ಲಂಡನ್ ನಲ್ಲಿ ಕೂಚುಪುಡಿ ನೃತ್ಯ ಮಾಡಿ ಮನಸೆಳೆದ ರಿಷಿ ಸುನಕ್ ಮಗಳು ಅನೌಷ್ಕಗೆ ಭಾರತ ಎಂದರೆ ಬಹಳ ಅಚ್ಚುಮೆಚ್ಚು!

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಹಿರಿಯ ಪುತ್ರಿ ಅನೌಷ್ಕ ಸುನಕ್ ಲಂಡನ್ ನಲ್ಲಿ ನಿನ್ನೆ ಇತರ ಮಕ್ಕಳೊಂದಿಗೆ ಕೂಚುಪುಡಿ ನೃತ್ಯ ಮಾಡಿರುವ ವಿಡಿಯೊ ಹರಿದಾಡುತ್ತಿದೆ. ಇಂಗ್ಲೆಂಡಿನ ಅಂತಾರಾಷ್ಟ್ರೀಯ ಕೂಚುಪುಡಿ ನೃತ್ಯ ಉತ್ಸವ 2022ರ ಭಾಗವಾದ 'ರಂಗ್' ನಲ್ಲಿ 9 ವರ್ಷದ ಅನೌಷ್ಕ ಸುನಕ್ ಪ್ರದರ್ಶನ ನೀಡಿ ಮನಸೂರೆಗೊಂಡಿದ್ದಾಳೆ.
ವೇದಿಕೆಯಲ್ಲಿ ಅನೌಷ್ಕ ಕೂಚುಪುಡಿ ನೃತ್ಯ
ವೇದಿಕೆಯಲ್ಲಿ ಅನೌಷ್ಕ ಕೂಚುಪುಡಿ ನೃತ್ಯ

ನವದೆಹಲಿ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಹಿರಿಯ ಪುತ್ರಿ ಅನೌಷ್ಕ ಸುನಕ್ ಲಂಡನ್ ನಲ್ಲಿ ನಿನ್ನೆ ಇತರ ಮಕ್ಕಳೊಂದಿಗೆ ಕೂಚುಪುಡಿ ನೃತ್ಯ ಮಾಡಿರುವ ವಿಡಿಯೊ ಹರಿದಾಡುತ್ತಿದೆ. ಇಂಗ್ಲೆಂಡಿನ ಅಂತಾರಾಷ್ಟ್ರೀಯ ಕೂಚುಪುಡಿ ನೃತ್ಯ ಉತ್ಸವ 2022ರ ಭಾಗವಾದ 'ರಂಗ್' ನಲ್ಲಿ 9 ವರ್ಷದ ಅನೌಷ್ಕ ಸುನಕ್ ಪ್ರದರ್ಶನ ನೀಡಿ ಮನಸೂರೆಗೊಂಡಿದ್ದಾಳೆ.

4ರಿಂದ 85 ವರ್ಷದೊಳಗಿನ ಸಂಗೀತಗಾರರು, ಹಿರಿಯ ಸಮಕಾಲೀನ ನೃತ್ಯ ಕಲಾವಿದರು, ಗಾಲಿಕುರ್ಚಿ ನೃತ್ಯಗಾರ್ತಿಯರು, ಪೋಲೆಂಡ್‌ನ ನಟರಂಗ್ ಗ್ರೂಪ್‌ನ ಅಂತಾರಾಷ್ಟ್ರೀಯ ಬರ್ಸರಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 100 ಕಲಾವಿದರು ಕಾರ್ಯಕ್ರಮದ ಭಾಗವಾಗಿದ್ದರು.

ತಮ್ಮ ಪುತ್ರಿಯ ನೃತ್ಯ ಕಾರ್ಯಕ್ರಮಕ್ಕೆ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ, ರಿಷಿ ಸುನಕ್ ಅವರ ಪೋಷಕರು ಹಾಜರಾಗಿದ್ದರು. 

ರಿಷಿ ಸುನಕ್ ಇಂಗ್ಲೆಂಡಿನ 57 ನೇ ಪ್ರಧಾನ ಮಂತ್ರಿಯಾಗಿದ್ದು, ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ ಮೂಲದ ವ್ಯಕ್ತಿ. 42 ನೇ ವಯಸ್ಸಿನಲ್ಲಿ, ಸುನಕ್ ಅವರು ಪ್ರಧಾನಿಯಾಗುವ ಮೂಲಕ ಕಳೆದ 200 ವರ್ಷಗಳಲ್ಲಿ ಅತ್ಯಂತ ಕಿರಿಯ ಬ್ರಿಟಿಷ್ ಪ್ರಧಾನಿಯಾಗಿದ್ದಾರೆ. ದೇಶದ ಅತ್ಯುನ್ನತ ಹುದ್ದೆ ಏರಿದ ಹಿಂದೂ ಆಗಿದ್ದು, ತಮ್ಮ ಕಚೇರಿಯ ಡೆಸ್ಕ್ ಮೇಲೆ ಗಣೇಶನ ವಿಗ್ರಹವನ್ನಿರಿಸಿಕೊಂಡಿದ್ದಾರೆ.

ಅನೌಷ್ಕಾ ನೃತ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈಕೆಯ ನೃತ್ಯ ಕಂಡ ಭಾರತೀಯರು ಸಂತಸ ವ್ಯಕ್ತಪಡಿಸಿದ್ದಾರೆ. ವಿದೇಶದಲ್ಲೂ ಭಾರತೀಯ ಕಲೆಯನ್ನು ಕರಗತ ಮಾಡಿಕೊಂಡು ನೃತ್ಯ ಪ್ರದರ್ಶನ ಮಾಡಿದ್ದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಮಾತನಾಡಿಸಿದಾಗ ಅನೌಷ್ಕ, ಭಾರತ ದೇಶವು ನನ್ನ ಕುಟುಂಬ, ಮನೆ ಮತ್ತು ಸಂಸ್ಕೃತಿಯೊಟ್ಟಿಗೆ ಬೆರೆತಿದೆ, ನಾನು ಪ್ರತಿ ವರ್ಷ ಅಲ್ಲಿಗೆ ಹೋಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾಳೆ.

ಇಂಗ್ಲಿಷ್ ವಾಹಿನಿಯೊಂದ ಜೊತೆ ಮಾತನಾಡಿ, ನಾನು ಕೂಚಿಪುಡಿ ಮತ್ತು ನೃತ್ಯವನ್ನು ಪ್ರೀತಿಸುತ್ತೇನೆ, ನೃತ್ಯ ಮಾಡುವಾಗ ನಿಮ್ಮ ಎಲ್ಲಾ ಚಿಂತೆಗಳು ಮತ್ತು ಒತ್ತಡಗಳು ದೂರವಾಗುತ್ತವೆ ನಾನು ವೇದಿಕೆಯಲ್ಲಿ ನಿಂತು ಡ್ಯಾನ್ಸ್ ಮಾಡಲು ಇಚ್ಛಿಸುತ್ತೇನೆ, ಪಕ್ಕದಲ್ಲಿ ಸ್ನೇಹಿತರು, ಕುಟುಂಬಸ್ಥರು ಇದ್ದಾಗ ಖುಷಿಯಾಗುತ್ತದೆ ಎಂದಿದ್ದಾಳೆ.

ಭಾರತವು ನಾನು ಬಂದ ದೇಶವಾಗಿದೆ. ಇದು ಕುಟುಂಬ, ಮನೆ ಮತ್ತು ಸಂಸ್ಕೃತಿ ಒಟ್ಟಿಗೆ ಬೆರೆತಿರುವ ಸ್ಥಳವಾಗಿದೆ. ನಾನು ಪ್ರತಿ ವರ್ಷ ಅಲ್ಲಿಗೆ ಹೋಗಲು ಇಷ್ಟಪಡುತ್ತೇನೆ ಎಂದಿದ್ದಾಳೆ.

ರಂಗ್ 2022 ಪ್ರದರ್ಶನವನ್ನು ಸಂಯೋಜಿಸಿದ ಅರುಣಿಮಾ ಕುಮಾರ್, “ವಿವಿಧ ವಯಸ್ಸಿನ ಮತ್ತು ಸಾಮರ್ಥ್ಯದ ಕಲಾವಿದರನ್ನು ಪ್ರದರ್ಶಿಸುವುದು ರಂಗ್ 2022 ರ ದೃಷ್ಟಿಯಾಗಿದೆ. ನಮ್ಮಲ್ಲಿ ಬಹಳಷ್ಟು ಜನರಿಗೆ ಪ್ರದರ್ಶನ ನೀಡಲು ಅವಕಾಶಗಳು ಸಿಗುತ್ತವೆ. ಇಲ್ಲಿ ಮಕ್ಕಳಿದ್ದಾರೆ, ಹಿರಿಯರಿದ್ದಾರೆ, ವಿಶೇಷ ಸಾಮರ್ಥ್ಯದ ಜನರಿದ್ದಾರೆ, ಆದ್ದರಿಂದ ರಂಗ್ ನಿಜವಾಗಿಯೂ ಕೂಚಿಪುಡಿಯ ಬಣ್ಣಗಳನ್ನು ಮತ್ತು ಭಾರತೀಯ ನೃತ್ಯದ ಬಣ್ಣಗಳನ್ನು ಆಚರಿಸುತ್ತಿದೆ ಎನ್ನುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com