ಕಾಶ್ಮೀರದಲ್ಲಿ ಜಿ20 ಶೃಂಗ ಸಭೆ ನಡೆಸುವ ಭಾರತದ ಯೋಜನೆಯನ್ನು ನಾವು ತಿರಸ್ಕರಿಸುತ್ತೇವೆ: ಪಾಕಿಸ್ತಾನ

2023ರ ಜಿ20 ರಾಷ್ಟ್ರಗಳ ಶೃಂಗ ಸಭೆಯನ್ನು ಜಮ್ಮು ಕಾಶ್ಮೀರದಲ್ಲಿ ನಡೆಸುವ ಭಾರತದ ಪ್ರಯತ್ನವನ್ನು ತಿರಸ್ಕರಿಸುವುದಾಗಿ ಪಾಕಿಸ್ತಾನ ಶನಿವಾರ ಹೇಳಿದೆ. ಜಿ20 ಸದಸ್ಯರು ಕಾನೂನು ಮತ್ತು ನ್ಯಾಯದ ಅವಶ್ಯಕತೆಗಳನ್ನು...
ಅಸಿಮ್ ಇಫ್ತಿಕರ್ ಅಹ್ಮದ್
ಅಸಿಮ್ ಇಫ್ತಿಕರ್ ಅಹ್ಮದ್

ಇಸ್ಲಾಮಾಬಾದ್: 2023ರ ಜಿ20 ರಾಷ್ಟ್ರಗಳ ಶೃಂಗ ಸಭೆಯನ್ನು ಜಮ್ಮು ಕಾಶ್ಮೀರದಲ್ಲಿ ನಡೆಸುವ ಭಾರತದ ಪ್ರಯತ್ನವನ್ನು ತಿರಸ್ಕರಿಸುವುದಾಗಿ ಪಾಕಿಸ್ತಾನ ಶನಿವಾರ ಹೇಳಿದೆ. ಜಿ20 ಸದಸ್ಯರು ಕಾನೂನು ಮತ್ತು ನ್ಯಾಯದ ಅವಶ್ಯಕತೆಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳುತ್ತಾರೆ ಮತ್ತು ಪ್ರಸ್ತಾಪವನ್ನು ಸಂಪೂರ್ಣವಾಗಿ ವಿರೋಧಿಸುತ್ತಾರೆ ಎಂದು ಆಶಿಸುವುದಾಗಿ ಪಾಕ್ ವಿದೇಶಾಂಗ ಕಚೇರಿ ಹೇಳಿದೆ.

ಇಸ್ಲಾಮಾಬಾದ್ ಭಾರತೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಸುದ್ದಿಗಳನ್ನು ಗಮನಿಸಿದ್ದು, ಭಾರತವು "ಜಮ್ಮು ಮತ್ತು ಕಾಶ್ಮೀರದಲ್ಲಿ ಜಿ 20 ಸಂಬಂಧಿತ ಸಭೆಯನ್ನು ನಡೆಸಲು ಚಿಂತನೆ ನಡೆಸುತ್ತಿದೆ" ಎಂದು ಹೇಳಲಾಗುತ್ತಿದೆ. ಭಾರತದ ಇಂತಹ ಯಾವುದೇ ಪ್ರಯತ್ನವನ್ನು ಪಾಕಿಸ್ತಾನ ಸಂಪೂರ್ಣವಾಗಿ ತಿರಸ್ಕರಿಸುತ್ತದೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರ ಅಸಿಮ್ ಇಫ್ತಿಕರ್ ಅಹ್ಮದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರವು ಪಾಕಿಸ್ತಾನ ಮತ್ತು ಭಾರತದ ನಡುವೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ "ವಿವಾದಿತ" ಪ್ರದೇಶವಾಗಿದೆ ಮತ್ತು ಈ ವಿಚಾರ ಏಳು ದಶಕಗಳಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯಸೂಚಿಯಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ನಡೆಯಲಿರುವ ಮೊದಲ ಜಿ20 ಶೃಂಗಸಭೆಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಆಯೋಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಕೇಂದ್ರಾಡಳಿತ ಪ್ರದೇಶದ ಆಡಳಿತವು ಗುರುವಾರ ಜಿ20 ಸಭೆಯ ಒಟ್ಟಾರೆ ಸಮನ್ವಯಕ್ಕಾಗಿ ಐದು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

ಸಂವಿಧಾನದ 370ನೇ ವಿಧಿ ರದ್ದಾದ ನಂತರ ಮತ್ತು ಆಗಸ್ಟ್ 2019 ರಲ್ಲಿ ಕಣಿವೆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ನಂತರ ಕಾಶ್ಮೀರದಲ್ಲಿ ನಡೆಯಲಿರುವ ಮೊದಲ ಪ್ರಮುಖ ಅಂತಾರಾಷ್ಟ್ರೀಯ ಶೃಂಗಸಭೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com