ಚಂದ್ರಯಾನ-2 ವಿಫಲಗೊಂಡಿದ್ದಕ್ಕೆ ಇಸ್ರೋವನ್ನು ಅಣಕಿಸಿದ್ದ ಪಾಕಿಸ್ತಾನದ ನಾಯಕ ಈಗ ಹೇಳಿದ್ದಿಷ್ಟು...

ಚಂದ್ರಯಾನ-2 ಯೋಜನೆ ವಿಫಲವಾದ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು (ಇಸ್ರೋ) ಲೇವಡಿ ಮಾಡಿದ್ದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮಾಜಿ ನಾಯಕ ಫವಾದ್ ಚೌಧರಿ, ಬುಧವಾರ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗಿದ್ದಕ್ಕೆ ಇಸ್ರೋವನ್ನು ಅಭಿನಂದಿಸಿದ್ದಾರೆ.
ಪಾಕಿಸ್ತಾನದ ನಾಯಕ ಫವಾದ್ ಚೌಧರಿ
ಪಾಕಿಸ್ತಾನದ ನಾಯಕ ಫವಾದ್ ಚೌಧರಿ

ಇಸ್ಲಾಮಾಬಾದ್: ಚಂದ್ರಯಾನ-2 ಯೋಜನೆ ವಿಫಲವಾದ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು (ಇಸ್ರೋ) ಲೇವಡಿ ಮಾಡಿದ್ದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮಾಜಿ ನಾಯಕ ಫವಾದ್ ಚೌಧರಿ, ಬುಧವಾರ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗಿದ್ದಕ್ಕೆ ಇಸ್ರೋವನ್ನು ಅಭಿನಂದಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಚಂದ್ರಯಾನ-3 ಯಶಸ್ವಿಯಾಗಿದೆ. ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಇಳಿದಿರುವುದು ಇಸ್ರೋಗೆ ಉತ್ತಮ ಕ್ಷಣವಾಗಿದೆ. ಈ ಕ್ಷಣವನ್ನು ಇಸ್ರೋ ಅಧ್ಯಕ್ಷ ಸೋಮನಾಥ್ ಅವರೊಂದಿಗೆ ಅನೇಕ ಯುವ ವಿಜ್ಞಾನಿಗಳು ಸಂಭ್ರಮಿಸುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಕನಸುಗಳಿರುವ ಯುವ ಪೀಳಿಗೆ ಮಾತ್ರ ಈ ಜಗತ್ತನ್ನು ಬದಲಾಯಿಸಬಹುದು. ಶುಭವಾಗಲಿ' ಎಂದು ಬರೆದಿದ್ದಾರೆ.

ಚಂದ್ರಯಾನ-3 ಯೋಜನೆ ಯಶಸ್ವಿಯಾಗುವುದಕ್ಕೂ ಮುನ್ನವೇ ಟ್ವೀಟ್ ಮಾಡಿದ್ದ ಅವರು, 'ಪಾಕ್ ಮಾಧ್ಯಮಗಳು ನಾಳೆ ಸಂಜೆ 6.15ಕ್ಕೆ ಚಂದ್ರಯಾನ-3 ಮೂನ್ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ನೇರಪ್ರಸಾರ ಮಾಡಬೇಕು. ಮಾನವಕುಲಕ್ಕೆ ವಿಶೇಷವಾಗಿ ಜನರು, ವಿಜ್ಞಾನಿಗಳು ಮತ್ತು ಭಾರತದ ಬಾಹ್ಯಾಕಾಶ ಸಮುದಾಯಕ್ಕೆ ಇದೊಂದು ಐತಿಹಾಸಿಕ ಕ್ಷಣವಾಗಿದೆ. ಅಭಿನಂದನೆಗಳು' ಎಂದು ಹೇಳಿದ್ದರು.

2019 ರಲ್ಲಿ, ಇಸ್ರೋ ಇನ್ನೇನು ಚಂದ್ರನ ಅಂಗಳದಲ್ಲಿ ಇಳಿಯಬೇಕು ಎನ್ನುವ ನಿಗದಿತ ಸಮಯಕ್ಕೆ ನಿಮಿಷಗಳ ಮೊದಲು ಚಂದ್ರಯಾನ-2 ಲ್ಯಾಂಡರ್‌ನೊಂದಿಗೆ ಸಂಪರ್ಕ ಕಳೆದುಕೊಂಡಿತ್ತು. ನಂತರ, ಚೌಧರಿ ಭಾರತವನ್ನು ಲೇವಡಿ ಮಾಡಿದ್ದರು. ಚಂದ್ರಯಾನ-2 ಯೋಜನೆಗಾಗಿ 900 ಕೋಟಿ ರೂಪಾಯಿ ಖರ್ಚು ಮಾಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬುದ್ಧಿವಂತಿಕೆಯನ್ನು ಪ್ರಶ್ನಿಸಿದ್ದ ಅವರು, ಇಷ್ಟೊಂದು ಖರ್ಚು ಮಾಡಿ ಅಜ್ಞಾತ ಪ್ರದೇಶಕ್ಕೆ ಹೋಗುವುದು ಅವಿವೇಕದ ಸಂಗತಿ ಎಂದಿದ್ದರು.

ಈ ವೇಳೆ ಅವರು ಭಾರತವನ್ನು ಅಪಹಾಸ್ಯ ಮಾಡಿದ್ದಷ್ಟೇ ಅಲ್ಲದೆ, '#IndiaFailed' ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಸಹ ಬಳಸಿದ್ದರು. 

ಆಗಸ್ಟ್ 23ರ ಬುಧವಾರ ಸಂಜೆ 6.04 ನಿಮಿಷಕ್ಕೆ ಸರಿಯಾಗಿ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡ್ ರೋವರ್ ಇಳಿದಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿದ ಮೊದಲ ದೇಶವೆಂಬ ಹೆಗ್ಗಳಿಕೆ ಭಾರತದ ಪಾಲಾಗಿದೆ. ಇಸ್ರೋ ಚಂದ್ರಯಾನ-3 ನೌಕೆಯನ್ನು ಜುಲೈ 14ರಂದು ಉಡಾವಣೆ ಮಾಡಿತ್ತು.

ಆದಾಗ್ಯೂ, ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡರ್ ಇಳಿಸಿದ ಮೊದಲ ದೇಶವಾಗಿ ಭಾರತ ಬುಧವಾರ ಹೊರಹೊಮ್ಮಿದ್ದು, ಭಾರತದ ಬಾಹ್ಯಾಕಾಶ ಸಂಶೋಧನೆಯ ಬಗ್ಗೆ ಪಾಕಿಸ್ತಾನದ ಮಾಜಿ ಸಚಿವರ ದೃಷ್ಟಿಕೋನಗಳು ಬದಲಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com