ಅಮೆರಿಕಾ ಪೊಲೀಸರ ಹೊಡೆತಕ್ಕೆ ಮತ್ತೊಬ್ಬ ಕಪ್ಪುವರ್ಣೀಯ ಸಾವು: ವ್ಯಾಪಕ ಆಕ್ರೋಶ

ಅಮೆರಿಕಾದಲ್ಲಿ ಪೊಲೀಸರ ಹೊಡೆತಕ್ಕೆ ಮತ್ತೊಬ್ಬ ಕಪ್ಪುವರ್ಣೀಯ ಮೃತಪಟ್ಟಿದ್ದು, ಘಟನೆ ಸಂಬಂಧ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದೆ.
ಟೈರ್ ನಿಕೊಲಸ್
ಟೈರ್ ನಿಕೊಲಸ್

ಮೆಂಫಿಸ್: ಅಮೆರಿಕಾದಲ್ಲಿ ಪೊಲೀಸರ ಹೊಡೆತಕ್ಕೆ ಮತ್ತೊಬ್ಬ ಕಪ್ಪುವರ್ಣೀಯ ಮೃತಪಟ್ಟಿದ್ದು, ಘಟನೆ ಸಂಬಂಧ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದೆ.

ಮೃತ ವ್ಯಕ್ತಿಯನ್ನು ಟೈರ್ ನಿಕೊಲಸ್ ಎಂದು ಗುರ್ತಿಸಲಾಗಿದೆ. ಪೊಲೀಸರು ನಿಕೋಲಸ್ ಅವರ ಮುಖಕ್ಕೆ ಗುದ್ದಿದ್ದು, ಬೂಟುಗಾಲಿನಿಂದ ಒದ್ದಿದ್ದಾರೆ. ಅಲ್ಲದೆ, ಲಾಠಿ ಚಾರ್ಜ್ ಮಾಡಿದ್ದು, ಹೊಡೆತದ ನೋವು ತಾಳಲಾರದೆ ನಿಕೋಲಸ್ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಸಾಯುವ ಮುನ್ನ ನಿಕೋಲಸ್ ಅಮ್ಮ ಎಂದು ಕೂಗಿದ್ದು, ಆತನ ಕೂಗು ಜನರ ಮನಸ್ಸನ್ನು ಕಲಕಿಸಿದೆ.

ಈ ನಡುವೆ ಮೆಂಫಿಸ್ ಅಧಿಕಾರಿಗಳು ಘಟನೆಯ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಹಲ್ಲೆ ನಡೆಸಿರುವ ಪೊಲೀಸರು ಕಪ್ಪುವರ್ಣಿಯರೇ ಆಗಿರುವುದು ಕಂಡು ಬಂದಿದೆ.

ಪೊಲೀಸರು ನಿಕೊಲಸ್​ನನ್ನು ಬೆನ್ನಟ್ಟುವುದು, ಒಂದು ಕಾರ್​ಗೆ ಅವನನ್ನು ಒರಗಿಸಿ ಥಳಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ನಿಕೊಲಸ್ ಇದ್ದ ಕಾರನ್ನು ಪೊಲೀಸ್ ಸಿಬ್ಬಂದಿಯೊಬ್ಬರು ತಡೆದಿದ್ದು, ನಂತರ ಅವರನ್ನು ಹೊರಗೆ ಎಳೆದಿದ್ದಾರೆ. ‘ನಾನೇನೂ ಮಾಡಿಲ್ಲ’ ಎಂದು ನಿಕೊಲಸ್ ಕೂಡಿದ್ದು, ಈ ವೇಳೆ ಪೊಲೀಸರ ಗುಂಪು ಆತನನ್ನು ಸುತ್ತುಗಟ್ಟಿ ಥಳಿಸಲು ಆರಂಭಿಸಿದ್ದಾರೆ. ನಿಕೊಲಸ್​ನನ್ನು ಹಿಡಿದಿದ್ದ ಪೊಲೀಸ್ ‘ಗುಂಡು ಹೊಡಿ’ ಎಂದು ಕೂಗಿದ್ದು, ಈ ವೇಳೆ ಮಾತನಾಡಿರುವ ವ್ನಿಕೋಲಸ್ ‘ನಾನು ಈಗಾಗಲೇ ಕೆಳಗಿದ್ದೇನೆ’ ಎಂದು ಹೇಳಿದ್ದಾನೆ.

‘ನಾನೇನೂ ತಪ್ಪು ಮಾಡಿಲ್ಲ. ಮನೆಗೆ ಹೋಗ್ತಿದ್ದೀನಿ. ನೀವು ಇತ್ತೀಚೆಗೆ ತುಂಬಾ ಒಳ್ಳೇದು ಮಾಡ್ತಿದ್ದೀರಿ. ನಿಲ್ಲಿಸಿ, ನಾನೇನೂ ಮಾಡಿಲ್ಲ’ ಎಂದು ನಿಕೊಲಸ್ ಕೂಗಿದ್ದಾನೆ. ಈ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರು ಸ್ಟನ್​ಗನ್​ನಿಂದ ಗುಂಡು ಹಾರಿಸಿದಾಗ ಹೆದರಿದ ನಿಕೊಲಸ್ ಓಡಲು ಆರಂಭಿಸಿದರು. ಬೆನ್ನಟ್ಟಿದ ಪೊಲೀಸರು ಮನಸೋಯಿಚ್ಛೆ ಥಳಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಈ ನಡುವೆ ನಿಕೊಲಸ್ ಸಾವು ಖಂಡಿಸಿ ಅಮೆರಿಕದಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ನಿಕೊಲಸ್ ತಾಯಿ ‘ಶಾಂತಿ ಕಾಪಾಡಿ’ ಎಂದು ಪ್ರತಿಭಟನಾನಿರತರಿಗೆ ಮನವಿ ಮಾಡಿದ್ದಾರೆ.

‘ನಮ್ಮ ನಗರದಲ್ಲಿ ಹಿಂಸಾಚಾರ ನಡೆಯುವುದು ನನಗೆ ಬೇಕಿಲ್ಲ. ನೀವು ನಿಕೊಲಸ್ ಪರವಾಗಿದ್ದೀರಿ ಎಂದಾದರೆ ದಯವಿಟ್ಟು ಶಾಂತಿಯುತವಾಗಿ ಪ್ರತಿಭಟಿಸಿ ಎಂದು ಹೇಳಿದ್ದಾರೆ.

ಘಟನೆ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ನಿಕೊಲಸ್ ತಾಯಿಯೊಂದಿಗೆ ಮಾತನಾಡಿದ್ದು, ಈ ವಿಚಾರವನ್ನು ಅಮೆರಿಕದ ಪ್ರಜಾಪ್ರತಿನಿಧಿ ಸಭೆಯಲ್ಲಿ ಪ್ರಸ್ತಾಪಿಸುವ ಭರವಸೆ ನೀಡಿದ್ದಾರೆ. ಅಲ್ಲದೆ, ಶೀಘ್ರದಲ್ಲೇ ‘ಜಾರ್ಜ್​ಫ್ಲಾಯ್ಡ್​ ಕಾಯ್ದೆ’ ಜಾರಿಗೊಳಿಸುವುದಾಗಿ ಹೇಳಿದ್ದಾರೆ.

ಈ ಕಾಯ್ದೆ ಜಾರಿಗೆ ಬಂದಿದ್ದೇ ಆದರೆ, ಅಮೆರಿಕದಲ್ಲಿ ಪೊಲೀಸರು ನಡೆಸುವ ಹಿಂಸಾಚಾರಕ್ಕೆ ಕಡಿವಾಣ ಬೀಳಲಿದೆ.

ಅಮೆರಿಕಾ ಪೊಲೀಸರ ವಶದಲ್ಲಿದ್ದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್  ಎಂಬುವರು 2021ರಲ್ಲಿ ಸಾವನ್ನಪ್ಪಿದ್ದರು. ಫ್ಲಾಯ್ಡ್‌ ಸಾವಿಗೀಡಾಗುವ ಮೊದಲು ಅವರ ಕತ್ತನ್ನು ಬಿಳಿಯ ಪೊಲೀಸ್‌ ಅಧಿಕಾರಿ ಡೆರೆಕ್‌ ಚೌವಿನ್‌ 9 ನಿಮಿಷ ಮೊಣಕಾಲಿನಿಂದ ಅದುಮಿದ್ದರು. ಫ್ಲಾಯ್ಡ್‌ ಸಾವು ವ್ಯಾಪಕ ಪ್ರತಿಭಟನೆ, ಹಿಂಸಾಚಾರಕ್ಕೆ ಕಾರಣವಾಗಿತ್ತು. ಜನಾಂಗೀಯ ಭೇದದ ವಿರುದ್ಧ ಆಕ್ರೋಶಕ್ಕೂ ಇದು ದಾರಿ ಮಾಡಿಕೊಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com