ಬೀಜಿಂಗ್: ಚೀನಾದಲ್ಲಿ ಕೋವಿಡ್ ನ ಸೋಂಕು ಮತ್ತಷ್ಟು ಆತಂಕ ಮೂಡಿಸುತ್ತಿದೆ. ಸೋಂಕಿತರ ಸಂಖ್ಯೆ ನಿಖರವಾಗಿ ಲಭ್ಯವಾಗಗಿದ್ದರೂ ಚೀನಾದಲ್ಲಿ ಕೋವಿಡ್ ನಿಂದಾಗಿ ಖ್ಯಾತ ನಾಮರು, ಸಾರ್ವಜನಿಕ ವಲಯದಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಮಂದಿ ಸಾವನ್ನಪ್ಪುತ್ತಿರುವುದು ಆತಂಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ.
40 ವರ್ಷದ ಒಪೇರಾ ಹಾಡುಗಾರ ಚು ಲನ್ಲನ್ ಸಾವನ್ನಪ್ಪಿದ್ದು, ಹಲವರಿಗೆ ಇದು ಅಘಾತ ಉಂಟುಮಾಡಿದೆ ಎಂದು ಬಿಬಿಸಿ ವರದಿ ಪ್ರಕಟಿಸಿದೆ. ಆಕೆಯ ಕುಟುಂಬದವರು ಸಾವಿಗೆ ಕಾರಣವನ್ನು ಈ ವರೆಗೂ ಬಹಿರಂಗಪಡಿಸಿಲ್ಲ.
ಕೋವಿಡ್ ಸೋಂಕು ವಿಪರೀತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾ ಡಿಸೆಂಬರ್ ನಲ್ಲಿ ತನ್ನ ಶೂನ್ಯ ಕೋವಿಡ್ ನೀತಿಯನ್ನು ವಾಪಸ್ ಪಡೆದಿದೆ. ಕೋವಿಡ್ ಸೋಂಕು ಹೆಚ್ಚುತ್ತಿರುವುದರ ಪರಿಣಾಮ ಚೀನಾದಲ್ಲಿ ಆಸ್ಪತ್ರೆಗಳು ಹಾಗೂ ಚಿತಾಗಾರಗಳು ತುಂಬಿ ತುಳುಕುತ್ತಿವೆ.
ಕೋವಿಡ್ ನಿರ್ವಹಣೆಯಲ್ಲಿ ಚೀನಾದ ಆರೊಗ್ಯ ವ್ಯವಸ್ಥೆ ಕುಸಿಯುತ್ತಿದ್ದು, ಅಲ್ಲಿ ಕೋವಿಡ್ ನ ದಿನನಿತ್ಯದ ಸೋಂಕು ಪತ್ತೆ ಸಂಖ್ಯೆಯ ಪ್ರಕಟಣೆಯನ್ನೂ ನಿಲ್ಲಿಸಲಾಗಿದೆ.
ಬುಧವಾರದಂದು ವಿಶ್ವಸಂಸ್ಥೆ ಚೀನಾ ದೇಶವನ್ನು ಕೋವಿಡ್ ನ ನೈಜ ಪರಿಣಾಮವನ್ನು ಮರೆಮಾಚುತ್ತಿದ್ದು, ಸಾವಿನ ವಿಷಯದಲ್ಲಿ ನಿರ್ದಿಷ್ಟವಾಗಿ ಮುಚ್ಚಿಡುತ್ತಿದೆ ಎಂದು ಎಚ್ಚರಿಸಿತ್ತು.
ಡಿಸೆಂಬರ್ 21 ರಿಂದ 26 ವರೆಗೂ ಚೀನಾದಲ್ಲಿ ಉನ್ನತ ವಿಜ್ಞಾನ ಮತ್ತು ಎಂಜಿನಿಯರಿಂಗ್ ಅಕಾಡೆಮಿಗಳ ಹಿನ್ನೆಲೆ ಹೊಂದಿದ 16 ಮಂದಿ ಉನ್ನತ ವಿಜ್ಞಾನಿಗಳು ಸಾವನ್ನಪ್ಪಿದ್ದಾರೆ. ಆದರೆ ಈ ಪೈಕಿ ಯಾರೊಬ್ಬರ ಸಾವೂ ಕೋವಿಡ್ ನೊಂದಿಗೆ ಸಂಬಂಧಿಸಿಲ್ಲ ಎಂದು ಹೇಳಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಆದರೆ ಚು ಲನ್ಲನ್ ನಂತಹ ಅನೇಕ ಜನಪ್ರಿಯ ವ್ಯಕ್ತಿಗಳ ಸಾವು, ಚೀನಾ ಕೋವಿಡ್ ಸಾವು ಸಂಖ್ಯೆಯನ್ನು ಮುಚ್ಚಿಡುತ್ತಿದೆಯೇ? ಎಂಬ ಅನುಮಾನಗಳನ್ನು ಮೂಡಿಸಿದೆ.
ಇನ್ನು ಇದಕ್ಕೂ ಮುನ್ನ ಹೊಸ ವರ್ಷಾಚರಣೆಯ ದಿನದಂದು ನಟ ಗಾಂಗ್ ಜಿನ್ತಾಂಗ್ ನಿಧನವೂ ಚೀನಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು.
Advertisement