ಪಾಕಿಸ್ತಾನದಲ್ಲಿನ ನೂರಾರು ಪ್ರವಾಹ ಪೀಡಿತರಿಗೆ ಆಹಾರ, ಆಶ್ರಯ ಒದಗಿಸಿದ ಹಿಂದೂ ದೇವಾಲಯ!

ಪಾಕಿಸ್ತಾನದಾದ್ಯಂತ ಲಕ್ಷಾಂತರ ಜನರು ಭೀಕರ ಪ್ರವಾಹದಿಂದಾಗಿ ನಿರಾಶ್ರಿತರಾಗಿರುವಾಗ ಬಲೂಚಿಸ್ತಾನದ ಪುಟ್ಟ ಹಳ್ಳಿಯೊಂದರಲ್ಲಿ ಹಿಂದೂ ದೇವಾಲಯವೊಂದು ಪ್ರವಾಹ ಪೀಡಿತ ಸುಮಾರು 200 ರಿಂದ 300 ಜನರಿಗೆ ಆಹಾರ ಮತ್ತು ಆಶ್ರಯವನ್ನು ನೀಡುವ ಮೂಲಕ ಸುದ್ದಿಯಾಗಿದೆ.
ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಜಫರಾಬಾದ್‌ನಲ್ಲಿ ಪ್ರವಾಹಕ್ಕೆ ಒಳಗಾದ ಪ್ರದೇಶದಿಂದ ಸ್ಥಳಾಂತರಗೊಳ್ಳುತ್ತಿರುವ ಕುಟುಂಬ
ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಜಫರಾಬಾದ್‌ನಲ್ಲಿ ಪ್ರವಾಹಕ್ಕೆ ಒಳಗಾದ ಪ್ರದೇಶದಿಂದ ಸ್ಥಳಾಂತರಗೊಳ್ಳುತ್ತಿರುವ ಕುಟುಂಬ
Updated on

ಕರಾಚಿ: ಪಾಕಿಸ್ತಾನದಾದ್ಯಂತ ಲಕ್ಷಾಂತರ ಜನರು ಭೀಕರ ಪ್ರವಾಹದಿಂದಾಗಿ ನಿರಾಶ್ರಿತರಾಗಿರುವಾಗ ಬಲೂಚಿಸ್ತಾನದ ಪುಟ್ಟ ಹಳ್ಳಿಯೊಂದರಲ್ಲಿ ಹಿಂದೂ ದೇವಾಲಯವೊಂದು ಪ್ರವಾಹ ಪೀಡಿತ ಸುಮಾರು 200 ರಿಂದ 300 ಜನರಿಗೆ ಆಹಾರ ಮತ್ತು ಆಶ್ರಯವನ್ನು ನೀಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.

ಕಚ್ಚಿ ಜಿಲ್ಲೆಯ ಜಲಾಲ್ ಖಾನ್ ಗ್ರಾಮದಲ್ಲಿ ಎತ್ತರದ ಭೂಮಿಯ ಮೇಲೆ ನೆಲೆಸಿರುವ ಬಾಬಾ ಮಧೋದಾಸ್ ಮಂದಿರವು ಪ್ರವಾಹದ ಸುಳಿಗೆ ಸಿಲುಕದೆ ಸುರಕ್ಷಿತವಾಗಿದೆ. ಹೀಗಾಗಿ ಪ್ರವಾಹ ಪೀಡಿತ ಜನರಿಗೆ ನೆರವಿನ ಹಸ್ತ ಚಾಚುತ್ತಿದೆ.

ನಾರಿ, ಬೋಲನ್ ಮತ್ತು ಲೆಹ್ರಿ ನದಿಗಳ ಪ್ರವಾಹದಿಂದಾಗಿ ಈ ಗ್ರಾಮವು ಪ್ರಾಂತ್ಯದ ಉಳಿದ ಭಾಗಗಳಿಂದ ಸಂಪರ್ಕ ಕಡಿತಗೊಂಡಿದೆ. ಸ್ಥಳೀಯ ಹಿಂದೂ ಸಮುದಾಯವು ಪ್ರವಾಹ ಪೀಡಿತ ಜನರಿಗೆ ಮತ್ತು ಅವರ ಜಾನುವಾರುಗಳಿಗೆ ಬಾಬಾ ಮಧೋದಾಸ್ ಮಂದಿರದ ಬಾಗಿಲುಗಳನ್ನು ತೆರೆದಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಸ್ಥಳೀಯರ ಪ್ರಕಾರ, ಬಾಬಾ ಮಧೋದಾಸ್ ಅವರು ವಿಭಜನಾಪೂರ್ವ ಹಿಂದೂ ಸಂತರಾಗಿದ್ದರು, ಈ ಪ್ರದೇಶದ ಮುಸ್ಲಿಮರು ಮತ್ತು ಹಿಂದೂಗಳು ಸಮಾನವಾಗಿ ಇವರನ್ನು ಆರಾಧಿಸುತ್ತಾರೆ. 'ಅವರು ಒಂಟೆಯ ಮೇಲೆ ಪ್ರಯಾಣಿಸುತ್ತಿದ್ದರು' ಎಂದು ಭಾಗ್ ನಾರಿ ತಹಸಿಲ್‌ನಿಂದ ಗ್ರಾಮಕ್ಕೆ ಆಗಾಗ್ಗೆ ಭೇಟಿ ನೀಡುವ ಇಲ್ತಾಫ್ ಬುಜ್ದಾರ್ ಹೇಳುತ್ತಾರೆ.

ಬುಜ್ದಾರ್ ಅವರ ಹೆತ್ತವರು ಹೇಳಿರುವ ಕಥೆಗಳ ಪ್ರಕಾರ, ಆ ಸಂತನು ಧಾರ್ಮಿಕ ಗಡಿಗಳನ್ನು ಮೀರಿದ್ದನು. ಅವರು ತಮ್ಮ ಜಾತಿ ಮತ್ತು ಧರ್ಮದ ಬದಲಿಗೆ ಮಾನವೀಯತೆಯ ಕಾರ್ಯಗಳ ಮೂಲಕ ಜನರ ಬಗ್ಗೆ ಯೋಚಿಸುತ್ತಿದ್ದರು' ಎಂದು ತಿಳಿಸಿದ್ದಾರೆ.

ಬಲೂಚಿಸ್ತಾನದಾದ್ಯಂತ ಹಿಂದೂಗಳು ಆಗಾಗ್ಗೆ ಬರುವ ಈ ಪೂಜಾ ಸ್ಥಳವು ಕಾಂಕ್ರೀಟ್‌ನಿಂದ ಮಾಡಲ್ಪಟ್ಟಿದೆ ಮತ್ತು ದೊಡ್ಡ ಪ್ರದೇಶವನ್ನು ಒಳಗೊಂಡಿದೆ. ಇದು ಎತ್ತರದ ನೆಲದಲ್ಲಿ ನೆಲೆಗೊಂಡಿರುವುದರಿಂದ, ಪ್ರವಾಹದಿಂದ ಸುರಕ್ಷಿತವಾಗಿ ಉಳಿದಿದೆ.

ಜಲಾಲ್ ಖಾನ್‌ನಲ್ಲಿರುವ ಹಿಂದೂ ಸಮುದಾಯದ ಹೆಚ್ಚಿನ ಸದಸ್ಯರು ಉದ್ಯೋಗ ಮತ್ತು ಇತರ ಅವಕಾಶಗಳಿಗಾಗಿ ಕಚ್ಚಿಯ ಇತರ ನಗರಗಳಿಗೆ ವಲಸೆ ಹೋಗಿದ್ದಾರೆ, ಆದರೆ ದೇಗುಲವನ್ನು ನೋಡಿಕೊಳ್ಳಲೆಂದೇ ಒಂದೆರಡು ಕುಟುಂಬಗಳು ಮಾತ್ರ ದೇವಾಲಯದ ಆವರಣದಲ್ಲಿಯೇ ಉಳಿದಿವೆ ಎಂದು ವರದಿ ತಿಳಿಸಿದೆ.

ಭಾಗ್ ನಾರಿ ತಹಸಿಲ್‌ನ ಅಂಗಡಿಯ ಮಾಲೀಕ ರತ್ತನ್ ಕುಮಾರ್ (55) ಅವರು ಸದ್ಯ ದೇವಾಲಯದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಬಲೂಚಿಸ್ತಾನ ಮತ್ತು ಸಿಂಧ್‌ ಪ್ರಾಂತ್ಯದಿಂದ ಹೆಚ್ಚಿನ ಸಂಖ್ಯೆಯ ಜನರು ಪ್ರತಿವರ್ಷ ತೀರ್ಥಯಾತ್ರೆಗೆ ಇಲ್ಲಿಗೆ ಬರುತ್ತಾರೆ. ಹೀಗಾಗಿಯೇ ದೇವಸ್ಥಾನದಲ್ಲಿ ನೂರಕ್ಕೂ ಹೆಚ್ಚು ಕೊಠಡಿಗಳಿವೆ.

ರತ್ತನ್ ಅವರ ಪುತ್ರ ಸಾವನ್ ಕುಮಾರ್ ಮಾತನಾಡಿ, ಪ್ರವಾಹದಿಂದ ಕೆಲವು ಕೊಠಡಿಗಳು ಹಾನಿಗೊಳಗಾಗಿವೆ. ಆದರೆ, ಒಟ್ಟಾರೆಯಾಗಿ ದೇವಾಲಯದ ರಚನೆಯು ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ.

ಕನಿಷ್ಠ 200-300 ಜನರು, ಹೆಚ್ಚಾಗಿ ಮುಸ್ಲಿಮರು ಮತ್ತು ಅವರ ಜಾನುವಾರುಗಳಿಗೆ ಆವರಣದಲ್ಲಿ ಆಶ್ರಯ ನೀಡಲಾಗಿದೆ ಮತ್ತು ಇವರನ್ನು ಹಿಂದೂ ಕುಟುಂಬಗಳು ನೋಡಿಕೊಳ್ಳುತ್ತವೆ. ಆರಂಭದಲ್ಲಿ, ಈ ಪ್ರದೇಶವು ಜಿಲ್ಲೆಯ ಉಳಿದ ಭಾಗಗಳಿಂದ ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿತ್ತು ಎಂದು ವರದಿ ಹೇಳಿದೆ.

'ಸ್ಥಳೀಯರಲ್ಲದೆ, ಈ ದೇಗುಲದಲ್ಲಿ ಹಿಂದೂಗಳು ಇತರ ಪ್ರಾಣಿಗಳೊಂದಿಗೆ ಆಡುಗಳು ಮತ್ತು ಕುರಿಗಳಿಗೂ ಇಲ್ಲಿ ಆಶ್ರಯ ನೀಡಿದ್ದಾರೆ. 'ಸ್ಥಳೀಯ ಹಿಂದೂಗಳು ಧ್ವನಿವರ್ಧಕದಲ್ಲಿ ಘೋಷಣೆ ಕೂಗಿದರು, ಮುಸ್ಲಿಮರು ಆಶ್ರಯ ಪಡೆಯಲು ದೇವಸ್ಥಾನಕ್ಕೆ ಧಾವಿಸುವಂತೆ ಕರೆ ನೀಡಿದರು ಎಂದು ದೇವಾಲಯದ ಒಳಗೆ ವೈದ್ಯಕೀಯ ಶಿಬಿರವನ್ನು ಸ್ಥಾಪಿಸಿರುವ ಜಲಾಲ್ ಖಾನ್‌ನ ವೈದ್ಯ ಇಸ್ರಾರ್ ಮುಗೇರಿ ಹೇಳಿದರು.

ಈ ಕಷ್ಟದ ಸಮಯದಲ್ಲಿ ಅವರ ಸಹಾಯಕ್ಕೆ ಬಂದ ಮತ್ತು ಅವರಿಗೆ ಆಹಾರ ಮತ್ತು ವಸತಿ ಒದಗಿಸಿದ್ದಕ್ಕಾಗಿ ಸ್ಥಳೀಯ ಹಿಂದೂ ಸಮುದಾಯಕ್ಕೆ ಋಣಿಯಾಗಿದ್ದೇವೆ ಎಂದು ಅಲ್ಲಿ ಆಶ್ರಯ ಪಡೆದವರು ಹೇಳುತ್ತಾರೆ.

ಪ್ರವಾಹದಲ್ಲಿ ಸುಮಾರು 1,400 ಜನರು ಮೃತಪಟ್ಟಿದ್ದಾರೆ. ಪ್ರವಾಹವು ದೇಶದ ಮೂರನೇ ಒಂದು ಭಾಗವನ್ನು ಮುಳುಗಿಸಿದೆ, ಬೆಳೆಗಳನ್ನು ನಾಶಪಡಿಸಿದೆ ಮತ್ತು 33 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ.

ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್, ಪ್ರವಾಹದಿಂದ ತತ್ತರಿಸಿರುವ ಪಾಕಿಸ್ತಾನಕ್ಕೆ ಭವಿಷ್ಯದ ವಿಪತ್ತುಗಳನ್ನು ಎದುರಿಸಲು ಚೇತರಿಸಿಕೊಳ್ಳಲು ಸಮುದಾಯಗಳು ಮತ್ತು ಮೂಲಸೌಕರ್ಯಗಳನ್ನು ಪುನರ್ನಿರ್ಮಿಸಲು ಸಹಾಯ ಮಾಡುವ ಪ್ರಯತ್ನಗಳನ್ನು ಹೆಚ್ಚಿಸುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಶನಿವಾರ ಕರೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com