ಬ್ರಿಟನ್ ನ ನಿಯೋಜಿತ ಪ್ರಧಾನಿ ರಿಷಿ ಸುನಕ್ ಕುಟುಂಬದ ಮೂಲ ಪಾಕಿಸ್ತಾನದ್ದೆಂದು ಹೇಳಿ: ಪಾಕ್ ಸರ್ಕಾರಕ್ಕೆ ಅಲ್ಲಿನ ನೆಟ್ಟಿಗರ ಆಗ್ರಹ
ರಿಷಿ ಸುನಕ್ ಬ್ರಿಟನ್ ನ ಮೊದಲ ಹಿಂದೂ, ಭಾರತೀಯ ಮೂಲ ಹೊಂದಿರುವ ಪ್ರಧಾನಿಯಾಗಿ ನಿಯುಕ್ತಿಗೊಂಡಿದ್ದು, ಭಾರತ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳು ಸಂತಸ ವ್ಯಕ್ತಪಡಿಸಿವೆ.
Published: 24th October 2022 11:13 PM | Last Updated: 25th October 2022 02:54 PM | A+A A-

ರಿಷಿ ಸುನಕ್
ನವದೆಹಲಿ: ರಿಷಿ ಸುನಕ್ ಬ್ರಿಟನ್ ನ ಮೊದಲ ಹಿಂದೂ, ಭಾರತೀಯ ಮೂಲ ಹೊಂದಿರುವ ಪ್ರಧಾನಿಯಾಗಿ ನಿಯುಕ್ತಿಗೊಂಡಿದ್ದು, ಭಾರತ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳ ಮಂದಿ ಸಂತಸ ವ್ಯಕ್ತಪಡಿಸಿದ್ದಾರೆ.
ರಿಷಿ ಸುನಕ್ ಅವರ ಮೂಲ ಭಾರತ ಎಂದೇ ಹೇಳಲಾಗುತ್ತಿದ್ದರೂ, ಸುನಕ್ ಅವರ ಪೂರ್ವಜರು (ಅಜ್ಜ-ಅಜ್ಜಿ) ಬ್ರಿಟೀಷ್ ಆಳ್ವಿಕೆಯಲ್ಲಿದ್ದ ಭಾರತದಲ್ಲಿದ್ದವರಾಗಿದ್ದರು. ಆದರೆ ಅವರು ವಾಸಿಸುತ್ತಿದ್ದ ಪ್ರಾಂತ್ಯ ಅಂದಿನ ಅವಿಭಜಿತ ಭಾರತದ, ಇಂದಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯವಾಗಿತ್ತು. ಈ ಆಯಾಮದಿಂದ ಬ್ರಿಟನ್ ನ ಹೊಸ ಪ್ರಧಾನಿ ಒಂದು ರೀತಿಯಲ್ಲಿ ಭಾರತೀಯರೂ ಹೌದು, ಪಾಕಿಸ್ತಾನಿಯೂ ಹೌದು ಎಂಬಂತಾಗಿದೆ.
ಈವರೆಗೂ ರಿಷಿ ಸುನಕ್ ಅವರ ಪೂರ್ವಜರ ವಿವರಗಳು ಸ್ಪಷ್ಟವಾಗಿ ಲಭ್ಯವಿಲ್ಲದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: ಬ್ರಿಟನ್ ನ ಮೊದಲ ಹಿಂದೂ ಪ್ರಧಾನಿ ರಿಷಿ ಸುನಕ್ ಗೆ ಭಾರತದೊಂದಿಗೆ ಇರುವ ನಂಟೇನು!
ಸುನಕ್ ಗಳು ಈಗ ಪಾಕಿಸ್ತಾನದಲ್ಲಿರುವ ಗುರ್ಜನ್ವಾಲಾ ಪಂಜಾಬಿ ಖತ್ರಿ ಕುಟುಂಬದವರಾಗಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಕ್ವೀನ್ ಲಯನೆಸ್ 86 "ರಿಷಿ ಅವರ ಅಜ್ಜ ರಾಮದಾಸ್ ಸುನಕ್ ಅವರು ನೈರೋಬಿಯಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸಲು ಗುರ್ಜನ್ವಾಲವನ್ನು 1935 ರಲ್ಲಿ ತೊರೆದರು ರಾಮ್ ದಾಸ್ ಅವರ ಪತ್ನಿ ಸುಹಾಗ್ ರಾಣಿ ಸುನಕ್ ಅವರು ಕೀನ್ಯಾಗೆ ತೆರಳುವುದಕ್ಕೂ ಮುನ್ನ ಗುರ್ಜನ್ವಾಲಾದಿಂದ ದೆಹಲಿಗೆ 1935 ರಲ್ಲಿ ತೆರಳಿದರು.
ಆದರೆ ಈ ವರೆಗೂ ಪಾಕಿಸ್ತಾನದಲ್ಲಿ ರಿಷಿ ಸುನಕ್ ಬಗ್ಗೆ ಯಾವುದೇ ರೀತಿಯ ಅಧಿಕೃತ ಹೇಳಿಕೆಗಳೂ ಬಂದಿಲ್ಲವಾದರೂ ಕೆಲವರು ಸರ್ಕಾರ ರಿಷಿ ಸುನಕ್ ಗೂ ಪಾಕ್ ಗೂ ಇರುವ ಸಂಬಂಧವನ್ನು ಹೇಳಿಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.