ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷಾ ಪ್ರಯೋಗ ಯಶಸ್ವಿ!

ಹೈಪರ್ ಸಾನಿಕ್ ಆಯುಧಗಳು ಅತ್ಯಂತ ಎತ್ತರದ ವಾತಾವರಣದಲ್ಲಿ ಶಬ್ದದ ವೇಗಕ್ಕಿಂತ ಐದು ಪಟ್ಟಿಗೂ ಹೆಚ್ಚಿನ ವೇಗದಲ್ಲಿ ಅಥವಾ ಗಂಟೆಗೆ 6,200 ಕಿಲೋಮೀಟರ್ (3,853 ಮೈಲಿ) ವೇಗದಲ್ಲಿ ಚಲಿಸುತ್ತವೆ.
ರೇಥಿಯಾನ್ ಹೈಪರ್‌ಸಾನಿಕ್ ಕ್ಷಿಪಣಿ
ರೇಥಿಯಾನ್ ಹೈಪರ್‌ಸಾನಿಕ್ ಕ್ಷಿಪಣಿ

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಅಮೆರಿಕಾ ಇತ್ತೀಚೆಗೆ ತನ್ನ ರಕ್ಷಣಾ ಕ್ಷೇತ್ರದಲ್ಲಿ ಇನ್ನೊಂದು ಮಹತ್ತರ ಸಾಧನೆ ಮೆರೆದಿದೆ. ಅಮೆರಿಕಾ ರೇಥಿಯಾನ್ ಟೆಕ್ನಾಲಜೀಸ್ ಕಾರ್ಪೋರೇಷನ್ ಸಂಸ್ಥೆ ನಿರ್ಮಿಸಿರುವ, ಶಬ್ದದ ವೇಗಕ್ಕಿಂತ ಐದು ಪಟ್ಟು ಹೆಚ್ಚಿನ ವೇಗದಲ್ಲಿ ಸಾಗುವ ಏರ್ ಬ್ರೀದಿಂಗ್ ಹೈಪರ್ ಸಾನಿಕ್ ಕ್ಷಿಪಣಿಯನ್ನು (ಏರ್ ಬ್ರೀದಿಂಗ್ ಹೈಪರ್‌ಸಾನಿಕ್ ಇಂಜಿನ್ ವಾತಾವರಣದಲ್ಲಿರುವ ಆಮ್ಲಜನಕವನ್ನು ಉಪಯೋಗಿಸಿಕೊಳ್ಳುತ್ತದೆ. ಆ ಕಾರಣದಿಂದ ಅದಕ್ಕೆ ಭೂಮಿಯಿಂದ ಆಮ್ಲಜನಕ ಒಯ್ಯುವ ಅಗತ್ಯವಿರುವುದಿಲ್ಲ. ಇದು ವಾಹನದ ಭಾರವನ್ನು ಬಹುಮಟ್ಟಿಗೆ ಕಡಿತಗೊಳಿಸುತ್ತದೆ) ಯಶಸ್ವಿಯಾಗಿ ಪರೀಕ್ಷಾ ಉಡಾವಣೆ ನಡೆಸಿದೆ. ಇದು 2013ರ ಬಳಿಕ ನಡೆದ ಈ ವರ್ಗದ ಮೂರನೇ ಯಶಸ್ವಿ ಉಡಾವಣೆಯಾಗಿದ್ದು, ಈ ಪ್ರಯೋಗ ಅತ್ಯಂತ ಯಶಸ್ವಿಯಾಗಿದೆ ಎಂದು ಅಮೆರಿಕಾದ ರಕ್ಷಣಾ ಪ್ರಧಾನ ಕಚೇರಿ ಪೆಂಟಗಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಹೈಪರ್‌ಸಾನಿಕ್ ಏರ್ - ಬ್ರೀದಿಂಗ್ ವೆಪನ್ ಕಾನ್ಸೆಪ್ಟ್ (ಎಚ್‌ಎಡಬ್ಲ್ಯುಸಿ) ಅನ್ನು ಡಿಫೆನ್ಸ್ ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ ಅಥವಾ ಡಿಎಆರ್‌ಪಿಎ ನಿರ್ವಹಿಸುತ್ತಾ ಬಂದಿದೆ. ರೇಥಿಯಾನ್ ಹಾಗೂ ಲಾಕ್‌ಹೀಡ್ ಮಾರ್ಟಿನ್ ಗ್ರೂಪ್ ಎರಡೂ ಸಂಸ್ಥೆಗಳೂ ಸಹ ಈ ಕ್ಷೇತ್ರದಲ್ಲಿ ಅಂತಿಮ ಒಪ್ಪಂದ ಪಡೆದುಕೊಳ್ಳಲು ಸ್ಪರ್ಧೆಗೆ ಬಿದ್ದಂತೆ ಕಾರ್ಯ ನಿರ್ವಹಿಸುತ್ತಾ ಬಂದಿವೆ.

ಈ ಏರ್ ಬ್ರೀದಿಂಗ್ ಆಯುಧಗಳು ವಾತಾವರಣದಿಂದ ಪಡೆದುಕೊಳ್ಳುವ ಗಾಳಿಯನ್ನು ಉಪಯೋಗಿಸಿ, ನಿರಂತರವಾಗಿ ಬಲವರ್ಧಿಸಿಕೊಳ್ಳುತ್ತವೆ. ನಿರ್ವಾತ ಮತ್ತು ಆಕಾಶದಲ್ಲಿ ಬೇರೆ ಬೇರೆ ಬಗೆಯ ಈ ಒತ್ತಡಗಳು ಕಾಣಿಸಿಕೊಳ್ಳುತ್ತವೆ.

ಅಮೆರಿಕಾದಲ್ಲಿ ಕಳೆದ ಸೆಪ್ಟೆಂಬರ್ ತಿಂಗಳ ಬಳಿಕ ನಾಲಕ್ಕು ಏರ್ ಬ್ರೀದಿಂಗ್ ಹೈಪರ್ ಸಾನಿಕ್ ಆಯುಧಗಳ ಪರೀಕ್ಷಾ ಪ್ರಯೋಗಗಳು ನಡೆದಿವೆ. ರೇಥಿಯಾನ್ ತಯಾರಿಸಿದ ಆಯುಧ ಎರಡು ಬಾರಿ ಯಶಸ್ವಿಯಾಗಿ ಪ್ರಯೋಗಿಸಲ್ಪಟ್ಟಿದ್ದು, ಲಾಕ್‌ಹೀಡ್ ಸಂಸ್ಥೆಯ ಎರಡು ಪ್ರಯೋಗಗಳಲ್ಲಿ ಒಂದು ಯಶಸ್ವಿಯಾದರೆ, ಇನ್ನೊಂದು ವೈಫಲ್ಯ ಕಂಡಿತ್ತು.

"ಅಮೆರಿಕಾದ ಹೈಪರ್ ಸಾನಿಕ್ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದು ಒಂದು ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಯ ವಿಚಾರವಾಗಿದೆ. ಆ ನಿಟ್ಟಿನಲ್ಲಿ ಇದು ಒಂದು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ. ಒಂದರ ನಂತರ ಒಂದರಂತೆ ಸತತ ಯಶಸ್ವಿ ಪರೀಕ್ಷಾ ಹಾರಾಟ ಪ್ರಯೋಗಗಳು ನಮಗೆ ಎಚ್‌ಎಡಬ್ಲ್ಯುಸಿ ಮಾದರಿಯ ಸಾಮರ್ಥ್ಯದ ಕುರಿತು ಹೆಚ್ಚಿನ ವಿಶ್ವಾಸ ಮೂಡಿಸಿದೆ" ಎಂದು ರೇಥಿಯಾನ್ ಸಂಸ್ಥೆಯ ಮಿಸೈಲ್ಸ್ ಮತ್ತು ಡಿಫೆನ್ಸ್ ಬಿಸಿ಼ನೆಸ್ ವಿಭಾಗದ ಅಧ್ಯಕ್ಷರಾದ ವೆಸ್ ಕ್ರೆಮರ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಪರೀಕ್ಷಾ ಪ್ರಯೋಗದ ಸಂದರ್ಭದಲ್ಲಿ, ರೇಥಿಯಾನ್ ತನ್ನ ಎಚ್‌ಎಡಬ್ಲ್ಯುಸಿ ಆಯುಧವನ್ನು ಒಂದು ವಿಮಾನದಿಂದ ಉಡಾಯಿಸಿತು. ಆ ಬಳಿಕ ಒಂದು ಸ್ಕ್ರ್ಯಾಮ್ ಜೆಟ್ ಇಂಜಿನ್ ಬಳಸಿ ಅದನ್ನು ಹೈಪರ್ ಸಾನಿಕ್ ವೇಗಕ್ಕೆ ತಲುಪುವಂತೆ ಮಾಡಲಾಯಿತು.

"ಈ ವಾಹನವು ಈ ಮೊದಲು ಇಂಜಿನಿಯರ್‌ಗಳು ಉದ್ದೇಶಪೂರ್ವಕವಾಗಿ ಅದರ ಮೇಲೆ ಒತ್ತಡ ಹೇರಿ, ಅದರ ಇತಿಮಿತಿಗಳನ್ನು, ಸಾಮರ್ಥ್ಯವನ್ನು ಪರೀಕ್ಷಿಸಲು ನಿರ್ಧರಿಸಿದ ಪಥದಲ್ಲೇ ಹಾರಾಟ ನಡೆಸಿತು. ಇದು ಮುಂದಿನ ಡಿಜಿಟಲ್ ಪರ್ಫಾಮೆನ್ಸ್ ಮಾದರಿಗಳಿಗೆ ಬೆಂಬಲ ನೀಡುತ್ತದೆ" ಎಂದು ರೇಥಿಯಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಹಾರಾಟದ ಯಶಸ್ಸು ಅಮೆರಿಕಾ ನಡೆಸುತ್ತಿರುವ ವಿವಿಧ ಹೈಪರ್ ಸಾನಿಕ್ ಆಯುಧಗಳ ಪರೀಕ್ಷೆಯಲ್ಲಿ ಮೂರನೇ ಯಶಸ್ವಿ ಪರೀಕ್ಷಾ ಪ್ರಯೋಗ ಎನಿಸಿಕೊಂಡಿದೆ. ಜೂನ್ 29 ರಂದು, ಒಂದು ಬೇರೆ ಮಾದರಿಯ ಹೈಪರ್ ಸಾನಿಕ್ ಆಯುಧ, ಕಾಮನ್ ಹೈಪರ್ ಸಾನಿಕ್ ಗ್ಲೈಡ್ ಬಾಡಿ ಹವಾಯಿಯ ಪೆಸಿಫಿಕ್ ಮಿಸೈಲ್ ರೇಂಜ್ ನಲ್ಲಿ ನಡೆದ ಪರೀಕ್ಷಾ ಪ್ರಯೋಗದಲ್ಲಿ ವಿಫಲವಾಯಿತು. ಆ ಬಳಿಕ ನಡೆದ ಎರಡೂ ಹೈಪರ್ ಸಾನಿಕ್ ಪರೀಕ್ಷಾ ಪ್ರಯೋಗಗಳು ಯಶಸ್ವಿಯಾಗಿ ನಡೆದವು.

ಅಮೆರಿಕಾ ಮತ್ತು ಅದರ ಜಾಗತಿಕ ಎದುರಾಳಿಗಳು ತಮ್ಮ ಹೈಪರ್ ಸಾನಿಕ್ ಆಯುಧಗಳ ನಿರ್ಮಾಣದ ವೇಗವನ್ನು ಹೆಚ್ಚಿಸಲು ಸತತವಾಗಿ ಪ್ರಯತ್ನಿಸುತ್ತಿವೆ. ಈ ಮುಂದಿನ ತಲೆಮಾರಿನ ಆಯುಧಗಳು ತಮ್ಮ ಎದುರಾಳಿಗಳಿಗೆ ಪ್ರತಿಕ್ರಿಯಿಸಲು ಸಮಯಾವಕಾಶವನ್ನೇ ಕೊಡದೆ, ಅತ್ಯಂತ ವೇಗವಾಗಿ ದಾಳಿ ನಡೆಸಬಲ್ಲವು.

ಹೈಪರ್ ಸಾನಿಕ್ ಆಯುಧಗಳು ಅತ್ಯಂತ ಎತ್ತರದ ವಾತಾವರಣದಲ್ಲಿ ಶಬ್ದದ ವೇಗಕ್ಕಿಂತ ಐದು ಪಟ್ಟಿಗೂ ಹೆಚ್ಚಿನ ವೇಗದಲ್ಲಿ ಅಥವಾ ಗಂಟೆಗೆ 6,200 ಕಿಲೋಮೀಟರ್ (3,853 ಮೈಲಿ) ವೇಗದಲ್ಲಿ ಚಲಿಸುತ್ತವೆ. ಆದ್ದರಿಂದ ಈ ವೇಗದ ಅನುಕೂಲವನ್ನು ಹೊಂದಲು ಹೈಪರ್ ಸಾನಿಕ್ ಆಯುಧಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ.

<strong>ಗಿರೀಶ್ ಲಿಂಗಣ್ಣ </strong>
ಗಿರೀಶ್ ಲಿಂಗಣ್ಣ 

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com